ಧಾರವಾಡ: ಕರ್ನಾಟಕ ನೀರಾವರಿ ನಿಗಮದ ಅಥಣಿ ವಿಭಾಗದ ಹಿಪ್ಪರಗಿ ಬ್ಯಾರೇಜ್ ಕಾಮಗಾರಿಗೆ ಸಂಬಂಧಿಸಿದಂತೆ, ನಕಲಿ ಬಿಲ್ ಸೃಷ್ಟಿಸಿ 2.89 ಕೋಟಿ ರೂಪಾಯಿ ವಂಚಿಸಿರುವ ಆರೋಪ ಕೇಳಿ ಬಂದಿದೆ.
ಈ ಕುರಿತಂತೆ ಲೆಕ್ಕಾಧಿಕಾರಿ ದೀಪಕ ಮುದಲಗಿ, ಅವರ ಸ್ನೇಹಿತರಾದ ಆರ್.ಬಿ. ಶೇಖ್ ಹಾಗೂ ಎ.ವೈ. ಮುಲ್ಲಾ ವಿರುದ್ಧ ನಿಗಮದ ಮುಖ್ಯ ಲೆಕ್ಕಾಧಿಕಾರಿ ಎನ್.ಎಸ್. ವರದರಾಜ್ ನೀಡಿದ ದೂರಿನ ಮೇರೆಗೆ, ಇಲ್ಲಿನ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮಗಾರಿಗೆ ಸಂಬಂಧಿಸಿದಂತೆ ನಕಲಿ ಬಿಲ್ ಸೃಷ್ಟಿಸಿರುವ ಆರೋಪ ಹೊತ್ತಿರುವ ಮೂವರೂ, ಅಧಿಕಾರಿಗಳ ಸಹಿಯನ್ನು ನಕಲು ಮಾಡಿ ಹಣ ಪಡೆದಿದ್ದಾರೆ. ಆಗ (2020 ನ. 7) ದೀಪಕ ಮುದಲಗಿ ತಮ್ಮ ಕಚೇರಿಯಲ್ಲಿ ಲೆಕ್ಕಾಧಿಕಾರಿಯಾಗಿದ್ದರು. ಇವರೊಂದಿಗೆ ಸ್ನೇಹಿತರಾದ ಆರ್.ಬಿ. ಶೇಖ್ ಹಾಗೂ ಎ.ವೈ. ಮುಲ್ಲಾ ಅವರಿಗೆ ಚೆಕ್ ಮೂಲಕ ಕ್ರಮವಾಗಿ 1.44 ಕೋಟಿ ರೂಪಾಯಿ ಹಾಗೂ 1.45 ಕೋಟಿ ರೂಪಾಯಿ ಹಣವನ್ನು ಅಕ್ರಮವಾಗಿ ಜಮಾ ಮಾಡಿಸಿದ್ದಾರೆ. ಕಚೇರಿಯ ಬಿಲ್ ವೋಚರ್‌ಗಳನ್ನು ದುರುಪಯೋಗಪಡಿಸಿಕೊಂಡು ಹಣ ಲಪಟಾಯಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಯೊಬ್ಬರು, ‘ಪ್ರಸ್ತುತ ಜಮಖಂಡಿಯ ಖಾಡಾದಲ್ಲಿ ಕೆಲಸ ಮಾಡುತ್ತಿರುವ ದೀಪಕ ಮುದಲಗಿ ಅವರು ಧಾರವಾಡ ಕಚೇರಿಯಲ್ಲಿ, ಅಥಣಿ ವಿಭಾಗದ ಹಿಪ್ಪರಗಿ ಬ್ಯಾರೇಜ್ ಕೆನಾಲ್ ಕಾಮಗಾರಿಯಲ್ಲಿ ಸೂಪರಿಂಟೆಂಡೆಂಟ್ ಆಗಿ ಆರು ತಿಂಗಳು ಕಾಲ ಕೆಲಸ ಮಾಡಿದ್ದರು’ ಎಂದು ಹೇಳಿದರು.
‘ಆಗ ಅವರು ಖೊಟ್ಟಿ ಬಿಲ್‌ಗಳನ್ನು ಸೃಷ್ಟಿಸಿ ಅವುಗಳನ್ನೇ ನಿಜವಾದ ಬಿಲ್‌ಗಳು ಎಂದು ಬಿಂಬಿಸಿರುವುದು ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ಗೊತ್ತಾಗಿದೆ. ಆಗ ನಿಗಮದ ಕಚೇರಿಯಲ್ಲಿ ನಾಲ್ವರ ತಂಡವನ್ನು ರಚಿಸಿ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಅದರಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿ ಮಾಡಿರುವುದು ಬೆಳಕಿಗೆ ಬಂದಿದೆ’ ಎಂದು ತಿಳಿಸಿದರು.
‘ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಆಗದ ಕಾರಣ, ದೀಪಕ ತನ್ನ ಸ್ನೇಹಿತರಾದ ಶೇಖ್ ಮತ್ತು ಮುಲ್ಲಾ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿರುವುದು ಬ್ಯಾಂಕ್ ಖಾತೆ ವಿವರದಲ್ಲಿ ಬಹಿರಂಗಗೊಂಡಿದೆ’ ಎಂದರು.