ಮೈಸೂರು: ತಾಲ್ಲೂಕಿನ ಹೊಸಹುಂಡಿ ಗ್ರಾಮದ ಹೊರವಲಯದಲ್ಲಿ ನಕಲಿ ನಂದಿನಿ ತುಪ್ಪ ತಯಾರಿಕಾ ಘಟಕವನ್ನು ಸ್ಥಳೀಯರ ನೆರವಿನಿಂದ ಮೈಸೂರು ಜಿಲ್ಲಾ ಹಾಲು ಒಕ್ಕೂಟ (ಮೈಮುಲ್) ಹಾಗೂ ಆಹಾರ ಸುರಕ್ಷತೆ, ಗುಣಮಟ್ಟ ಇಲಾಖೆಯ ಅಧಿಕಾರಿಗಳು ಗುರುವಾರ ಪತ್ತೆ ಹಚ್ಚಿದ್ದಾರೆ. ಇಲ್ಲಿ ಒಂದೂವರೆ ಟನ್ನಷ್ಟು ಕಲಬೆರಕೆ ತುಪ್ಪ, 500 ಕೆ.ಜಿ ವನಸ್ಪತಿ, 500 ಲೀಟರ್ ಪಾಮಾಲಿನ್ನ್ನು ವಶಪಡಿಸಿಕೊಳ್ಳಲಾಗಿದೆ.
‘ಹ್ಯೂಮನ್ ರೈಟ್ಸ್’ ಸಂಘಟನೆಯ ಸದಸ್ಯರು ಹಾಗೂ ಸ್ಥಳೀಯರು ಘಟಕದ ಮೇಲೆ ಮೊದಲಿಗೆ ದಾಳಿ ನಡೆಸಿದರು. ನಂತರ, ‘ಮೈಮುಲ್’ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದರು. ಮೈಮುಲ್ನ ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್ ಹಾಗೂ ಆಹಾರ ಸುರಕ್ಷತೆ, ಗುಣಮಟ್ಟ ಇಲಾಖೆಯ ಅಂಕಿತ ಅಧಿಕಾರಿ ಡಾ.ಪ್ರಸಾದ್ ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ನಕಲಿ ನಂದಿನಿ ತುಪ್ಪ ತಯಾರಿಸುತ್ತಿದ್ದುದು ಖಚಿತಗೊಂಡಿತು.
‘ತುಪ್ಪಕ್ಕೆ ವನಸ್ಪತಿ ಹಾಗೂ ಪಾಮಾಲಿನ್ನ್ನು ಸೇರಿಸಿ, ನಂದಿನಿ ತುಪ್ಪದ ನಕಲಿ ಲೇಬಲ್ ತಯಾರಿಸಿ, ಸೀಲ್ ಮಾಡಿರುವುದು ಪತ್ತೆಯಾಗಿದೆ. ನಕಲಿ ತುಪ್ಪದ ಬಾಟಲಿ ಮೇಲಿನ ಲೇಬಲ್ ಪ್ರಿಟಿಂಗ್ ಬ್ಲರ್ ಆಗಿದ್ದು, ಜಿಗ್ಜಾಗ್ ರೀತಿಯಲ್ಲಿ ಸೀಲಿಂಗ್ ಮಾಡಲಾಗಿದೆ. ಗುಣಮಟ್ಟದ ಚಿಹ್ನೆ (ಕ್ವಾಲಿಟಿ ಮಾರ್ಕ್) ಇಲ್ಲ. ಸ್ಥಳೀಯ ಮಟ್ಟದಲ್ಲಿ ಈ ತುಪ್ಪ ಮಾರಾಟ ಮಾಡಿರುವ ಸಾಧ್ಯತೆಗಳು ಕಡಿಮೆ. ಗ್ರಾಹಕರು ಗೊಂದಲಕ್ಕೆ ಒಳಗಾಗದೇ ನಂದಿನಿ ಪಾರ್ಲರ್ಗಳಲ್ಲಿ ತುಪ್ಪ ಖರೀದಿಸಬಹುದು’ ಎಂದು ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ವನಸ್ಪತಿ, ಪಾಮಾಲಿನ್ ಹಾಗೂ ತುಪ್ಪ ಘಟಕದಲ್ಲಿ ಪತ್ತೆಯಾಗಿದೆ. ಆರೋಪಿಗಳೆಲ್ಲರೂ ಪರಾರಿಯಾಗಿದ್ದಾರೆ. ಸದ್ಯ, ಮಹಜರು ಕಾರ್ಯ ನಡೆಯುತ್ತಿದೆ’ ಎಂದು ಆಹಾರ ಸುರಕ್ಷತೆ, ಗುಣಮಟ್ಟ ಇಲಾಖೆಯ ಅಂಕಿತ ಅಧಿಕಾರಿ ಡಾ.ಪ್ರಸಾದ್ ಹೇಳಿದರು.
ಕಳೆದ 4 ತಿಂಗಳುಗಳಿಂದ ಈ ಘಟಕ ತೆರೆಯಲಾಗಿತ್ತು. ಕಡಿಮೆ ಬೆಲೆಗೆ ನಂದಿನಿ ತುಪ್ಪವನ್ನು ಸುತ್ತಮುತ್ತ ಅಂಗಡಿಗಳಿಗೆ ಪೂರೈಕೆ ಮಾಡುತ್ತಿದ್ದುದ್ದನ್ನು ಗಮನಿಸಿದ ಸ್ಥಳೀಯರು ವಿಷಯವನ್ನು ವಿವಿಧ ಸಂಘಟನೆಗಳ ಸದಸ್ಯರ ಗಮನಕ್ಕೆ ತಂದರು. ನಕಲಿ ತುಪ್ಪದ ಬಹುಪಾಲನ್ನು ತಮಿಳುನಾಡಿಗೆ ಕಳುಹಿಸಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.