ಅಮೆರಿಕಾ ಭೌಗೋಳಿಕವಾಗಿ ತುಂಬಾ ಸುರಕ್ಷಿತವಾಗಿರುವ ದೇಶ. ಸುತ್ತಲೂ ಸಾಗರ, ದೇಶಕ್ಕೆ ಆಂಟಿಕೊಂಡಿರುವ ಮೆಕ್ಸಿಕೋ ಅಥವಾ ಕೆನಡಾ ಯಾವುದೇ ರೀತಿಯಲ್ಲೂ ಅಮೆರಿಕಾಗೆ ಸಾಟಿಯಾಗಲಾರವು. ಇಂತಹ ಅಮೆರಿಕಾ democracy ಹರಡುವ ನೆಪದಲ್ಲಿ ಜಗತ್ತಿನಾದ್ಯಂತ ಮಾಡಿರುವ ರದ್ದಾಂತ ಒಂದೊಂದಲ್ಲ. ಇರಾಕ್, ಇರಾನ್ ಸಿರಿಯಾ, ಲಿಬಿಯಾ, ವಿಯಟ್ನಾಂ, ಇಂಡೋನೇಷ್ಯಾ ಅಫ್ಘಾನಿಸ್ತಾನ್ ಒಂದೇ ಎರಡೇ…ಎಲ್ಲೆಲ್ಲಿ ಬೇಡದ ಯುದ್ಧಗಳನ್ನ ಮಾಡಿ ತನ್ನ ಯುದ್ದ ಪ್ರೇರಿತ ಅರ್ಥ ವ್ಯವಸ್ಥೆಯನ್ನ ಹಿಗ್ಗಿಸಿಕೊಂಡಿಲ್ಲ? ಜಗತ್ತಿನ ಎಷ್ಟು ರಾಷ್ಟ್ರಗಳಿಗೆ ಅಸ್ತ್ರಗಳನ್ನ ಬಿಕರಿ ಮಾಡಿ ಜನರ ಕಗ್ಗೊಲೆಗೆ ಕಾರಣವಾಗಿಲ್ಲ? ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಐಸಿಸ್ ಹೆಸರಲ್ಲಿ ಮಧ್ಯ ಪ್ರಾಚ್ಯ ಪ್ರಾಂತ್ಯಗಳನೆಲ್ಲಾ ಅಸ್ತಿರಗೊಳಿಸಿ ಕೋಟ್ಯಂತರ ಜನರ ಜೀವನ ಬರ್ಬಾದ ಮಾಡಿದ ಅಮೆರಿಕದ ಅಟ್ಟಹಾಸ ನಿಂತಿದ್ದು ರಷ್ಯಾ ಸಿರಿಯಾದ ರಾಜ ಅಸಾದ್ಗೆ ಬೆಂಬಲ ಸೂಚಿಸಿದ ಮೇಲೆಯೇ.
ಯುರೋಪಿಯನ್ ರಾಷ್ಟ್ರಗಳಾದ ಬ್ರಿಟನ್ ಫ್ರಾನ್ಸ್ ಸ್ಪೇನ್ ಪೋರ್ಚುಗಲ್ ಡಚ್ ಕೂಡ ಇದನ್ನೇ ಮಾಡಿರುವುದು. ಲ್ಯಾಟಿನ್ ಅಮೆರಿಕ ಹಾಗೂ ಆಫ್ರಿಕಾ ದೇಶಗಳಲ್ಲಿ ದೊಡ್ಡ ಮಾರಣ ಹೋಮವನ್ನೆ ನಡೆಸಿದವು. ಇತ್ತೀಚಿನ ದಿನಗಳಲ್ಲಿ ಅಮೆರಿಕಾ, ನೇಟೋ ಮತ್ತು ಯುರೋಪಿಯನ್ ಒಕ್ಕೂಟಗಳ ಆಸೆಗೆ ಮಿತಿಯಿಲ್ಲದಂತಾಗಿದೆ. ಉಕ್ರೇನ್ ಯುರೋಪಿಯನ್ ಒಕ್ಕೂಟಗಳಿಗೆ ಹತ್ತಿರವಾಗುತ್ತಾ ನೇಟೋ ಒಪ್ಪೊಂದಕ್ಕೆ ಸಹಿ ಹಾಕಲು ತುದಿಗಾಲಲ್ಲಿ ನಿಂತಿತ್ತು. 2014ರಿಂದ ಪುಟಿನ್ ಉಕ್ರೇನ್ಗೆ ಎಚ್ಚರಿಕೆ ನೀಡುತ್ತಲೇ ಬಂದ. ಆದ್ರೆ ಅದಾವುದನ್ನು ಗಣನೆಗೆ ತೆಗೆದುಕೊಳ್ಳದೆ ಅಮೆರಿಕ ಸಖ್ಯವನ್ನ ಬೆಳೆಸಿದ್ದು ಉಕ್ರೇನ್ ದೇಶವೇ. ಈಗ ವೈರಿ ಮನೆಯ ಬಾಗಿಲಿಗೆ ಬಂದು ನಿಂತಾಗ ರಷ್ಯಾ ತನ್ನ ರಕ್ಷಣೆ ಮಾಡಿಕೊಳ್ಳದಿರುವುದಾದರೂ ಹೇಗೆ?
ಯಾವ ಯುದ್ಧವೇ ಆಗಲಿ ಅದು ಖಂಡನಾರ್ಹ. ಆದರೆ ಈಗ ನಡೆದಿರುವ ಯುದ್ದವನ್ನ ಪುಟಿನ್ ಅಧಿಕಾರರದಾಹ, ನಿರಂಕುಶ ಪ್ರಭುತ್ವ, ಸರ್ವಾಧಿಕಾರಿಕ್ಕೆ ತಳಕು ಹಾಕುವುದು ಬಾಲಿಶವಾದೀತು. ಪುಟಿನ್ ಸರ್ವಾಧಿಕಾರಿಯೇ. ಆತನಿಗೆ ಪ್ರತಿರೋಧ ತೋರಿದವರೆಲ್ಲ ಕೊಲೆಯಾಗಿದ್ದಾರೆ. ಉಳಿದಿರುವ ಏಕೈಕ ಪ್ರತಿರೋಧಿ ನವಲ್ನಿ ಸೆರೆಮನೆಯಲ್ಲಿದ್ದಾನೆ. ಆದರೆ ಈ ಯುದ್ದ ಅಮೆರಿಕಾದ ever expanding ಸಾಮ್ರಾಜ್ಯಶಾಹಿ ನೀತಿಗೆ ಪುಟಿನ್ ನೀಡುತ್ತಿರುವ ಪ್ರತ್ಯುತ್ತರವೆಂದೇ ನಾನು ಗ್ರಹಿಸುತ್ತೇನೆ. ರಷ್ಯಾಕ್ಕೆ ಬೇರಾವುದೇ ಆಯ್ಕೆಗಳಿಲ್ಲದ ಹಾಗೆ ಮಾಡಿದ್ದೇ ಅಮೆರಿಕ. ಉಕ್ರೇನ್ ಮಾತ್ರ ಯಾವುದೇ ನೆರವು ಸಿಗದೆ ಕಂಗಾಲಾಗಿದೆ.
ಅಮೆರಿಕ ನಿಮ್ಮ ಸ್ನೇಹಿತನಾದರೆ ನಿಮಗೆ ಪ್ರಬಲ ವೈರಿಯ ಅವಶ್ಯಕತೆಯೇ ಇಲ್ಲ ಎಂಬ ಸರ್ವಕಾಲಿಕ ಸತ್ಯವೊಂದಿದೆ. ಅಮೆರಿಕಾ ಯಾವ ದೇಶದ/ವ್ಯಕ್ತಿಯ ಜೊತೆಗೂ ನಿಜವಾದ ಗೆಳೆತನ ಬೆಳೆಸಿಕೊಳ್ಳಲಾರದು. ಸದ್ದಾಂ ಹುಸೇನ್ ಒಸಾಮಾ ಬಿನ್ ಲಾಡೆನ್ ಕೂಡ ಒಂದು ಕಾಲಕ್ಕೆ ಅಮೆರಿಕ ದೇಶಕ್ಕೆ ಆಪ್ತರಾಗಿದ್ದವರು ಎಂಬುದನ್ನ ನಾವು ಮರೆಯಬಾರದು. ಹಲವಾರು ವರ್ಷಗಳಿಂದ ಗಾಝಾ ಪಟ್ಟಿಯಲ್ಲಿ ಅಮೆರಿಕ ಇಸ್ರೇಲ್ ನಡೆಸಿರುವ ನರಮೇಧವನ್ನಾಗಲಿ, ಸೌದಿ ಅರೇಬಿಯಾ ಯೆಮೆನ್ ನಲ್ಲಿ ನಡೆಸಿರುವ ಘೋರ ಯುದ್ದವನ್ನಾಗಲಿ ಖಂಡಿಸದ ಜನರೆಲ್ಲಾ ಇಂದು ಪುಟಿನ್ ಅನ್ನು ಹಿಟ್ಲರ್ಗೆ ಹೊಲಿಸುತ್ತಿದ್ದಾರೆ. ನಾವೆಲ್ಲಾ ನಿಸ್ಸಂಶಯವಾಗಿ ವೆಸ್ಟರ್ನ್ ಮೀಡಿಯಾದ ಬಲಿಪಶುಗಳು.
ನಾನು ಪುಟಿನ್ ಸಮರ್ಥಕನಲ್ಲ. ಬಡ ರಾಷ್ಟ್ರಗಳನ್ನ ಗಿನ್ನಿ ಪಿಗ್ಸ್ ತರಹ ಉಪಯೋಗಿಸಿ ಎಸೆಯುವ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟಗಳ ವಿದೇಶಾಂಗ ನೀತಿಗಳ ಉಗ್ರ ವಿರೋಧಿ.ಫಾಕ್ಸ್ ನ್ಯೂಸ್, ಸಿಎನ್ಎನ್ ವಿತರಿಸುವ ಸುಳ್ಳು ಸುದ್ದಿಗಳನ್ನ ನಂಬದೆ, ಚಾಮ್ಸ್ಕಿ, ಎಡ್ವರ್ಡ್ ಸೈದ್, ಅರುಂಧತಿ ರಾಯ್ ಓದುತ್ತಾ ಬೆಳೆದವನು. ಈ ಯುದ್ಧದ ಗುರಿ ಅಮೇರಿಕಾದ ರೋಗ್ attitudeಗೆ ರಷ್ಯಾದ ಉತ್ತರ ನೀಡುವುದೇ ಆಗಿದೆ. ಆದರೆ ಮುಗ್ಧರು ಬಲಿಯಾಗುತ್ತಿರುವುದು ವಿಷಾದಕರ. ಯುದ್ದ ಬೇಗ ಕೊನೆಗೊಳ್ಳಲಿ. ಪ್ರಾಣ ಹಾನಿ ನಿಲ್ಲಲಿ ಎಂದು ಆಶಿಸುತ್ತೇನೆ.
ಹರೀಶ್ ಗಂಗಾಧರ್