ಕಲಬುರಗಿ: ರೈತರೊಬ್ಬರ ಜಮೀನು ಸ್ವಾಧೀನಪಡಿಸಿಕೊಂಡು ಅದಕ್ಕೆ ಪರಿಹಾರ ನೀಡಲು ವಿಫಲವಾದ ಜಿಲ್ಲಾಡಳಿತದ ಕ್ರಮಕ್ಕೆ ಬೇಸರಗೊಂಡ ಇಲ್ಲಿನ ಒಂದನೇ ಹೆಚ್ಚುವರಿ ನ್ಯಾಯಾಲಯವು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರ ಕಾರು ಜಪ್ತಿಗೆ ಆದೇಶ ನೀಡಿದೆ.
ಅಫಜಲಪುರ ತಾಲ್ಲೂಕಿನ ಉಡಚಣದ ರೈತ ಕಲ್ಲಪ್ಪ ಮೇತ್ರೆ ಅವರ 33 ಗುಂಟೆ ಜಮೀನನ್ನು 2008ರಲ್ಲಿ ಭೀಮಾ ಏತ ನೀರಾವರಿ ಯೋಜನೆಗಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಅದಕ್ಕೆ ಪರಿಹಾರ ರೂಪವಾಗಿ ₹ 7.41 ಲಕ್ಷ ನೀಡಬೇಕಿತ್ತು. ಆದರೆ, ಮೂರು ವರ್ಷ ಕಳೆದರೂ ಹಣ ಬಂದಿರಲಿಲ್ಲ. ಹೀಗಾಗಿ ರೈತ ಕಲ್ಲಪ್ಪ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಆದೇಶಿಸಿತ್ತು. ಹೀಗಾಗಿ ನ್ಯಾಯಾಲಯದ ಅಧಿಕಾರಿಗಳು, ವಕೀಲರು ಕಾರು ಜಪ್ತಿಗೆ ಬಂದಿದ್ದರು. ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಯಶವಂತ ಗುರುಕರ್ ತಕ್ಷಣ ಚೆಕ್ ಹಸ್ತಾಂತರಕ್ಕೆ ಮುಂದಾದರು. ಆದರೆ, ಚೆಕ್ ಗೆ ಸಹಿ ಮಾಡಬೇಕಿದ್ದ ಭೂಸ್ವಾಧೀನ ಅಧಿಕಾರಿ ಬೇರೆ ಜಿಲ್ಲೆಗೆ ತೆರಳಿದ್ದರು. ಹೀಗಾಗಿ, ಅವರ ಸಹಿ ಪಡೆದು ಚೆಕ್ ನೀಡುವುದಾಗಿ ತಿಳಿಸಿದರು.
ಇದಕ್ಕೆ ರೈತ ಹಾಗೂ ವಕೀಲರು ಒಪ್ಪಿದರು. ಹೀಗಾಗಿ ಕಾರು ಜಪ್ತಿ ಮಾಡದೇ ವಾಪಸಾದರು.
ನೋಟಿಸ್ ಅಂಟಿಸಲಾದ ಕಾರನ್ನೇ ಜಿಲ್ಲಾಧಿಕಾರಿ ತೆಗೆದುಕೊಂಡು ಹೋದರು. ಅದನ್ನು ತೆಗೆಯಲು ಮುಂದಾದ ಸಿಬ್ಬಂದಿಗೆ ತೆಗೆಯಬೇಡಿ ಎಂದು ಡಿ.ಸಿ. ಸೂಚಿಸಿದರು.