ಮಂಗಳೂರು: ನಗರದ ಕೋಡಿಕಲ್ ಮತ್ತು ಕೂಳೂರಿನಲ್ಲಿ ನಡೆದ ನಾಗಬನ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಕಾವೂರಿನ ಸಫ್ವಾನ್, ಪ್ರವೀಣ್ ಅನಿಲ್ ಮೊಂತೇರೊ, ಸೊಹೈಲ್, ನಿಖಿಲೇಶ್, ಜಯಕುಮಾರ್, ಪ್ರತೀಕ್, ಮಂಜುನಾಥ್ ಮತ್ತು ನೌಷಾದ್ ಬಂಧಿತ ಆರೋಪಿಗಳು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವುದು ಗಮನಕ್ಕೆ ಬಂದಿದೆ. ಅವರ ಪತ್ತೆಗೂ ಕಾರ್ಯಾಚರಣೆ ಮುಂದುವರಿದಿದೆ ಎಂದರು.
ಸರ ಕಳವು ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿದ್ದು ಜಾಮೀನು ಪಡೆದು ಹೊರ ಬಂದಿರುವ ಇರ್ಷಾದ್ ಮತ್ತು ಅಚ್ಚಿ ಎಂಬ ಆರೋಪಿಗಳು ಪ್ರಕರಣದ ಮೂಲ ಸೂತ್ರದಾರರು. ನಗರದಲ್ಲಿ ಪೊಲೀಸರು ಕಳವು ಪ್ರಕರಣಗಳನ್ನು ತಡೆಯಲು ನಡೆಸಿದ್ದ ಕಾರ್ಯ ಚಟುವಟಿಕೆಗಳನ್ನು ಬೇರೆ ಕಡೆಗೆ ಸೆಳೆಯುವ ಪ್ರಯತ್ನ ಈ ಕೃತ್ಯಕ್ಗೆ ಕಾರಣವಾಗಿದೆ. ಪೊಲೀಸರ ಗಮನ ಬೇರಡೆ ಸೆಳೆಯಲು ಸಂಚು ರೂಪಿಸಿದ್ದರು. ಇದನ್ನು ತಮ್ಮ ಬಳಗದ ಸಫ್ವಾನ್ ಕಾವೂರು ಗಮನಕ್ಕೆ ತಂದಿದ್ದರು. ಸಫ್ವಾನ್ ತಂಡದವರು ಸೇರಿಕೊಂಡು ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸಿದರೆ ಪೊಲೀಸರ ಗಮನ ಆ ಕಡೆ ಹೋಗುತ್ತೆ ಎಂದು ನಾಗಬನ ಧ್ವಂಸ ಕೃತ್ಯ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಈ ಮಾಹಿತಿ ನೀಡಿದ್ದಾರೆ. ಇನ್ನಷ್ಟು ವಿಚಾರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಹರಿರಾಂ ಶಂಕರ್ ದಿನೇಶ ಕುಮಾರ್, ಎಸಿಪಿ ಪರಮೇಶ್ಚರ ಹೆಗಡೆ ಉಪಸ್ಥಿತರಿದ್ದರು.