Saturday, December 14, 2024
Homeಸುದ್ದಿರಾಷ್ಟ್ರೀಯನಿಮ್ಮ ನಿಲುವು ನನ್ನದಲ್ಲ ಎಂದು ಕೈಕಟ್ಟಿ ನಿಂತವ

ನಿಮ್ಮ ನಿಲುವು ನನ್ನದಲ್ಲ ಎಂದು ಕೈಕಟ್ಟಿ ನಿಂತವ

ಥರ್ಡ್ ರೀಕ್ ಆಳ್ವಿಕೆಯ ಕಾಲದ ಪ್ರಸಿದ್ದ ಕಪ್ಪು-ಬಿಳುಪಿನ ಫೋಟೋಗ್ರಾಫ್ ಒಂದಿದೆ. 1936ರ ಜರ್ಮನಿಯ ಹ್ಯಾಂಬರ್ಗ್ ನಗರದಲ್ಲಿ ತೆಗೆದ ಚಿತ್ರವದು. ಆ ಚಿತ್ರದಲ್ಲಿ ನೌಕಾಂಗಣದಲ್ಲಿ ಕೆಲಸ ಮಾಡುವ ನೂರಾರು ಮಂದಿ ಕಾರ್ಮಿಕರು ಒಂದೇ ಕಡೆ ಮುಖ ಮಾಡಿ ಸೂರ್ಯನ ಬೆಳಕಿನಲ್ಲಿ ನಿಂತಿದ್ದಾರೆ. ಎಲ್ಲರು ಒಟ್ಟಾಗಿ ಜಯಕಾರ ಹಾಕುತ್ತಿದ್ದಾರೆ. ನಮ್ಮ ನಿಷ್ಠೆ ನಮ್ಮ ಒಡೆಯ ಫ್ಯುರರನಿಗೆ (ಹಿಟ್ಲರ್) ಎಂದು ತಮ್ಮ ಬಲಗೈಯನ್ನು ಮುಂದೆ ಚಾಚಿ ಸೆಟೆದು ನಿಂತಿದ್ದಾರೆ.

ನೀವು ಸ್ವಲ್ಪ ಗಮನವಿಟ್ಟು ನೋಡಿದರೆ, ಚಿತ್ರದ ಮೇಲ್ಭಾಗದಲ್ಲಿ, ಬೇರೆಲ್ಲರಿಗಿಂತ ವಿಭಿನ್ನನಾಗಿ ಒಬ್ಬಾತ ಕೈ ಕಟ್ಟಿ ನಿಂತಿರುವುದನ್ನ ಕಾಣಬಹುದು. ಆತನ ಚಹರೆ ಸೌಮ್ಯವಾಗಿದ್ದರೂ ಯಾರಿಗೂ ತಲೆಬಾಗಿವುದಿಲ್ಲವೆಂಬ ಹಠವಿದೆ, ಗಾಂಭೀರ್ಯವಿದೆ. ನಾಟ್ಜಿಗಳ ಮೋಹಜಾಲದಲ್ಲಿ ಬಂಧಿಗಳಾಗಿದ್ದ ಸಹಪಾಟಿಗಳಿಂದ ಸುತ್ತುವರೆಯಲ್ಪಟ್ಟು, ಅವರೆಲ್ಲರ ಬಲಗೈ ಭುಜವನ್ನ ಮೀರಿ ಮೇಲಿದ್ದರು, ಯಾರಿಗೂ ಜಗ್ಗದ ಈತನ ಕೈಗಳು ಮಾತ್ರ ಎದೆಯಮೇಲೆ ಮಡಚಿಕೊಂಡಿವೆ. ಅಂದು ಈತನೊಬ್ಬನೇ ಜಯಕಾರ ಹಾಕಲು ನಿರಾಕರಿಸಿದ್ದ. ಅಬ್ಬರಿಸುವ ಅಲೆಗೆ ವಿರುದ್ದವಾಗಿ ಎದೆಯೊಡ್ಡಿ ನಿಂತುಬಿಟ್ಟಿದ್ದ.

ಎತ್ತರದ ವೀಕ್ಷಣ ಜಾಗದಲ್ಲಿ ನಿಂತು ಹಿಂದುರಿಗಿ ನೋಡಿದರೆ, ಚಿತ್ರದಲ್ಲಿದ್ದ ಸಾವಿರಾರು ಮಂದಿಯಲ್ಲಿ ಈತನೊಬ್ಬನೇ ಸರಿಯಿದ್ದುದೆಂಬುದು ನಮಗೆ ಅರ್ಥವಾಗುತ್ತೆ. He was on the right side of history. ಅವನನ್ನು ಸುತ್ತುವರೆದಿದ್ದವರೆಲ್ಲರು ದುರಂತಮಯವಾಗಿ ತಪ್ಪಾಗಿದ್ದರು. ಅವರ ನಿರ್ಣಯಗಳೆಲ್ಲಾ ದೋಷಪೂರಿತವಾಗಿದ್ದವು.ಫ್ಯುರರನ ಹುಚ್ಚು ಆಡಳಿತ, ಎಲ್ಲರು ಹುಚ್ಚು ನಾಯಕನಿಗೆ ಜೈಕಾರ ಹಾಕಿದರೆ, ನಾಟ್ಜಿಗಳ ದ್ವೇಷದ ರಾಜಕೀಯ ಈತನಲ್ಲಿ ಹೇಸಿಗೆ ತರಿಸಿತ್ತು. ಥರ್ಡ್ ರೀಕ್ ಅನ್ನು ಸಂಪೂರ್ಣವಾಗಿ ತಿರಸ್ಕರಿಸಿಬಿಟ್ಟಿದ್ದ.

ಈತನ ಹೆಸರು- ಆಗಸ್ಟ್ ಲ್ಯಾಂಡ್ ಮೆಸ್ಸರ್. ನಾಟ್ಜಿಗಳ ದ್ವೇಷ ರಾಜಕೀಯ, ಅವರು ಹಿಡಿಯುತ್ತಿದ್ದ ನೆತ್ತರಿನ ಹಾದಿ, ನೆಡಸಬಹುದಾದ ಕಗ್ಗೊಲೆ ಹಾಗು ನರಮೇಧಗಳ ಮುನ್ಸೂಚನೆ ಇವನಿಗಿತ್ತು. ಕೆಲ ವರ್ಷಗಳ ಹಿಂದೆಯಷ್ಟೇ ಈತ ನಾಟ್ಜಿ ಪಾರ್ಟಿಗೆ ಸೇರಿದ್ದ. ನಾಟ್ಜಿಗಳು ಜರ್ಮನ್ನರಿಗೆ ದಿನಂಪ್ರತಿ ಯಹೂದಿಯರ ಕುರಿತು ಸುಳ್ಳು ಸುದ್ದಿಗಳನ್ನ, ಕಟ್ಟುಕತೆಗಳನ್ನ ಬಿತ್ತರ ಮಾಡುತ್ತಿದ್ದುದು ಈತನ ಅರಿವಿಗೆ ಬಂದಿತ್ತು. ಎಲ್ಲಕಿಂತ ಹೆಚ್ಚಾಗಿ ಯಹೂದಿರು ಆರ್ಯನ್ನರಿಗಿಂತ ಕೀಳಲ್ಲ, ಅವರು ಕೂಡ ಎಲ್ಲರಂತೆ ಮನುಷ್ಯರೇ ಎಂಬ ಸತ್ಯ ಈತನಿಗೆ ತಿಳಿದಿತ್ತು.
ಈ ಅರಿವು ಈತನಲ್ಲಿ ಮೂಡಿದ್ದಾದರು ಹೇಗೆ? ಯಹೂದಿ ಯುವತಿಯೊಬ್ಬಳನ್ನ ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ. ಆಕೆಯನ್ನೇ ಮದುವೆಯಾಗಬೇಕೆಂದುಕೊಂಡಿದ್ದ. ಆದರೆ ಹಿಟ್ಲರ್ ಜಾರಿಗೆ ತಂದಿದ್ದ ನ್ಯೂರಂಬರ್ಗ್ ಕಾನೂನು ಅವರ ಶುದ್ಧ ಪ್ರೇಮ ಸಂಬಂಧವನ್ನ ಕಾನೂನು ಬಾಹಿರವನ್ನಾಗಿಸಿತ್ತು. ಇಂತಹ ಮದುವೆಗಳ ಮೇಲೆ ನಿರ್ಬಂಧವೇರಲಾಗಿತ್ತು, ಯಹೂದಿರೊಡನೆ ದೈಹಿಕ ಸಂಬಂಧಗಳಿಗೆ ಕಠಿಣ ಸಜೆ ವಿಧಿಸಲಾಗುತ್ತಿತ್ತು. ಅದೊಂದು Racial Infamy ಯೆಂದು ಪರಿಗಣಿಸಲಾಗುತಿತ್ತು.

ಅಂದಿನ ಜರ್ಮನಿಯಲ್ಲಿ ಬಲಿಪಶುಗಳಾಗಿದ್ದ ಅಲ್ಪಸಂಖ್ಯಾತ ಯಹೂದಿಯರ ಜೊತೆಗಿನ ಒಡನಾಟ ಈತನನ್ನು ಮನುಷ್ಯನನ್ನಾಗಿಸಿತ್ತು. ಸಾಮಾನ್ಯ ಜನರು ಅಪ್ಪಿಕೊಂಡ ನಾಟ್ಜಿಗಳು ಕಟ್ಟಿಕೊಟ್ಟಿದ್ದ ಸಿದ್ದಮಾದರಿಯನ್ನ ಮೀರಿ ನೋಡುವ ಬುದ್ದಿವಂತಿಗೆ ಈತನಲ್ಲಿತ್ತು. ಆರ್ಯನ್ ಆಗಿದ್ದರು ಈತನ ಮನದಲ್ಲಿ ದ್ವೇಷ ಮಾಯವಾಗಿ, ಪ್ರೀತಿ ಜಿಗುರಿತ್ತು. ಆರ್ಯನ್ ಎಂಬ ಅಹಂಕಾರ ಇಲ್ಲವಾಗಿತ್ತು. ಯಾರು ಮೇಲಲ್ಲ, ಯಾರು ಕೀಳಲ್ಲ, ಇರುವುದು ಮನುಷ್ಯ ಮತವೊಂದೇ ಎಂಬ ಜ್ಞಾನೋದಯವಾಗಿತ್ತು. ಆತನ ಒಳಿತ ಪರರ ಒಳಿತಲ್ಲಿತ್ತು ಎಂಬುದು ಗೊತ್ತಾಗಿತ್ತು. ದೇಶವಾಸಿಗಳು, ಸಹಪಾಟಿಗಳು ಕಣ್ಣಿದ್ದು ನೋಡದನ್ನು ಈತ ನೋಡಿದ್ದ!

ಥರ್ಡ್ ರೀಕ್ನಂತಹ ನಿರಂಕುಶವಾದಿ ಅಳಿವೆಯಲ್ಲಿ ಅಲೆಗೆ ವಿರುದ್ಧ ಈಜುವುದು ಸುಲಭದ ಕೆಲಸವೇನು ಆಗಿರಲಿಲ್ಲ. ನಾವು ಅವನಾಗಿದ್ದರೆ, ಆ ಕಾಲಕ್ಕೆ ಅವನಂತೆಯೇ ನೆಡೆದುಕೊಳ್ಳುತ್ತಿದ್ದೆವೆಂದು ಹೇಳುವುದು ಬಲು ಸುಲಭ. ಆರ್ಯನ್ ಆಗಿ ಹುಟ್ಟಿದ್ದರು ಯಹೂದಿ ಹುಡುಗಿಯನ್ನ ಪ್ರೀತಿಸಿ ಮದುವೆಯಾಗುತ್ತಿದೆ ಅಂತ ಹೇಳುವುದು ಕೂಡ ಅತಿ ಸುಲಭ. ಪ್ರೀತಿಗಾಗಿ ಇಂತಹ ನೂರು ಪ್ರಭುತ್ವದ ಕ್ರೌರ್ಯ ಎದುರಿಸಿ ನಿಲ್ಲುವ ಧೈರ್ಯ ಅವನಲ್ಲಿತ್ತು. ಪ್ರೀತಿ ಈ ರೀತಿಯ ಒಂದು ತಾಜಾ ಬದಲಾವಣೆಯನ್ನ ತಂದಿತ್ತು.

ಜನರು ತಮ್ತಮ್ಮ ಭಯವನ್ನ ಮೀರಿ ಆಗುವ ಆಯಾಸ, ಅಣಕ ಅನುಭವಿಸಿ, ಸಹಪಾಠಿ, ನೆರೆಹೊರೆಯವರ, ಮಿತ್ರರ ನಿಂದನೆಗಳನ್ನ ಸಹಿಸಿಕೊಳ್ಳುವ, ದೇಶಭ್ರಷ್ಟನೆಂಬ ಹಣೆಪಟ್ಟಿ ತೊಡಿಸಿ ಬಹಿಷ್ಕಾರ ಹಾಕುವ ಸಾಮೂಹಿಕ ಸನ್ನಿಯಲ್ಲಿರುವ ಜನರ ಎದುರಿಸಿ ನಿಲ್ಲುವ ಎದೆಗಾರಿಕೆಯಿದ್ದವನಿಗೆ ಮಾತ್ರ ಇದು ಸಾಧ್ಯ. It would be numerically impossible, humanly impossible, for everyone to be that man. ಯಾವುದೇ ಕಾಲದಲ್ಲಿ ಆಗಸ್ಟ್ ಲ್ಯಾಂಡ್ ಮೆಸ್ಸರ್ ನಂತೆ ತಲೆಯೆತ್ತಿ ನಿಲ್ಲಬೇಕಾಗಿರುವ ಗುಣಗಳೇನು? ಈ ಕಾಲದಲ್ಲಿ ಅವನಂತೆ ಯಾರಿಗೂ ಸಲಾಂ ಹೊಡೆಯದೆ ಪ್ರಭುತ್ವಕ್ಕೆ ಸವಾಲು ಹಾಕಲು ಛಾತಿ ಬೆಳೆಸಿಕೊಳ್ಳಲು ಏನು ಮಾಡಬೇಕು?

  • ಹರೀಶ್ ಗಂಗಾಧರ್