ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಗರದ ಅರಮನೆ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಅಪ್ಪುವಿಗೆ ನಮನ ಸಲ್ಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಚಿರಸ್ಥಾಯಿ ಆಗಿಸಲು ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ಪ್ರಶಸ್ತಿ’ ನೀಡಲಾಗುವುದು ಎಂದು ಘೋಷಿಸಿದರು.
ಪುತ್ರಿ ವಂದನಾ ಜೊತೆ ಕುಳಿತಿದ್ದ ಅಶ್ವಿನಿ ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಮತ್ತು ಕುಟುಂಬದ ಎಲ್ಲ ಸದಸ್ಯರ ಕಣ್ಣಾಲಿಗಳು ಆ ಕ್ಷಣದಲ್ಲಿ ತೇವಗೊಂಡವು. ದುಃಖ ತಡೆಯಲಾಗದ ಶಿವರಾಜ್ ಕುಮಾರ್ ಅವರ ಕಣ್ಣಿಂದ ನೀರು ಹೊರಚೆಲ್ಲಿ ನೆರೆದಿದ್ದವರ ಅಂತರಂಗವನ್ನು ಕಲಕಿತು.
‘ಅಪ್ಪು ಹೆಸರನ್ನು ಚಿರಸ್ಥಾಯಿ ಆಗಿಸಬೇಕು ಎಂಬುದು ರಾಜ್ಯ ಸರ್ಕಾರದ ಅಭಿಲಾಷೆ. ಕರ್ನಾಟಕ ರತ್ನ ಪ್ರಶಸ್ತಿಯ ಜೊತೆಯಲ್ಲೇ ರಾಷ್ಟ್ರಮಟ್ಟದ ಉನ್ನತ ಗೌರವಕ್ಕೂ ಶಿಫಾರಸು ಮಾಡುವ ನಿಟ್ಟಿನಲ್ಲಿ ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು. ಅವರ ಸಮಾಧಿ ಸ್ಥಳವನ್ನು ಡಾ.ರಾಜ್ಕುಮಾರ್ ಹಾಗೂ ಪಾರ್ವತಮ್ಮ ಅವರ ಸಮಾಧಿಯ ಮಾದರಿಯಲ್ಲೇ ಅಭಿವೃದ್ಧಿ ಮಾಡಲಾಗುವುದು’ ಎಂದೂ ಹೇಳಿದರು.
‘ಪುನೀತ್ ಮರಣದ ನಂತರ ಜನರು ವ್ಯಕ್ತಪಡಿಸಿದ ಅಭಿಮಾನದ ಮಾತುಗಳಿಂದ ಅವರ ವ್ಯಕ್ತಿತ್ವ ನಾಡಿಗೆ ಗೊತ್ತಾಗಿದೆ. ಅವರ ಮರಣದ ಬಳಿಕ ರಾಜ್ ಕುಟುಂಬದವರು ನಡೆದುಕೊಂಡ ಪರಿ ಅನುಕರಣೀಯ. ಅಭಿಮಾನಿಗಳೂ ಕೂಡ ಅಪ್ಪು ಅವರ ವಿನಯಪೂರ್ವಕ ನಡವಳಿಕೆಯನ್ನೇ ತೋರಿದರು’ ಎಂದು ಅವರು ಸ್ಮರಿಸಿದರು.
ಇಂತಹ ಒಂದು ಅಪೂರ್ವ ಸಂದರ್ಭಕ್ಕೆ ಕನ್ನಡ ಚಿತ್ರರಂಗವೇ ನೆರೆದಿತ್ತು. ತಮಿಳಿನ ನಟ ವಿಶಾಲ್, ತೆಲುಗು ನಟ ಮಿಂಚು ಮನೋಜ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕ ಬಿ.ಎಸ್. ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯದ ಹೆಚ್ಚಿನ ಸಚಿವರು ಈ ಕ್ಷಣಕ್ಕೆ ಸಾಕ್ಷಿಯಾದರು.