ಬೆಂಗಳೂರು: ವಿಮಾನ ಪ್ರಯಾಣಿಕ ಗಾಂಧಿ ಎಂಬಾತ ತಮಿಳು ನಟ ವಿಜಯ್ ಸೇತುಪತಿಯವರ ಆಪ್ತ ಸಹಾಯಕ ಜಾನ್ಸನ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆ.
‘ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಸೇತುಪತಿ ಅವರು ವಿಮಾನದ ಮೂಲಕ ಮಂಗಳವಾರ ರಾತ್ರಿ ನಗರಕ್ಕೆ ಬಂದಿದ್ದರು. ಬ್ಯಾಗೇಜ್ ಪ್ರದೇಶದಲ್ಲಿ ಸೇತುಪತಿ ಅವರನ್ನು ನೋಡಿದ್ದ ಗಾಂಧಿ, ಸೆಲ್ಫಿ ಪಡೆಯಲು ಮುಂದಾಗಿದ್ದ. ಆತ ಮದ್ಯಪಾನ ಮಾಡಿದ್ದರಿಂದ ಸೆಲ್ಫಿ ನೀಡಲು ಸೇತುಪತಿ ನಿರಾಕರಿಸಿದ್ದರು. ಹೀಗಿದ್ದರೂ ಸುಮ್ಮನಾಗದ ಆತ ಬಲವಂತದಿಂದ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದ. ಆಗ ಜಾನ್ಸನ್, ಆ ವ್ಯಕ್ತಿಯನ್ನು ದೂರಕ್ಕೆ ತಳ್ಳಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.
‘ತನ್ನನ್ನು ತಳ್ಳಿದ್ದರಿಂದ ಗಾಂಧಿ ಕೋಪಗೊಂಡಿದ್ದ. ವಿಜಯ್ ಸೇತುಪತಿ ಹಾಗೂ ಅವರ ಆಪ್ತ ಸಹಾಯಕ ನಿಲ್ದಾಣದ ಹೊರಗೆ ಭದ್ರತಾ ಸಿಬ್ಬಂದಿಯ ಜೊತೆ ನಡೆದುಕೊಂಡು ಹೋಗುತ್ತಿರುವಾಗ ಹಿಂಬದಿಯಿಂದ ಓಡಿಬಂದು ಕಾಲಿನಿಂದ ಜಾಡಿಸಿ ಜಾನ್ಸನ್‌ಗೆ ಒದ್ದಿದ್ದ. ಕೂಡಲೇ ಆತನನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದರು’ ಎಂದು ಹೇಳಿದ್ದಾರೆ.
‘ರಾತ್ರಿ 12 ಗಂಟೆಗೆ ಜಾನ್ಸನ್ ಹಾಗೂ ಗಾಂಧಿ ಠಾಣೆಗೆ ಬಂದಿದ್ದರು. ಇಬ್ಬರೂ ರಾಜಿಯಾಗಿರುವುದಾಗಿ ಲಿಖಿತ ಹೇಳಿಕೆ ನೀಡಿದ್ದಾರೆ’ ಎಂದು ತಿಳಿಸಿದರು.