ಕಲಬುರಗಿ: ನಗರದಲ್ಲಿ ಭಾನುವಾರ ನಡೆದ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಯ ಲಿಖಿತ ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ನಕಲು ಮಾಡಿ ಪರೀಕ್ಷೆ ಬರೆಯಲು ಯತ್ನಿಸಿದ ಹಾಗೂ ಸಹಕರಿಸಿದ ಆರೋಪದ ಮೇರೆಗೆ ಪೊಲೀಸರು ಭೂಮಾಪನ ಇಲಾಖೆಯ ಸರ್ವೇಯರ್ ಸೇರಿ 9 ಜನರನ್ನು ಬಂಧಿಸಿದ್ದಾರೆ.
ನಗರದ ಪ್ರೀತಂ ಲಾಡ್ಜ್‌ನಲ್ಲಿ ತಂಗಿದ್ದ ಯುವಕರು ಬ್ಲೂಟೂಥ್, ಡಿವೈಸ್, ಮೈಕ್ರೊಫೋನ್ ಹಾಗೂ ಸಿಮ್ ಕಾರ್ಡ್ ಬಳಸಿಕೊಂಡು ಪರೀಕ್ಷೆ ಬರೆಯಲು ತಯಾರಿ ನಡೆಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಬಸವರಾಜ ತೇಲಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಯುವಕರನ್ನು ಬಂಧಿಸಿದರು.
ಜೇವರ್ಗಿಯ ಭೂಮಾಪನಾ ಇಲಾಖೆಯಲ್ಲಿ ಸರ್ವೇಯರ್ ಆಗಿರುವ ರಾಯಪ್ಪ ಮಲ್ಲಾಬಾದ (34), ಜೇವರ್ಗಿ ತಾಲ್ಲೂಕಿನ ಯಾತನೂರ ಗ್ರಾಮದ ಲಿಂಗರಾಜ ಪೂಜಾರ (25), ಪರಶುರಾಮ ಹೊಸಮನಿ (29), ಅಫಜಲಪುರ ತಾಲ್ಲೂಕಿನ ಹವಳಗಾ ಗ್ರಾಮದ ಮಹೇಶ ನಾಟೀಕಾರ (26), ಜೇವರ್ಗಿ ತಾಲ್ಲೂಕು ಅಂಕಲಗಿ ಗ್ರಾಮದ ಮಾಳಪ್ಪಾ ಅಂಕಲಗಿ (26), ಯಾತನೂರ ಗ್ರಾಮದ ಪೀರಪ್ಪ ಹೊಸಮನಿ (23), ಅಂಕಲಗಿಯ ನಾಗಪ್ಪ ಔರಾದ ಹಾಗೂ ಅಫಜಲಪುರದ ಅಂಬಿಗರ ಚೌಡಯ್ಯ ನಗರದ ನಿವಾಸಿ ಪರಶುರಾಮ (28) ಎಂಬುವವರ ವಿರುದ್ಧ ಐಟಿ ಕಾಯ್ದೆ ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
₹ 6 ಲಕ್ಷಕ್ಕೆ ಒಪ್ಪಂದ: ಇವರಿಗೆ ನೌಕರಿ ಕೊಡಿಸುವುದಾಗಿ ಜೇವರ್ಗಿಯ ಕೋಚಿಂಗ್ ಸೆಂಟರ್ ಮಾಲೀಕ ದೇವಿಂದ್ರಪ್ಪ, ಅವರ ಸಹಚರರಾದ ನಾಗಪ್ಪ ಸಿದ್ದಪ್ಪ ಔರಾದ, ಪ್ರಕಾಶ ಪಾಟೀಲ ಹಾಗೂ ಪ್ರಮೋದ ನಾಟೀಕಾರ ಎಂಬುವವರು ಸೇರಿಕೊಂಡು ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಪರೀಕ್ಷೆ ಬರೆಯಲು ಸಂಚು ರೂಪಿಸಿದ್ದರು. ಇದಕ್ಕಾಗಿ ಅಭ್ಯರ್ಥಿಗಳಿಂದ ತಲಾ ₹ 6 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂಬುದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಕಮಿಷನರ್ ಡಾ. ವೈ.ಎಸ್. ರವಿಕುಮಾರ್ ತಿಳಿಸಿದ್ದಾರೆ.
ಬಂಧಿತರಿಂದ ವಿವಿಧ ಕಂಪನಿಗಳ ಮೊಬೈಲ್ ಫೋನ್‌ಗಳು, ಬ್ಲೂಟೂತ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.