Saturday, December 14, 2024
Homeಕ್ರೀಡೆಇತರನೀರಜ್ ಚೋಪ್ರಾ, ಲವ್ಲಿನಾಗೆ ಖೇಲ್‌ರತ್ನ: ಶಿಫಾರಸು

ನೀರಜ್ ಚೋಪ್ರಾ, ಲವ್ಲಿನಾಗೆ ಖೇಲ್‌ರತ್ನ: ಶಿಫಾರಸು

ನವದೆಹಲಿ (ಪಿಟಿಐ): ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಥ್ಲೀಟ್ ನೀರಜ್ ಚೋಪ್ರಾ ಸೇರಿದಂತೆ 11 ಕ್ರೀಡಾಪಟುಗಳಿಗೆ ಮೇಜರ್ ಧ್ಯಾನಚಂದ್ ಖೇಲ್ ರತ್ನ ಪುರಸ್ಕಾರ ನೀಡಲು ಶಿಫಾರಸು ಮಾಡಲಾಗಿದೆ.

ಟೋಕಿಯೊದಲ್ಲಿ ಬೆಳ್ಳಿ ಪದಕ ಜಯಿಸಿದ್ದ ಕುಸ್ತಿಪಟು ರವಿ ದಹಿಯಾ, ಕಂಚಿನ ಪದಕ ಜಯಿಸಿದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್, ಭಾರತ ಹಾಕಿ ತಂಡದ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್, ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್, ಭಾರತ ಫುಟ್‌ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಅವರೂ ಈ ಪಟ್ಟಿಯಲ್ಲಿದ್ದಾರೆ. ಚೆಟ್ರಿ ಈ ಗೌರವಕ್ಕೆ ಆಯ್ಕೆಯಾಗಿರುವ ಭಾರತದ ಮೊದಲ ಫುಟ್‌ಬಾಲ್ ಆಟಗಾರರಾಗಿದ್ದಾರೆ.

ಪ್ಯಾರಾಲಿಂಪಿಕ್ಸ್‌ ಪದಕ ವಿಜೇತರಾದ ಶೂಟರ್ ಅವನಿ ಲೇಖರಾ, ಮನೀಷ್ ನರ್ವಾಲ್, ಜಾವೆಲಿನ್ ಥ್ರೋ ಅಥ್ಲೀಟ್ ಸುಮಿತ್ ಅಂಟಿಲ್, ಬ್ಯಾಡ್ಮಿಂಟನ್ ಆಟಗಾರರಾದ ಪ್ರಮೋದ್ ಭಗತ್, ಕೃಷ್ಣ ನಾಗರ್ ಅವರಿಗೂ ಖೇಲ್‌ ರತ್ನ ಪ್ರದಾನ ಮಾಡುವಂತೆ ಶಿಫಾರಸು ಮಾಡಲಾಗಿದೆ.

ಆಯ್ಕೆ ಸಮಿತಿಯು ಬುಧವಾರ ಶಿಫಾರಸುಗಳನ್ನು ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಸಲ್ಲಿಸಿದೆ.

ಹೋದ ಸಲ ಐವರಿಗೆ ಈ ಪ್ರಶಸ್ತಿ ನೀಡಲಾಗಿತ್ತು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ನಾಲ್ವರು ಸೇರಿದ್ದರು. ಆದರೆ ಈ ಬಾರಿ 11 ಮಂದಿಗೆ ಪ್ರಶಸ್ತಿ ನೀಡಲು ಶಿಫಾರಸು ಮಾಡಲಾಗಿದೆ.

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಹೋದ ಆಗಸ್ಟ್‌ನಲ್ಲಿಯೇ ಪ್ರಕಟಿಸಬೇಕಿತ್ತು. ಆದರೆ, ಪ್ಯಾರಾಲಿಂಪಿಕ್ಸ್‌ (ಆ. 24 ರಿಂದ ಸೆ 5) ಮುಗಿದ ಮೇಲೆ ಸಾಧಕರನ್ನು ಗುರುತಿಸಿ ಆಯ್ಕೆ ಮಾಡಲು ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು.

ಕನ್ನಡಿಗ ಸುಹಾಸ್‌ಗೆ ಅರ್ಜುನ

ಅರ್ಜುನ ಪ್ರಶಸ್ತಿಗಾಗಿ 35 ಸಾಧಕರನ್ನೂ ಈ ಸಮಿತಿಯು ಶಿಫಾರಸು ಮಾಡಿದೆ. ಹೋದ ವರ್ಷ 27 ಕ್ರೀಡಾಪಟುಗಳಿಗೆ ನೀಡಲಾಗಿತ್ತು.

ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್‌ನಲ್ಲಿ ಪದಕ ಜಯಿಸಿರುವ, ಕನ್ನಡಿಗ ಸುಹಾಸ್ ಯತಿರಾಜ್, ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್, ಹೈಜಂಪ್ ಅಥ್ಲೀಟ್ ನಿಶಾದ್ ಕುಮಾರ, ಟೋಕಿಯೊದಲ್ಲಿ ಕಂಚಿನ ಪದಕ ಜಯಿಸಿದ ಭಾರತ ಹಾಕಿ ತಂಡದ ಆಟಗಾರರು ಮತ್ತು ಕ್ರಿಕೆಟಿಗ ಶಿಖರ್ ಧವನ್ ಅವರಿಗೆ ಪ್ರಶಸ್ತಿ ನೀಡಲು ಶಿಫಾರಸು ಮಾಡಲಾಗಿದೆ.

ಸುಹಾಸ್ ಉತ್ತರಪ್ರದೇಶದಲ್ಲಿ ಐಎಎಸ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.