ದಾವಣಗೆರೆ: ‘ಲಿಂಗತ್ವ ಅಲ್ಪಸಂಖ್ಯಾತರನ್ನು ಕುಟುಂಬಗಳು ಮತ್ತು ಧರ್ಮಗಳು ದೂರ ಇಡುತ್ತಿವೆ. ನಮ್ಮ ಕುಟುಂಬಗಳು ಮತ್ತು ನಮ್ಮ ಧರ್ಮಗಳು ಒಪ್ಪಿಕೊಳ್ಳುವುದು ಬಹಳ ಮುಖ್ಯ’ ಎಂದು ಅಲ್ಪಸಂಖ್ಯಾತರ ಹೋರಾಟಗಾರ್ತಿ, ಅಭಯಸ್ಪಂದನ ಸಂಸ್ಥೆಯ ಅಧ್ಯಕ್ಷೆ ಚೈತ್ರಾ ಎಸ್. ತಿಳಿಸಿದರು.
ಧರ್ಮ ಮತ್ತು ಲಿಂಗತ್ವ ಕುರಿತು ಶನಿವಾರ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಪುರುಷರು, ಸ್ತ್ರೀಯರು ಇರುವಂತೆಯೇ ಲಿಂಗತ್ವ ಅಲ್ಪಸಂಖ್ಯಾತರು ಕೂಡ ಇದ್ದಾರೆ. ಅವರು ಕೂಡ ಮನುಷ್ಯರು ಎಂಬುದನ್ನು ಧರ್ಮಗಳು, ಸಮಾಜ ತಿಳಿದುಕೊಳ್ಳಬೇಕು. ಅವರನ್ನು ಮನೆಯಿಂದ, ಧರ್ಮದಿಂದ ಹೊರಗೆ ಹಾಕುವ ಕೆಲಸ ಮಾಡಬಾರದು ಎಂದು ತಿಳಿಸಿದರು.
ಸಮಾನತೆ ಎನ್ನುವುದು ಎಲ್ಲ ಮನುಷ್ಯರಲ್ಲಿ ಬರಬೇಕು. ವಿದ್ಯೆ, ಉದ್ಯೋಗ ಸಹಿತ ಎಲ್ಲ ಕ್ಷೇತ್ರಗಳಲ್ಲಿ ಸ್ತ್ರೀ, ಪುರುಷರಿಗೆ ಇರುವಷ್ಟೇ ಅವಕಾಶವನ್ನು ಮತ್ತು ಗೌರವವನ್ನು ಲಿಂಗತ್ವ ಅಲ್ಪಸಂಖ್ಯಾತರಿಗೂ ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಆವರಗೊಳ್ಳ ಪುರವರ್ಗ ಮಠದ ಓಂಕಾರ ಸ್ವಾಮೀಜಿ, ‘ಎಲ್ಲ ಧರ್ಮಗಳಿಗಿಂತ ಮಾನವಧರ್ಮವೇ ಶ್ರೇಷ್ಠ. ಎಲ್ಲರಿಗೂ ಸಮಾನ ಅವಕಾಶ ದೊರೆಯಬೇಕು. ಧರ್ಮಗಳು ಮನುಷ್ಯರ ಕಡೆಗೆ ಸಾಗಬೇಕು’ ಎಂದರು.
ಹಿರಿಯ ವಕೀಲ ಅನೀಸ್ ಪಾಷಾ, ಜಮಾತೆ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕ ಅಕ್ರಂ ಉಲ್ಲಾ ಶರೀಫ್, ಲಿಂಗತ್ವ ಅಲ್ಪಸಂಖ್ಯಾತರ ಪರ ಹೋರಾಟಗಾರರಾದ ಮಲ್ಲಪ್ಪ ಕುಂಬಾರ್ ಉಪಸ್ಥಿತರಿದ್ದರು.
ಅಭಯ ಸ್ಪಂದನದ ಆಪ್ತ ಸಲಹೆಗಾರ ಗುರು ತವನೂರು ಸ್ವಾಗತಿಸಿದರು. ಯೋಜನಾ ನಿರ್ದೇಶಕ ಚಂದ್ರಶೇಖರ್ ವಂದಿಸಿದರು. ಲೆಕ್ಕಾಧಿಕಾರಿ ಗೀತಾ ಕಾರ್ಯಕ್ರಮ ನಿರೂಪಿಸಿದರು.