Saturday, December 14, 2024
Homeರಾಜ್ಯಬೆಂಗಳೂರು ವಿಭಾಗನಾಲ್ಕನೇ ದಿನಕ್ಕೆ ಕಾಲಿಟ್ಟ ಕಾಂಗ್ರೆಸ್‌ ನಾಯಕರ ಅಹೋರಾತ್ರಿ ಧರಣಿ ದೇಶದ್ರೋಹದ ಕೆಲಸ ಮಾಡಿದ ಈಶ್ವರಪ್ಪ ಬೆನ್ನಿಗೆ...

ನಾಲ್ಕನೇ ದಿನಕ್ಕೆ ಕಾಲಿಟ್ಟ ಕಾಂಗ್ರೆಸ್‌ ನಾಯಕರ ಅಹೋರಾತ್ರಿ ಧರಣಿ ದೇಶದ್ರೋಹದ ಕೆಲಸ ಮಾಡಿದ ಈಶ್ವರಪ್ಪ ಬೆನ್ನಿಗೆ ಮುಖ್ಯಮಂತ್ರಿ ನಿಂತಿದ್ದಾರೆ– ಡಿಕೆಶಿ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ವಜಾ ಆಗ್ರಹಿಸಿ ವಿಧಾನ ಮಂಡಲದ ಉಭಯ ಸದನಗಳಲ್ಲಿ ಕಾಂಗ್ರೆಸ್‌ ಆರಂಭಿಸಿರುವ ಅಹೋರಾತ್ರಿ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ವಿಧಾನಸಭೆ, ವಿಧಾನಪರಿಷತ್‌ನಲ್ಲಿ ಶನಿವಾರ ರಾತ್ರಿಯನ್ನು ಕಳೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಯು.ಟಿ. ಖಾದರ್, ಡಾ. ರಂಗನಾಥ್, ಸಲೀಂ ಅಹ್ಮದ್‌, ಪ್ರಕಾಶ್ ರಾಥೋಡ್ ಮತ್ತಿತರ ಕಾಂಗ್ರೆಸ್‌ ಶಾಸಕರು ಭಾನುವಾರ ಬೆಳ್ಳಂಬೆಳಿಗ್ಗೆ ವಿಧಾನಸೌಧದ ಹೊರಗೆ ವಾಯುವಿಹಾರ ನಡೆಸಿದರು.

ವಿಧಾನಸಭೆಯಿಂದ ಹೊರಬಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಸೌಧದ ಮುಂಭಾಗದಲ್ಲಿ ಸ್ವಚ್ಛತೆ ಪರಿಶೀಲಿಸಿದರು. ‘ವಿಧಾನಸೌಧದ ಆವರಣದಲ್ಲಿ ಕಸ ಎಸೆಯಲಾಗುತ್ತಿದೆ. ವಿಧಾನಸೌಧವನ್ನು ವೀಕ್ಷಿಸಲು ಜನರು ಬರುತ್ತಿದ್ದಾರೆ. ವಿಧಾನಸೌಧ ಸ್ವಚ್ಚತೆ ಬಗ್ಗೆ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಗಮನಕ್ಕೆ ತರುತ್ತೇನೆ’ ಎಂದರು.

ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ‘ಮಲ್ಲಿಕಾರ್ಜುನ ಖರ್ಗೆ ಅವರು ನಿನ್ನೆ (ಶನಿವಾರ) ಇಲ್ಲಿಗೆ ಬಂದಿದ್ದರು. ಕೆಲವು ವಿಚಾರಗಳ ಬಗ್ಗೆ ಚರ್ಚಿಸಿದರು. ರಾಷ್ಟ್ರದ್ವಜಕ್ಕೆ ಅವಮಾನ ಮಾಡಿದ ವಿಷಯ ಕೇವಲ ಕರ್ನಾಟಕದ ಸಮಸ್ಯೆ ಅಲ್ಲ. ಇಡೀ ದೇಶಕ್ಕೆ ಅವಮಾನ ಆಗಿದೆ. ವಿದೇಶದಿಂದಲೂ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈಶ್ವರಪ್ಪ ಅವರದ್ದು ಬಚ್ಚಲು ಬಾಯಿ ಬಿಡಿ. ಆದರೆ, ಬಸವರಾಜ ಬೊಮ್ಮಾಯಿ‌ ಅವರನ್ನು ವಜಾ ಮಾಡುತ್ತಿಲ್ಲ. ನಾವು ಹೋರಾಟ ಮುಂದುವರಿಸುತ್ತೇವೆ’ ಎಂದು ಪುನರುಚ್ಚರಿಸಿದರು.

‘ಮುಖ್ಯಮಂತ್ರಿಗೆ ಸ್ವಾಭಿಮಾನ ಇರುತ್ತಿದ್ದರೆ, ಹಿಂದೆ ಸಚಿವ ಮುರುಗೇಶ್‌ ನಿರಾಣಿ ಅವರನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು, ಅವರೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಈಶ್ವರಪ್ಪ ಹೇಳಿದಾಗಲೇ ವಜಾ ಮಾಡಬೇಕಿತ್ತು‘ ಎಂದರು.

‘ಈಶ್ವರಪ್ಪ ಕೊಲೆ ಮಾಡಿ ಕ್ಷಮೆ ಕೇಳಲು ಆಗುತ್ತಾ? ಅವರು ಯಾಕೆ ಕ್ಷಮೆ ಕೇಳಬೇಕು. ಈ ದೇಶಕ್ಕೆ ಒಂದು ಸಂದೇಶ ರವಾನೆ ಆಗಬೇಕು. ಕೊಲೆ ಮಾಡಿದರೆ ಅದಕ್ಕೊಂದು ಕಾರಣವಾದರೂ ಇರುತ್ತದೆ. ಹದಿನಾಲ್ಕು ವರ್ಷ ಶಿಕ್ಷೆ ಇರುತ್ತದೆ. ಆದರೆ, ಈಶ್ವರಪ್ಪ ಮಾಡಿರುವುದು ದೇಶದ್ರೋಹದ ಕೆಲಸ. ಕೊಲೆಗಿಂತಲೂ ದೊಡ್ಡ ಅಪರಾಧ. ನಮಗೆ ಈಶ್ವರಪ್ಪ ಮುಖ್ಯ ಅಲ್ಲವೇ ಅಲ್ಲ. ಸರ್ಕಾರ ಅವರನ್ನು ವಜಾ ಮಾಡಬೇಕು. ಆದರೆ, ಮುಖ್ಯಮಂತ್ರಿ ಕೂಡ ಈಶ್ವರಪ್ಪ ಬೆನ್ನಿಗೆ ನಿಲ್ಲುತ್ತಿದ್ದಾರೆ’ ಎಂದು ಆರೋಪಿಸಿದರು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ‘ಜನರು ನಮಗೆ ಟಿಎ, ಡಿಎ ತೆಗೆದುಕೊಂಡು ಹೋಗಲು ವಿಧಾನಸೌಧಕ್ಕೆ ಕಳುಹಿಸಿದ್ದಾರಾ? ವಿರೋಧ ಪಕ್ಷವಾಗಿ ಹೋರಾಟ ಮಾಡಲೇಬೇಕು. ನಾವೆಲ್ಲಿ ಕಲಾಪ ಸಮಯ ವ್ಯರ್ಥ ಮಾಡುತ್ತಿದ್ದೇವೆ. ಈ ಹಿಂದೆ ಯಡಿಯೂರಪ್ಪ ಪ್ರತಿಭಟನೆ ನಡೆಸಿರಲಿಲ್ಲವೇ‘ ಎಂದು ಪ್ರಶ್ನಿಸಿದರು.

ದೆಹಲಿಗೆ ಆಹ್ವಾನ: ‘ಪಕ್ಷದ ಸಂಘಟನೆ ಸಂಬಂಧ ಚರ್ಚಿಸಲು ಹೈಕಮಾಂಡ್ ನಮ್ಮನ್ನು ದೆಹಲಿಗೆ ಆಹ್ವಾನಿಸಿದೆ. ನಾವೂ ಕೂಡ ಭೇಟಿಗೆ ಸಮಯ ಕೇಳಿದ್ದೆವು. ಈಗ ದಿನ ನಿಗದಿಪಡಿಸಿದೆ. ನಾನು ಮತ್ತು ಸಿದ್ದರಾಮಯ್ಯ ಹೊರತಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡವರಿಗೆ ವರಿಷ್ಠರನ್ನು ಭೇಟಿ ಮಾಡಲು ಸಾಧ್ಯ ಆಗಿರಲಿಲ್ಲ. ಈಗ ಹೈಕಮಾಂಡ್ ಭೇಟಿಗೆ ಅವಕಾಶ ಸಿಕ್ಕಿದೆ. ಪಕ್ಷವನ್ನು ಯಾವ ನಿಟ್ಟಿನಲ್ಲಿ ತೆಗೆದುಕೊಂಡು ಹೋಗಬೇಕು ಎಂಬ ಬಗ್ಗೆ ಚರ್ಚೆ ನಡೆಸುತ್ತೇವೆ’ ಎಂದರು.

‘ಈಗಿನ ಕಾಂಗ್ರೆಸ್‌ನವರು ಸ್ವಾತಂತ್ರ್ಯ ತಂದುಕೊಟ್ಟಿಲ್ಲ’ ಎಂಬ ಎಚ್‌.ಡಿ. ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಕುಮಾರಸ್ವಾಮಿ ತುಂಬಾ ದೊಡ್ಡವರು. ಪಾಪ… ತಮ್ಮ ಜ್ಞಾನ ಭಂಡಾರದಲ್ಲಿ ಇರುವುದನ್ನು ಹೇಳುತ್ತಿದ್ದಾರೆ. ನಾನೇಕೆ ಅವರ ಬಗ್ಗೆ ಮಾತನಾಡಲಿ. ಅವರು ಪ್ರಜಾಪ್ರಭುತ್ವದಲ್ಲೇ ಚುನಾವಣೆಗೆ ನಿಂತಿರುವವರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಯಾರು ಎನ್ನುವುದನ್ನು ಅವರ ತಂದೆಯನ್ನೇ ಕೇಳಲಿ ಹೇಳುತ್ತಾರೆ. ರಾಷ್ಟ್ರಧ್ವಜದ ಬಗ್ಗೆ ಅವರಿಗೆ ಬೋಧನೆ ಮಾಡಲು ನಾವು ತಯಾರಿಲ್ಲ’ ಎಂದರು.