ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಆರು ತಿಂಗಳು ಕಳೆದರೂ ಮೇಯರ್ ಮತ್ತು ಉಪ ಮೇಯರ್ ಸ್ಥಾನಗಳಿಗೆ ಚುನಾವಣೆ ಘೋಷಿಸಿಲ್ಲ. ಭ್ರಷ್ಟಾಚಾರ ನಡೆಸುವ ಉದ್ದೇಶದಿಂದ ಸದಸ್ಯರಿಗೆ ಅಧಿಕಾರ ನೀಡಿಲ್ಲ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.
ಪಾಲಿಕೆಯ ಕಚೇರಿಯ ಮುಂದೆ ಭಜನೆ ಮಾಡಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್ ಮುಖಂಡ ಮಹೇಂದ್ರ ಸಿಂಘಿ ಮಾತನಾಡಿ ‘ಬಿಜೆಪಿಗೆ ಅಧಿಕಾರ ದಾಹವಿದೆ. ಮಹಾರಾಷ್ಟ್ರದಲ್ಲಿ ಆ ಪಕ್ಷದ ನಾಯಕರು ತಡರಾತ್ರಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ, ಇಲ್ಲಿ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಸಲು ಮುಂದಾಗುತ್ತಿಲ್ಲ. ಪಾಲಿಕೆ ಸದಸ್ಯರಿಗೆ ಅಧಿಕಾರ ನೀಡುವುದಕ್ಕೆ ಇಷ್ಟವಿಲ್ಲದಿದ್ದರೆ ಚುನಾವಣೆ ಯಾಕೆ ನಡೆಸಬೇಕಿತ್ತು. ಮೂರು ದಿನಗಳಲ್ಲಿ ದಿನಾಂಕ ನಿಗದಿಪಡಿಸದೇ ಇದ್ದರೆ ಹೋರಾಟ ನಡೆಸಲಾಗುವುದು’ ಎಂದರು.
‘ಪಾಲಿಕೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಆಯಾ ವಾರ್ಡ್‌ನ ಸದಸ್ಯರು ಇದ್ದರೂ, ಜನರ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ಸರ್ಕಾರ ಪಾಲಿಕೆ ಸದಸ್ಯರಿಗೆ ಅಧಿಕಾರ ನೀಡಬೇಕು’ ಎಂದು ಆಗ್ರಹಿಸಿದರು.
ಪಕ್ಷದ ಹಿಂದುಳಿದ ವರ್ಗಗಳ ಅಧ್ಯಕ್ಷ ಪ್ರಕಾಶ ಬುರಬುರೆ, ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡಿ ಮಠ, ಮಂಗಳ ಹಿರೇಮನಿ ಇದ್ದರು.