Saturday, December 14, 2024
Homeಸಮಾಚಾರ ನೋಟವ್ಯಕ್ತಿ ಚಿತ್ರಣದಿನೇಶ್‌ ಅಮಿನ್‌ ಮಟ್ಟುಗೆ ಅಂಬೇಡ್ಕರ್ ಪ್ರಶಸ್ತಿ

ದಿನೇಶ್‌ ಅಮಿನ್‌ ಮಟ್ಟುಗೆ ಅಂಬೇಡ್ಕರ್ ಪ್ರಶಸ್ತಿ

‘ನನಗೆ ಪತ್ರಿಕೋದ್ಯಮದಲ್ಲಿ ರೋಲ್ ಮಾಡಲ್ ಅಂತ ಯಾರಾದ್ರೂ ಇದ್ದರೆ ಅವರು ಬಾಬಾಸಾಹೇಬ್ ಅಂಬೇಡ್ಕರ್ ಮಾತ್ರ’

ಇಂಥ ಹೇಳಿಕೆ ನೀಡಿದವರು ಹಿರಿಯ ಪತ್ರಕರ್ತ ದಿನೇಶ್‌ ಅಮೀನ್‌ ಮಟ್ಟು ಅವರು. ಅದಕ್ಕೆ ಸರಿಯಾಗಿ ಡಾ.ಬಿ.ಆರ್‌. ಅಂಬೇಡ್ಕರ್‌ ಪ್ರಶಸ್ತಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಮಟ್ಟು ಅವರನ್ನೇ ಆಯ್ಕೆ ಮಾಡಿದೆ.

ಡಾ.ಬಿ.ಆರ್‌. ಅಂಬೇಡ್ಕರ್‌ ಈ ನೆಲದ ನಿಜ ಸಮಸ್ಯೆಯನ್ನು ಹೋಗಲಾಡಿಸಲು ನಿರಂತರ ಹೋರಾಟ, ಕಾನೂನು ಹೋರಾಟಗಳನ್ನು ಮಾಡುತ್ತಲೇ ನಿಯಮ ರೂಪಕರೂ ಆಗಿದ್ದರು. ಇವೆಲ್ಲದರ ಜತೆಗೆ ಅವರು ಪತ್ರಕರ್ತರಷ್ಟೇ ಆಗಿದ್ದಲ್ಲ, ಮಾದರಿ ಪತ್ರಕರ್ತರೂ ಆಗಿದ್ದರು. ಅಂಥ ಅಂಬೇಡ್ಕರ್‌ ಅವರನ್ನೇ ಮಾದರಿಯಾಗಿ ಸ್ವೀಕರಿಸಿದವರ ಹಾದಿ ಖಂಡಿತವಾಗಿ ಆದರ್ಶದ ಹಾದಿಯೇ ಆಗಿರುತ್ತದೆ. ಮಟ್ಟು ಸಾಗಿ ಬಂದ ದಾರಿ ನೋಡಿದಾಗ ಅದು ನಿಜವೂ ಹೌದು.

ಕೋಮುವಿರೋಧಿ, ಮೂಲಭೂತವಾದಿ ವಿರೋಧಿ ನಿಲುವು, ಜಾತಿವಾದದ ವಿರುದ್ಧದ ಧ್ವನಿಗಳನ್ನು ಹೊಂದಿದ್ದ ಮಟ್ಟು ಅವರು ವೈಚಾರಕ ಸ್ಪಷ್ಟತೆ ಇರುವವರು. ಹಾಗಾಗಿಯೇ ಕಿರಿಯರೆಲ್ಲರಿಗೂ ಅವರು ಮಾದರಿ ಆಗಿದ್ದಾರೆ.

ಅಸಮಾನತೆಯ, ಜಾತಿವಾದದ, ಜಾತಿ ಮೇಲರಿಮೆಯ ರಾಜಕೀಯವನ್ನು ಸಂಸ್ಕೃತಿಯ ಹೆಸರಲ್ಲಿ ಲೇಖನಗಳ ಮೂಲಕ ಉಳಿಸಿಕೊಳ್ಳಲು ಪ್ರಯತ್ನಿಸುವ ಕಿಡಿಗೇಡಿ ಬರಹಗಾರರಿಗೆ, ಪತ್ರಕರ್ತರಿಗೆ ಮಾತ್ರ ಮಟ್ಟು ಅವರನ್ನು ಕಂಡರಾಗದು. ಸತ್ಯವನ್ನು ಹೇಳಲು ಹಿಂಜರಿಕೆ ಇಲ್ಲದ ಪತ್ರಕರ್ತನಿಗೆ ವಿರೋಧಿಗಳು ಜಾಸ್ತಿ ಇದ್ದೇ ಇರುತ್ತಾರೆ. ಮಟ್ಟು ಕೂಡ ಇದರಿಂದ ಹೊರತಲ್ಲ.

ಅಂಬೇಡ್ಕರ್ ಅವರ ಹೆಸರಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಈ ವರ್ಷದಿಂದ ರಾಜ್ಯಮಟ್ಟದ ಪ್ರತಿಷ್ಠಿತ ದತ್ತಿ ಪ್ರಶಸ್ತಿಯನ್ನು ಕೊಡಮಾಡುತ್ತಿದೆ. ಬಾಗಲಕೋಟೆ ‘ಸುದಿನ’ ಪತ್ರಿಕೆಯ ಸಂಪಾದಕ ಸುಭಾಷ್ ಹೊದ್ಲೂರ್ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ 2.50 ಲಕ್ಷ ರೂಪಾಯಿ ಠೇವಣಿ ಇಟ್ಟು ‘ಬಾಬಾಸಾಹೇಬ್ ಅಂಬೇಡ್ಕರ್‌ ದತ್ತಿ ಪ್ರಶಸ್ತಿ’ ಸ್ಥಾಪಿಸಿದ್ದಾರೆ. ಅದರ ಮೊದಲ ಪ್ರಶಸ್ತಿಯೇ ದಿನೇಶ್‌ ಅಮಿನ್‌ ಮಟ್ಟು ಅವರಿಗೆ ಸಂದಿದೆ.

ದಿನೇಶ್‌ ಅಮೀನ್‌ ಮಟ್ಟು ಅವರಿಗೆ ಅಭಿನಂದನೆಗಳು.