ಚಂಡೀಗಢ: ರೈತರ ಹೋರಾಟವನ್ತು ಖಲಿಸ್ತಾನಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಾಲಿವುಡ್ ನಟಿ ಕಂಗನಾ ರನವತ್ ಅವರ ಕಾರಿಗೆ ರೈತರು ಶುಕ್ರವಾರ ರೈತರು ಮುತ್ತಿಗೆ ಹಾಕಿದರು. ಕಾರಿನಿಂದ ಇಳಿದು ರೈತ ಮಹಿಳೆಯರನ್ನು ಅಪ್ಪಿಕೊಂಡು ನೀವು ನನ್ನ ತಾಯಿ ಇದ್ದ ಹಾಗೆ ಎಂದು ಹೇಳಿ ಕಂಗನಾ ಕ್ಷಮೆ ಯಾಚಿಸಿದರು. ಬಳಿಕ ಪ್ರತಿಭಟನಕಾರರು ಕಾರನ್ನು ಮುಂದಕ್ಕೆ ಚಲಿಸಲು ಅವಕಾಶ ನೀಡಿದರು.
ಪ್ರಧಾನಿ ಮೋದಿ ಅವರು ಕೃಷಿ ಕಾಯ್ದೆಗಳನ್ನು ಹಿಂಪಡೆದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿದ್ದ ಕಂಗನಾ, ‘ಇದು ದುಃಖದ ಸಂಗತಿ, ನಾಚಿಕೆಗೇಡಿನದ್ದು, ಸಂಪೂರ್ಣ ಅನ್ಯಾಯ. ಬೀದಿಗಿಳಿದ ಜನ ದೇಶದಲ್ಲಿ ಕಾನೂನುಗಳನ್ನು ರೂಪಿಸಲಾರಂಭಿಸಿದ್ದಾರೆಯೇ ಹೊರತು, ಸಂಸತ್ತಿನಲ್ಲಿರುವ ಜನರಿಂದ ಆಯ್ಕೆಯಾದ ಸರ್ಕಾರವಲ್ಲ. ಇದು ಸಹ ಜಿಹಾದಿ ರಾಷ್ಟ್ರವಾಗಿದೆ. ಈ ರೀತಿ ಆಗಬೇಕೆಂದು ಬಯಸಿದ ಎಲ್ಲರಿಗೂ ಅಭಿನಂದನೆಗಳು,’ ಎಂದು ಕಂಗನಾ ಆಕ್ರೋಶ ವ್ಯಕ್ತಪಡಿಸಿದ್ದರು. ಹೋರಾಟ ಮಾಡುತ್ತಿದ್ದ ರೈತರನ್ನು ಹಿಂದೆ ಖಲಿಸ್ತಾನ ಚಳವಳಿಗೆ ಹೋಲಿಸಿದ್ದರು. ಸಿಖ್ಖರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಬಗ್ಗೆ ದೂರುಗಳು ದಾಖಲಾದಾಗ ಇನ್‌ಸ್ಟಾಗ್ರಾಂನಲ್ಲಿ ತನ್ನ ಹಾಟ್ ದೃಶ್ಯಗಳನ್ನು ಪ್ರಕಟಿಸಿದ್ದರು.
ಕಂಗನಾ ಅವರು ಶುಕ್ರವಾರ ಪಂಜಾಬ್ ಗೆ ತೆರಳಿದ್ದರು. ಈ ವೇಳೆ ಕಿತಾರ್‌ಪುರ ಸಾಹಿಬ್ ಬಳಿ ರೈತರು ಅವರ ಕಾರಿಗೆ ಘೇರಾವ್ ಹಾಕಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿ ನಂತರ ನಟಿಯ ಕಾರು ತೆರಳಲು ಅವಕಾಶ ನೀಡಲಾಗಿದೆ.
ಕಂಗನಾ ಅವರು ಹಿಮಾಚಲ ಪ್ರದೇಶದ ಕುಲುವಿನಿಂದ ಚಂಡೀಗಢಕ್ಕೆ ತೆರಳುತ್ತಿದ್ದಾಗ ರೈತರು ಅವರ ಕಾರನ್ನು ತಡೆದಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್‌ನ ಸದಸ್ಯರು ಹಿಮಾಚಲ ಪ್ರದೇಶದ ಬಿಲಾಸ್‌ಪುರ್‌ನಿಂದ ನಟಿಯನ್ನು ಹಿಂಬಾಲಿಸುತ್ತಿದ್ದರು ಎಂದು ವರದಿಯಾಗಿದೆ. ನಟಿ ಬುಂಗಾ ಸಾಹಿಬ್ ತಲುಪಿದಾಗ ರೈತರು ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರಿನ ಮುಂದೆ ಧರಣಿ ನಡೆಸಿದರು ಎನ್ನಲಾಗಿದೆ.
ಕಂಗನಾ ಅವರು ಅರೆಸೇನಾ ಪಡೆಯ `ವೈ’ ಕೆಟಗರಿ ಭದ್ರತೆಯನ್ನು ಹೊಂದಿದ್ದರಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ಅವರ ವಾಹನವನ್ನು ತಡೆದು ನಿಲ್ಲಿಸಲಾಯಿತು. ನಂತರ ಭಾರೀ ಸಂಖ್ಯೆಯ ರಾಜ್ಯ ಪೊಲೀಸ್ ಪಡೆ ಕೂಡ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿತು ಎಂದು ಮೂಲಗಳು ತಿಳಿಸಿವೆ.
ಇಬ್ಬರು ಮಹಿಳಾ ಪ್ರತಿಭಟನಾಕಾರರು ನಟಿಯೊಂದಿಗೆ ಮಾತನಾಡಿದ ನಂತರ ಅವರು `ಕ್ಷಮೆಯಾಚಿಸಿದರು’ ಎಂದು ರೈತರು ಹೇಳಿಕೊಂಡಿದ್ದಾರೆ. ಕಂಗನಾ ತನ್ನ ಕಾರಿನ ಕಿಟಕಿಯನ್ನು ಕೆಳಗಿಳಿಸಿ, ನೀವು ನನ್ನ `ತಾಯಿ’ ಇದ್ದಂತೆ ಎಂದು ಹೇಳಿದ್ದರು ಮತ್ತು ಮಹಿಳೆಯರ ವಿರುದ್ಧ ಅವಹೇಳನಕಾರಿಯಾಗಿ ಏನನ್ನೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಂತರ ಕಾರಿನಿಂದ ಹೊರಬಂದು ಮಹಿಳಾ ಪ್ರತಿಭಟನಾಕಾರರನ್ನು ಅಪ್ಪಿಕೊಂಡರು. ಬಳಿಕ ನಟಿಗೆ ಹೋಗಲು ಅನುಮತಿ ನೀಡಲಾಯಿತು’’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.