ಬೆಂಗಳೂರು: ನಕಲಿ ಛಾಪಾ ಕಾಗದ ಹಾಗೂ ಪ್ರಾಂಕಿಂಗ್ ಮಾಡದಿರುವ ಛಾಪಾ ಕಾಗದಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಪೂರ್ವ ವಿಭಾಗದ ಪೊಲೀಸರು ಭೇದಿಸಿದ್ದು, 63.57 ರೂಪಾಯಿ ಲಕ್ಷ ಮೌಲ್ಯದ ಛಾಪಾ ಕಾಗದಗಳನ್ನು ಜಪ್ತಿ ಮಾಡಿದ್ದಾರೆ.‘ಹೈಕೋರ್ಟ್ ನೀಡಿದ್ದ ನಿರ್ದೇಶದಂತೆ ಎಚ್‌ಎಎಲ್ ಹಾಗೂ ಹಲಸೂರು ಗೇಟ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದವು. ಅದರ ತನಿಖೆ ಕೈಗೊಂಡು ಐವರು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ನ್ಯಾಯಾಲಯದ ಆವರಣದಲ್ಲೇ ಕಾಗದಗಳನ್ನು ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಬಂದಿದ್ದರಿಂದ ಎಸಿಪಿ ನೇತೃತ್ವದ ತಂಡ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ ಜಾಲವನ್ನು ಪತ್ತೆ ಮಾಡಲಾಗಿದೆ’ ಎಂದೂ ತಿಳಿಸಿದರು.‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಟನ್‌ಪೇಟೆ ಶಾಖೆ ಹೆಸರಿನ ಚಿಕ್ಕ ರೌಂಡ್ ಸೀಲ್, ರಬ್ಬರ್ ಸೀಲ್‌ಗಳು, ಸ್ಕ್ರೀನ್ ಪ್ರೀಟಿಂಗ್ ಯಂತ್ರ, ಭಾರತ ಸರ್ಕಾರ ಹೆಸರಿನ ಮುದ್ರೆಗಳು, 233 ಖಾಲಿ ಹಾಳೆಗಳು ಸಿಕ್ಕಿವೆ.’‘2005ರಿಂದಲೂ ಆರೋಪಿಗಳು ಕೃತ್ಯ ಎಸಗುತ್ತಿದ್ದರು. ಪರಿಚಯಸ್ಥರಿಗೆ 3,000ರಿಂದ 5,000 ರೂಪಾಯಿಗೆ ಹಾಗೂ ಅಪರಿಚಿತರಿಗೆ 5,000ರಿಂದ 10,000ರವರೆಗೆ ಛಾಪಾ ಕಾಗದಗಳನ್ನು ಮಾರಾಟ ಮಾಡುತ್ತಿದ್ದರು. ಇದಕ್ಕೆಲ್ಲ ಆರೋಪಿಗಳು, ನಕಲಿ ಎಂಬೋಜಿಂಗ್ ಹಾಗೂ ಪ್ರಾಂಕಿಂಗ್ ಬಳಸುತ್ತಿದ್ದರು’ ಎಂದೂ ಕಮಲ್ ಪಂತ್ ವಿವರಿಸಿದರು.