ಬೆಂಗಳೂರು: ‘ಜನ ಯಾರೂ ರಸ್ತೆಯಲ್ಲಿ ನಡೆಯಲೇಬಾರದೇನ್ರಿ..? ಯಾರೂ ರಾಜ್ಯದಲ್ಲಿ ನಡೆಯೋದೇ ಇಲ್ವಾ..? ನಾವು ನೀರಿಗೋಸ್ಕರ ನಡೀತೀವಿ’ ಎಂದು ಹೇಳುವ ಮೂಲಕ, ಮೇಕೆದಾಟು ಯೋಜನೆ ಅನುಷ್ಠಾನ ಆಗ್ರಹಿಸಿ ಇದೇ 9ರಿಂದ ಪಾದಯಾತ್ರೆ ನಡೆಸುವುದು ಖಚಿತ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗುರುವಾರದಿಂದ ಎರಡು ವಾರಗಳ ಕಾಲ ಕಠಿಣ ನಿರ್ಬಂಧಗಳನ್ನು ವಿಧಿಸಿದೆ. ಅಲ್ಲದೆ, ಪ್ರತಿಭಟನೆಗಳು, ರ‍್ಯಾಲಿಗಳು, ಜಾತ್ರೆ, ಉತ್ಸವಗಳು ಹೀಗೆ ಜನಜಂಗುಲಿಯ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ ಎಂದೂ ಸ್ಪಷ್ಟಪಡಿಸಿದೆ.
ಈ ಬಗ್ಗೆ ಬುಧವಾರ ಪ್ರತಿಕ್ರಿಯಿಸಿದ ಶಿವಕುಮಾರ್, ‘ಪ್ರತಿಭಟನೆ, ರ‍್ಯಾಲಿ ಮಾಡಬೇಡಿ ಅಂದಿದ್ದಾರೆ. ನಾವು ನೀರಿಗಾಗಿ ನಡೆಯುತ್ತೇವೆ. ನಮ್ಮದು ‘ವಾಕ್ ಫಾರ್ ವಾಟರ್’. ನೀರಿಗಾಗಿ ಪ್ರತಿಭಟನೆ ಮಾಡಲ್ಲ ಪ್ರಾರ್ಥನೆ ಮಾಡುತ್ತಿದ್ದೇವೆ’ ಎಂದರು.
ವಾರಾಂತ್ಯದ ಕರ್ಫ್ಯೂ ಸೇರಿದಂತೆ ಸರ್ಕಾರ ವಿಧಿಸಿದ ನಿರ್ಬಂಧಗಳನ್ನು ಟೀಕಿಸಿದ ಅವರು, ‘ಇದು ಕೋವಿಡ್ ಲಾಕ್‌ಡೌನ್ ಅಲ್ಲ. ಕೋವಿಡ್ ಕರ್ಫ್ಯೂ ಕೂಡಾ ಅಲ್ಲ. ಇದು ಬಿಜೆಪಿ ಲಾಕ್‌ಡೌನ್, ಬಿಜೆಪಿ ಕರ್ಫ್ಯೂ. ಯಾವ ಕಠಿಣ ನಿಯಮಗಳೂ ಇಲ್ಲಿ ಇಲ್ಲ. ಬಿಜೆಪಿಯವರಿಗೆ ರಾಜಕಾರಣ ಕಠಿಣ ಆಗುತ್ತಿದೆ. ಅದಕ್ಕೆ ಅಧಿಕಾರಿಗಳ ಕೈಯಲ್ಲಿ ಈ ರೀತಿ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.
‘ಎಲ್ಲಿ, ಯಾರಿಗೆ ಕೋವಿಡ್ ಆಗಿದೆ ಅಂತ ಮಾಹಿತಿ ಬಹಿರಂಗಪಡಿದರೆ ನಾವು ಹೋಗಿ ಅವರಿಗೆ ಧೈರ್ಯ ಹೇಳುತ್ತೇವೆ’ ಎಂದರು
‘ನಮ್ಮ ಶಾಸಕಾಂಗ ಪಕ್ಷದ ನಾಯಕರು ಈಗಾಗಲೇ ಪಾದಯಾತ್ರೆಯ ಬಗ್ಗೆ ಹೇಳಿದ್ದಾರೆ. ನಾನು ಶಾಸಕಾಂಗ ಪಕ್ಷದ ನಾಯಕರ ಜೊತೆ ಮಾತನಾಡುತ್ತೇನೆ. ಬೆಂಗಳೂರಿನ ಶಾಸಕರ ಜೊತೆಗೂ ಮಾತನಾಡುತ್ತೇನೆ’ ಎಂದರು.
ಪಾದಯಾತ್ರೆ ಖಚಿತ: ‘ಮೇಕೆದಾಟು ಯೋಜನೆ ಅನುಷ್ಠಾನ ಆಗ್ರಹಿಸಿ ಇದೇ 9ರಿಂದ ಹಮ್ಮಿಕೊಂಡಿರುವ ಪಾದಯಾತ್ರೆ ಮಾಡಿಯೇ ಮಾಡುತ್ತೇವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಈ ಬಗ್ಗೆ ಬುಧವಾರ ಬೆಳಿಗ್ಗೆ ಪ್ರತಿಕ್ರಿಯಿಸಿದ ಅವರು, ‘ಪಾದಯಾತ್ರೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಜನರ ಪ್ರಾಣ ಉಳಿಸುವ ಕೆಲಸವನ್ನು ನಾವು ಮಾಡುತ್ತೇವೆ’ ಎಂದರು.
ಪಾದಯಾತ್ರೆ ತಡೆಯಲು ಸರ್ಕಾರ ಕಠಿಣ ನಿರ್ಬಂಧಗಳನ್ನು ವಿಧಿಸಿದೆಯೇ ಎಂಬ ಪ್ರಶ್ನೆಗೆ, ‘ಅದರ ಬಗ್ಗೆ ನನಗೆ ಗೊತ್ತಿಲ್ಲ’ ಎಂದರು.