Saturday, December 14, 2024
Homeಸಮಾಚಾರ ನೋಟಪ್ರತಿಕಾರ ದೇವತೆ: ಸಾವಿತ್ರಿಯ ಸೇಡಿನ ಕತೆ

ಪ್ರತಿಕಾರ ದೇವತೆ: ಸಾವಿತ್ರಿಯ ಸೇಡಿನ ಕತೆ

ಚಿತ್ರ ಕೃಪೆ: ಸಂಸ್ಕೃತ ಭಾಷೆಯ ಇಷ್ಟಿ ಚಿತ್ರದ್ದು.

ಈ ಕಥೆ ನಡೆದದ್ದು 1905ರಲ್ಲಿ. ಬ್ರಾಹ್ಮಣ ಸಮಾಜಕ್ಕೆ ಸೇರಿದ ಅಂತರ್ಜನಂ ಅವಳು. ಹೆಸರು ಕುರಿಯಡತು ತಾತ್ರಿ. ಪರದೆಯೊಳಗಿದ್ದುಕೊಂಡು, ದೇವರ ಪೂಜೆ ಪುನಸ್ಕಾರ ಮಾಡಿಕೊಂಡು ಇರಬೇಕಾದವಳು ಸುಖವ ಅರಸಿ ಪ್ರಾಂತ್ಯದ ಪ್ರಸಿದ್ದ ವೈಶ್ಯೆಯಾದವಳು. ಅವಳು ಹಾಗೇಕಾದಳು ಎಂಬುದು ಇಂದಿಗೂ ಕೇರಳದ ಒಂದು ದೊಡ್ಡ ಬಗೆಹರಿಯದ ರಹಸ್ಯ. ವಿಚಾರಣೆಯ ವೇಳೆಯಲ್ಲಿ ಅವಳು ಬಹಿರಂಗ ಪಡಿಸಿದ “ರೆಗ್ಯುಲರ್ ಗಿರಾಕಿಗಳ” ಹೆಸರುಗಳು ರಾಜ್ಯದ ಎಲ್ಲೆಡೆ ಕಂಪನ ಮೂಡಿಸಿತು. ದೊಡ್ಡ ದೊಡ್ಡ ಹೆಸರುಗಳು ಮಣ್ಣುಮುಕ್ಕಿದ್ದವು, ಖ್ಯಾತನಾಮರ ನಿಜ ಬಣ್ಣ ಬಯಲಾಗಿತ್ತು. ಹೆದರಿದ ಕೊಚ್ಚಿಯ ರಾಜ ವಿಚಾರಣೆಯನ್ನ ಅರ್ಧಕ್ಕೆ ನಿಲ್ಲಿಸುವಂತೆ ಆದೇಶ ಹೊರಡಿಸಬೇಕಾಯಿತು. ತಾತ್ರಿಯ ಕೇಸ್ ಕೇರಳದ ಮಹಿಳೆಯರ ವಿಚಾರದಲ್ಲಿ ಅಮೂಲಾಗ್ರ ಸುಧಾರಣೆ ತರಲು ಸ್ಪೂರ್ತಿಯಾಯಿತು.

ಅವಳನ್ನ ಎಲ್ಲರು ಸಾವಿತ್ರಿ ಅಂತ ಕರೆಯುತ್ತಿದ್ದರು. ಅವಳ ಹೆಸರಿಗೆ ಸ್ಪೂರ್ತಿಯಾಗಿದ್ದು ಪುರಾಣದಲ್ಲಿ ಬರುವ ನಾಯಕಿ- ಸಾವಿತ್ರಿ. ತನ್ನ ಪತಿ ಭಕ್ತಿಯಿಂದ, ಅರ್ಪಣಾ ಮನೋಭಾವದಿಂದ ಸತ್ತ ಗಂಡನಿಗೆ ಮರುಜೀವ ಕೊಟ್ಟವಳು, ಸಾವು ಕೂಡ ತಲೆಬಾಗಿ ಆಕೆ ಪತಿಯ ಆತ್ಮವನ್ನ ಹಿಂದುರುಗಿಸಬೇಕಾಗುವಂತೆ ಮಾಡಿದ ದಿಟ್ಟ ಪತಿವ್ರತೆ ಸಾವಿತ್ರಿ. ಆದ್ರೆ ಈ ರೀತಿಯ ಪರಿಶುದ್ದ ನಾಯಕಿಯರು ಪುರಾಣಗಳಲ್ಲಿ ರಾರಾಜಿಸುತ್ತಾರಷ್ಟೇ. ಈ ಕಥೆಯ ಸಾವಿತ್ರಿ ನಮ್ಮ ನಿಮ್ಮಂತೆ ನರಮಾನವಳು. ಪುರುಷಪ್ರಧಾನ ಸಮಾಜದ ಪರದೆಯಿಂದೆ ಅವಿತಿರುವ ಅಪರಿಪೂರ್ಣ, ದೋಷಪೂರಿತ ಗಂಡಸರ ನಕಲಿ ಜಗತ್ತನ್ನೇ ಬಯಲಿಗೆಳೆದವಳು. ಅವಳ ಕತೆ ಬೇರೆಲ್ಲ ಕತೆಗಳಂತೆ ತುಂಬ ಸಾಧಾರಣವಾಗಿಯೂ, ನೇರವಾಗಿಯೂ ಶುರುವಾದರೂ ನಂತರ ಅದು ಹುಟ್ಟಿಸಿದ ಭಯ, ನಡುಕ ಕೇರಳದಲ್ಲಿ ಬದಲಾವಣೆಯ ಅಲೆಯನ್ನೇ ಎಬ್ಬಿಸಿತು. ಈ ಸಾವಿತ್ರಿ ಶುದ್ದಳಾಗಿರಲಿಲ್ಲ. ಶೀಲವಂತೆಯಂತೂ ಅಲ್ಲವೇ ಅಲ್ಲ. ಇವಳೊಬ್ಬ ಪ್ರತಿಕಾರ ದೇವತೆ. ಸೇಡು, ಭಯಂಕರ ಕೋಪದ ಪ್ರತಿರೂಪ. ಪುರಾಣ ಸಾವಿತ್ರಿ ಪಾಲಿಸಲಾಗದ ಆದರ್ಶಕ್ಕೆ ಜನ್ಮ ನೀಡಿದರೆ, ಕೇರಳದ ಸಾವಿತ್ರಿಯೆಂಬ ಬ್ರಾಹ್ಮಣ ಮಹಿಳೆ ತನ್ನ ಪ್ರತಿಕಾರದಲ್ಲೇ ನ್ಯಾಯ ಬೇಡಿದಳು. ಪುರಾಣದ ಸಾವಿತ್ರಿ ಗಂಡನ ಜೀವಕ್ಕಾಗಿ ಯಮನನ್ನೇ ಗೆದ್ದರೆ, ಈ ಸಾವಿತ್ರಿ ತನ್ನ ಕೊನೆಯುಸಿರು ಇರುವರೆಗೂ ಗಂಡನನ್ನ ಅತಿಯಾಗಿ ದ್ವೇಷಿಸಿದಳು. ಆ ದ್ವೇಷ ಸೇಡಿನ ನೆನೆಪುಗಳನ್ನೇ ನಮಗೆ ಬಿಟ್ಟು ಹೋದಳು.

ಸಾವಿತ್ರಿ ಕೇರಳದ ನಂಬೋದರಿ ಬ್ರಾಹ್ಮಣನ ಮಗಳು. ಎಲ್ಲರು ಅವಳನ್ನ ತಾತ್ರಿಯೆಂದು ಕರೆಯುತ್ತಿದ್ದದು ಪ್ರೀತಿಯಿಂದಲ್ಲ, ಅವಳು ಹುಟ್ಟಿದ ಗಳಿಗೆ ಕೆಟ್ಟದಾಗಿತ್ತು, ನಕ್ಷತ್ರಗಳು ವಿನಾಶಕಾರಿಯಾಗಿದ್ದವು. ಅನುಕೂಲಕ್ಕಾಗಿ ಮಾತ್ರ ತಾತ್ರಿಯೆಂಬ ಹೆಸರು ಅವಳಿಗೆ ಅಂಟಿಕೊಂಡಿತ್ತು. ಅವಳುಟ್ಟಿದ್ದು 19 ಶತಮಾನದ ಅಂತ್ಯಕ್ಕೆ. ಹುಟ್ಟಿದ ಕ್ಷಣದಿಂದಲೇ ಅವಳು ಬಂಗಾರದ ಪಂಜರದೊಳಗೇ ಜೀವನ ಕಳೆಯಬೇಕೆಂದು ನಿರ್ಧರಿಸಲಾಗಿತ್ತು. ನಂಬೋದರಿ ಹೆಂಗಸರು ಶುದ್ಧರಾಗಿಯು, ಪಳಗಿದ ಪಶುವಂತೆ ಜೀವನ ನಡೆಸಬೇಕಾಗಿತ್ತು. ಅವರಿಗೆ ಮುಕ್ತವಾಗಿ ಓಡಾಡುವ ಅವಕಾಶವಿರಲಿಲ್ಲ. ದಾರಿಹೋಕರು, ಅಪರಿಚಿತರು ಅವರನ್ನ ನೋಡಿದರು ಅವರು ಹಾಳಾಗಿ ಹೋಗುವರು ಎಂಬ ನಂಬಿಕೆಯಿತ್ತು. ಹಸಿವಾದರೂ ಮನೆಯಲ್ಲಿನ ಗಂಡಸರು ಭೋಜನ ಸೇವಿಸುವ ಮುನ್ನ ಅವರು ಏನನ್ನೂ ಸೇವಿಸುವ ಹಾಗಿರಲಿಲ್ಲ. ಪುರುಷರಿಗೆ ಇಷ್ಟವಾಗುವ ಭಕ್ಷ್ಯ ತಯಾರಿಸಿ ಸಂತುಷ್ಟಪಡಿಸುವುದು ಅವರ ಪರಮೋಚ್ಛ ಕಾಯಕವಾಗಿತ್ತು. ಚಿನ್ನದ ಆಭರಣ ತೋಡುವಂತಿರಲಿಲ್ಲ. ಹಿತ್ತಾಳೆಯ ಬಳೆಯೊಂದೇ ನಂಬೋದರಿ ವಧುವಿನ ಅಸ್ತಿ. ಪುರುಷರಿಗೆ ಅಂಗಿ ತೊಡುವುದು ನಿಷಿದ್ದವಾದರೆ ನಂಬೋದಿರಿ ಮಹಿಳೆಯರು ರವಿಕೆಯೆಂಬದನ್ನ ಕೇಳೇ ಇರಲಿಲ್ಲ. ಮನೆಯಲ್ಲಿನ ಕಿರಿಯರು ಈ ಸಂಪ್ರದಾಯಗಳನ್ನ ಮುರಿದರೆ ಹಿರಿಯರು ಸಿಡಿದೇಳುತ್ತಿದ್ದರು. ಮನೆಯಲ್ಲಿ ಸಣ್ಣದೊಂದು ಬದಲಾವಣೆ, ಹಿರಿಯರಲ್ಲಿ ಕ್ರಾಂತಿಯ ಬಂದಿದೆ, ಇಷ್ಟು ಶತಮಾನಗಳಿಂದ ಕಾಯ್ದುಕೊಂಡು ಬಂದ ಜಾತಿ, ಸಂಪ್ರದಾಯಗಳ ಕೊನೆ ಹತ್ತಿರವಾಗುತ್ತಿದೆಯೆಂಬ ಭಯ ಹುಟ್ಟಿಸುತ್ತಿತ್ತು.

ಸಾವಿತ್ರಿಯೊಬ್ಬ ಅಂತರ್ಜನಮ್. ಅವಳಂತಹ ಜೀವಿಗಳು ತಮ್ಮ ಇಡೀ ಜೀವನವನ್ನ ಕಣ್ಣು ಕೋರೈಸುವ ವಿಶಾಲ ಮನೆಗಳಲ್ಲಿ, ಧರ್ಮ, ಜಾತಿ ಅವರ ಮೇಲೆ ಹೇರಿದ ಆಚಾರ, ಸಂಸ್ಕಾರ, ವಿಧಿವತ್ತಾದ ನಡವಳಿಕೆಯ ಕಗ್ಗತ್ತಲಲೆಯಲ್ಲೇ ಕಳೆದುಬಿಡುತ್ತಿದ್ದರು. ಆ ಮನೆಗಳಲ್ಲಿ ಹೆಣ್ಣೊಂದು ಬಿಟ್ಟರೆ ಬೇರೆಲ್ಲ ವೈಭವವೇ. ಪರದೆ ಹಿಂದಿನ ಜೀವನ. ಹಿತಕರವಾದುದನ್ನ ಅವರ ಕಂಗಳು ನೋಡುವಂತಿರಲಿಲ್ಲ. ಅವರ ಪ್ರತಿ ಹೆಜ್ಜೆಯ ಮೇಲೂ ಹದ್ದಿನ ಕಣ್ಣಿಡಲಾಗುತಿತ್ತು. ಮನೆಯಲ್ಲಿದ್ದ ಪಾತ್ರೆ ಪಡಗಳಂತೆಯೇ ಅವರ ಪರಿಸ್ಥಿತಿ. ತಾಜಾ ಗಾಳಿ ಕುಡಿಯುವ, ಸ್ವಚ್ಚಂದವಾಗಿ ಓಡಾಡುವ ಅನುಮಾತಿಯಿಲ್ಲದ, ಹೊರಜಗತ್ತನ್ನ ನೋಡಲಾಗದ ಅಂತರ್ಜನಂ ಜೀವಾವಧಿ ಶಿಕ್ಷೆಗೆ ಗುರಿಯಾದ ಸೆರೆಮನೆ ವಾಸಿ. ಆಗಾಗ ತಮ್ಮ ದೊಡ್ಡ ಕೊಡೆ ಹಿಡಿದು ದಾಸಿಯರ ರಕ್ಷಣೆ ಮತ್ತು ಕಾವಲಿನಲ್ಲಿ ಹೊರಹೋದರೂ ಆ ಕೊಡೆಯಡಿಯ ಜಗತ್ತು ನರಕವೇ ಆಗಿರುತ್ತಿತ್ತು. ಅಂತರ್ಜನಂ ಅಳುತ್ತಲೇ ಹುಟ್ಟಿ, ಕಣ್ಣೀರು ಸುರಿಸುತ್ತಲೇ ಸಭ್ಯತೆಯ ಗೆರೆ ದಾಟಲಾಗದೆ ಜೀವನ ಸವೆಸಿ, ಗೋಳಿಡುತ್ತಲೇ ಸಾಯುತ್ತಿದ್ದಳು. ಸಾವು ಬಿಟ್ಟರೆ ಅವಳಿಗೆ ಈ ಘೋರ ಬದುಕಿನಿಂದ ಮುಕ್ತಿ ಪಡೆಯುವ ಬೇರಾವ ಮಾರ್ಗವೂ ಇರಲಿಲ್ಲ. ಅಂತರ್ಜನಮ್ ಹೆಂಗಳೆಯರು ಅನಿಷ್ಟ ಪುರುಷಪ್ರಧಾನ ಸಮಾಜದ ತುಳಿತಕ್ಕೆ ಬಾಡಿದ ಹೂಗಳು.

ನಂಬೋದರಿಗಳ ಬದುಕಿನಲ್ಲಿ ಪುರಾತನ ಸಂಪ್ರದಾಯಗಳಿಗೆ ಮಿಗಿಲಾದುದು ಯಾವುದು ಇರಲಿಲ್ಲ. ದೈನಂದಿನ ಬದುಕಿನ ಎಲ್ಲ ಆಯಾಮಗಳಿಗೂ ಆಚಾರ, ಆಚರಣೆ, ಸಂಪ್ರದಾಯದ ಸೋಂಕು ಅಂಟಿಕೊಂಡಿತ್ತು. ನೂರಾರು ದೇವತೆಗಳ ಪೂಜೆ. ಉತ್ತರಕ್ಕೆ ನೂರು ದೇವರುಗಳು, ದಕ್ಷಿಣ, ಪೂರ್ವ ಪಶ್ಚಿಮಕ್ಕೂ ನೂರಾರು. ಮನೆಯ ಛಾವಣಿಯ ಮೇಲೆ ದೇವರುಗಳು, ಕಣಜದಲ್ಲೂ ದೇವರುಗಳು. ದೇವಸ್ಥಾನದಲ್ಲೂ ದೇವರುಗಳು ಹತ್ತಿ ಉರಿವ ಬೆಂಕಿಯಲ್ಲೂ ದೇವರುಗಳು.

ಈ ಎಲ್ಲ ದೇವರುಗಳದು ನೂರಾರು ಬೇಡಿಕೆಗಳು. ಈ ಎಲ್ಲಾ ದೇವರುಗಳು ಸ್ನಾನ ಮಾಡುವಂತೆ ಒತ್ತಾಯಿಸುತ್ತಿದ್ದರು. ಮುಂಜಾನೆ ಜಳಕ, ಮುಸ್ಸಂಜೆ ಜಳಕ. ಮನೆಯಿಂದ ಹೊರಹೋದರೆ ಜಳಕ, ಹೊಸಲು ದಾಟಿ ಯಾರೇ ಅತಿಥಿ ಒಳಬಂದರೆ ಜಳಕ. ಕಳಜಾತಿಯವ ಅಡ್ಡಬಂದರೆ ಜಳಕ, ಪವಿತ್ರವಲ್ಲದ ಭೂಮಿಯ ಮೇಲೆ ಪಾದವಿಟ್ಟರೆ ಜಳಕ. ಸ್ತಬ್ದವಾದ ಕೊಳವೊಂದೇ ಅವರಿಗೆ ಮೋಕ್ಷ ಕೊಡಿಸುವ ವಾಗ್ಧಾನ ಮಾಡಿರುವಂತಿತ್ತು. ಶುದ್ದತೆ ಪರಮ ಗುರಿಯಾದರು ಈ ಎಲ್ಲ ಅಚಾರ, ಆಚರಣೆಗಳು ನಿರಂತರ ಶೋಷಣೆ, ದಬ್ಬಾಳಿಕೆಗಳ ಚಿಲುಮೆಯು ಆಗಿತ್ತು. ಶುದ್ದತೆ, ಆಚರಣೆ, ಸಂಪ್ರದಾಯ, ದೇವರುಗಳ ಹೆಸರಲ್ಲಿ ಅವರಿಗೆ ಸಂಕೋಲೆಗಳಲ್ಲಿ ಬಂಧಿಸಲಾಗಿತ್ತು. ಬೌದ್ಧಿಕವಾಗಿ ಗುಲಾಮರನ್ನಾಗಿ ಮಾಡಿಕೊಳ್ಳಲಾಗಿತ್ತು. ಅಂತರ್ಜನಮ್ಗೆ ಎಲ್ಲವೂ ಅಸಹನೀಯ.

ಆದರೆ “ಇದೆಲ್ಲಕ್ಕಿಂತ ಯಾತನಮಯವಾಗಿದ್ದು ಮಗುವಿಗೆ ಜನ್ಮ ನೀಡಿದ ಮೇಲೆ ಮಾಡಬೇಕಿದ್ದ ಆ ಸಾಂಪ್ರದಾಯಿಕ ಸ್ನಾನ” ಎಂದು ಬೆಚ್ಚಿ ಬ್ರಾಹ್ಮಣ ಹುಡುಗಿಯೊಂದು ತನ್ನ ಆತ್ಮಚರಿತ್ರೆಯಲ್ಲಿ ನೆನಪಿಸಿಕೊಳ್ಳುತ್ತಾಳೆ. ಬಾಯಾರಿದ ತಾಯಿ, ವಂಶೋದ್ದಾರಕನ ಬರುವಿಕೆಯಿಂದ ರಕ್ತಸ್ರಾವದಿಂದ ಬಳಲಿದ ತಾಯಿ ನೀರು ಕುಡಿಯುವಂತಿರಲಿಲ್ಲ- ಅಯ್ಯಯ್ಯೋ …ಇಲ್ಲ… ಇಲ್ಲ.. ಕೆಳಜಾತಿಯ ಕೊಳಕು ಸೂಲಗಿತ್ತಿ ಸ್ಪರ್ಶ, ಉಸಿರು ಅವಳನ್ನು ಕಲುಷಿತಗೊಳಿಸಿರುವಾಗ ಆಕೆ ನೀರು ಕುಡಿಯುವ ಹಾಗಿರಲಿಲ್ಲ.

ಹೀಗೆ ಜನ್ಮ ನೀಡಿದ ಅಂಥರ್ಜನಂ ಮೊದಲು ಮಾಡಬೇಕಾಗಿದ್ದು ಕಲ್ಯಾಣಿಗೆ ತೆರಳಿ ಮತ್ತೆ ಸ್ನಾನ ಮಾಡಬೇಕಾಗಿದ್ದು. ಮನೆಯ ಬೇರೆ ಹೆಂಗಸರು ಕಲ್ಯಾಣಿಗೆ ಹೋಗಲು ಅಕೆಗೆ ಸಹಾಯ ಮಾಡಿದರು ಬರುವಾಗ ಮೆಟ್ಟಿಲುಗಳನ್ನ ಹತ್ತಿ ಆಕೆ ಒಬ್ಬಾಕೆಯೇ ಮನೆ ಸೇರಬೇಕಿತ್ತು. ಆದರೆ ಒಂಟಿತನ ಎಂಬುದು ನಂಬೋದರಿ ಹೆಂಗಸರಿಗೆ ಚಿರಪರಿಚಿತ ಭೂತ. ದೇಹ ದಂಡಿಸುವ ಅಂತಹ ಕಠಣ ಪರಿಸ್ಥಿತಿಯಲ್ಲೂ ಮತ್ತೊಂದು ಬಾರಿ ಮುಳುಗೆದ್ದು ಬರುವುದು ಅವರಿಗೆ ಹೊಸದೇನು ಆಗಿರಲಿಲ್ಲ.

ಎಲ್ಲಕ್ಕಿಂತ ಭಯಾನಕ ಮದುವೆಯೇ ಆಗಿತ್ತು. ನಂಬೂದಿರಿ ಗಂಡಸರು ಊಳಿಗಮಾನ್ಯ ಪದ್ದತಿಯಿಂದ ಲಾಭ ಪಡೆದವರು. ಅವರ ಮನೆಗಳಲ್ಲಿ ಕೆಲಸ ಮಾಡಿಕೊಂಡು, ಹೊಲ ಉಳುತ್ತಿದ್ದವರೆಲ್ಲರಿಗೂ ಆತ ರಾಜ ಅಥವಾ ದೇವರು. ಲೇಖನಿ ಕಾಗದಕ್ಕೆ ತಾಗಿ ಪುರಾವೆಗಳು ಸೃಷ್ಟಿಯಾಗುವ ಮುನ್ನವೇ ನೂರಾರು ಎಕರೆಗಳ ಭೂಮಿಯನ್ನ ದೇವರೇ ಅವರಿಗೆ ದಯಪಾಲಿಸಿದ್ದ. ಆತನೇ ಅಧಿಪತಿ. ಆತನೇ ಎಲ್ಲರಿಗು ಮನೆ ದೇವರು. ಆತನ ಮನೆಯ ಆಳುಗಳಿಗಂತೂ ಒಡೆಯನೆ ಜಗದೊಡೆಯ.

ಪ್ರಾಂತ್ಯದ ರಾಜರು ಇವರ ಪಾದಕ್ಕೆರಗಿ ನಮಿಸುವಾಗ, ರಾಜಮನೆತನಕ್ಕೆ ತಮ್ಮ ಅಕ್ಕ ತಂಗಿಯವರನ್ನ ಮದುವೆ ಮಾಡಿಕೊಡುವಾಗ, ಈ ಜಗದೊಡೆಯನಿಗೆ ಮನೆಯ ಮಡದಿ ಯಾವ ಲೆಕ್ಕ? ಆಕೆ ಬದುಕಿದ್ದೆ ಈತನ ಸೇವೆಗೆ, ಅವನು ತಿಂದು ಉಳಿದದ್ದು ತಿನ್ನಲಿಕ್ಕೆ. ಅವಳ ಏಕೈಕ ಗುರಿ ಆತನ ಮಕ್ಕಳನ್ನ ಹೆರುವುದು. ಆತ ಮತ್ತೊಬ್ಬಳನ್ನು ಕಟ್ಟಿಕೊಂಡು ಬಂದರೆ, ಇನ್ನೊಬ್ಬಾಕೆ ಈ ದ್ವಿಜನ ಸೇವೆಯಲ್ಲಿ ತನ್ನ ತನು, ಮನ ತೊಡಗಿಸಿಕೊಳ್ಳಲು ಬಂದಳೆಂದು ಖುಷಿ. ಅವನ ಸೇವೆಗೆ ಮನೆಯ ಮಡದಿಯರು ಸನ್ನದ್ದರಾಗಿರಬೇಕಿತ್ತು. ಆದರೆ ಆತ ಮಾತ್ರ ಸುಖವನ್ನ ಬೇರೆ ಹೆಂಗಸರ ಅಪ್ಪುಗೆಯಲ್ಲೇ ಅನುಭವಿಸುತ್ತಿದ್ದ.

ಸಾವಿತ್ರಿ ಇದಕ್ಕಿಂತ ಭಿನ್ನವಾಗಿದ್ದಳು. ಆಕೆಯ ತಂದೆ ಒಂದು ತೊರೆ ದಾಟುವಾಗ ಆಕೆಯ ಜನನದ ಸುದ್ದಿ ತಿಳಿಯಿತು. ಸಾವಿತ್ರಿ ಕೂಡ ತನ್ನ ಜೀವನ ಮುಗಿಯುವದೊರಳಗೆ ಅದೆಷ್ಟೋ ತುಂಬಿದ ತೊರೆಗಳನ್ನ ದಾಟಿಬಿಡುತ್ತಾಳೆ ಅಂತ ಆತನಿಕೆ ಅನಿಸಿರಲಿಕ್ಕಿಲ್ಲ. ಹುಟ್ಟಿನ ಅಶುಭಕರ ಗಳಿಗೆ ಹರಡಿದ ನೆರಳಲ್ಲೇ ಆಕೆ ಬೆಳೆದಳು. ಮುಂದೆ ಆಕೆ ಮಾಡಿದ “ವಿಧ್ವಂಸಕ” ಕೃತ್ಯಗಳಿಗೆ ಅರ್ಥೈಸಿಕೊಳ್ಳಲಾಗದೆ, ಅರಗಿಸಿಕೊಳ್ಳಲಾಗದೆ ಈ ಅಶುಭಕರ, ಅಪಶಕುನ ತಾರಕೆಗಳ ಕಲ್ಪಿತ ಕತೆಗಳನ್ನ ಹೆಣೆಯಲಾಯಿತು. ಯಾರಿಗೂ ಅವಳು ಏಕೆ ಹಾಗೆ ಮಾಡಿದಳೆಂದು ವಿವರಿಸಲು, ಸಮಜಾಯಿಷಿ ನೀಡಲು ಸಾಧ್ಯವಿಲ್ಲದ ಕಾರಣ ಹುಟ್ಟಿದ ನಕ್ಷತ್ರಗಳನ್ನು ದೂರಲಾಯಿತು. ತಾತ್ರಿಯ ತಂದೆಗೆ ಅವಳಿಗೆ ಓದು ಕಲಿಸುವಷ್ಟು ಕಾಳಜಿಯಿತ್ತು. ಅವಳ ಸುಮಧುರ ಕಂಠದಿಂದ ಮಂತ್ರ ಪತಿಸುವುದನ್ನ ಕೇಳಿರುವವರಿದ್ದರು.

ಹದಿನೆಂಟನೆ ವಯಸ್ಸಿಗೆ ಮದುವೆ ದಶಕಗಟ್ಟಲೆ ಹಿರಿಯನಾದ ವೃದ್ದನೊಂದಿಗೆ. ತುಂಬಾ ಅಸಭ್ಯವಾಗಿ ನೆಡೆದುಕೊಂಡು ಮನೆಯಲ್ಲಿ ಕಸ ಮುಸರೆ ತೊಳೆಯಲು ಸಾವಿತ್ರಿಯನ್ನ ತೊರೆದುಹೋದನಂದು ಕೆಲವರು ಹೇಳಿದರೆ, ಇನ್ನು ಕೆಲವರು ಆಕೆ ಬಹಳ ಬೇಗ ವಿಧವೆಯಾಗಿ, ಮಿಕ್ಕ ಜೀವನವನ್ನ ನಾಲ್ಕು ಗೋಡೆಗಳ ನಡುವೆ ಪೂಜೆ ಪುನಸ್ಕಾರಗಳ ಮಾಡುತ್ತಾ ಕಳೆಯುವ ಭೀತಿ ಎದುರಿಸಿದವಳೆನ್ನುತ್ತಾರೆ. ಆಕೆ ಯುವತಿ, ಸುಂದರಿ ಆದರೆ ಸುಖ ಪಡುವ ವಯಸ್ಸಿನಲ್ಲಿ ತನ್ನ ಅಸ್ತಿತ್ವ ಅಸ್ಮಿತೆಗಳನ್ನೇ ಮರೆತು ಬಿಡಬೇಕೆಂಬ ಸಾಮಾಜಿಕ ಒತ್ತಡ. ಅದೇನೇ ಇರಲಿ ಸಾವಿತ್ರಿ ಮನೆಯಲ್ಲೇ ಕಸ ಮುಸರೆ ತೊಳೆದುಕೊಂಡಿರಲು ಅಥವಾ ಪೂಜೆ ಪುನಸ್ಕಾರ ಮಾಡಿಕೊಂಡು ಜೀವನ ಸವೆಸಿಬಿಡಲು ತಯಾರಿರಲಿಲ್ಲ. ಸಾವಿತ್ರಿ ವಿಲಾಸ, ವಿನೋದ ಬಯಸಿದ ಹೆಣ್ಣು.

ಒಂದು ದಿನ ನಾಟಕ ನೋಡುವಾಗ ಸದಾ ಪರ ಸತಿಯಾರಿಗೆ ಆಸೆ ಪಡುವ ಕೀಚಕನ ಪಾತ್ರ ಮಾಡುತ್ತಿದ ಕಥಕ್ಕಳಿ ನಟನ ಜೊತೆ ಬೆರೆತು ಸುಖಿಸಿದಳು. ಇಬ್ಬರು ಒಂದು ಕೊಳ ಪಕ್ಕ ಸೇರಿ ಇಬ್ಬರು “ಕಲುಷಿತರಾದರು”, ಅವರ ಇಡಿಯ ಕ್ರೀಡೆ ಮಾತ್ರ “ಶುದ್ದವಾದ” ಕೊಳದಲ್ಲಿ ಪ್ರತಿಫಲಿಸುತ್ತಿತ್ತು. ಸಾವಿತ್ರಿ ಅನೇಕ ಪುರುಷರ, ಹಲವು ಕಡೆ ಸುಖಿಸಿದಳು. ಸಮಾಜ ಅವಳಿಗೆ ಪರಿಶುದ್ಧಳಾಗು, ಶೀಲ ಕಾಪಾಡಿಕೊ ಎಂದು ಆಜ್ಞೆಯಿತ್ತರೆ ಆಕೆ ಎಲ್ಲರಿಗು ತನ್ನ ತನು/ಮನದ ಕದ ತೆರೆದಳು. ಉಲ್ಲಂಘನೆ, ಪ್ರತಿಭಟನೆಯ ಕಿಚ್ಚು ಅವಳನ್ನ ಉಕ್ಕಿನಷ್ಟು ಗಟ್ಟಿಯಾಗಿಸಿತ್ತು. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಅವಳು ಯಾವುದೇ ಪ್ರಚೋದನೆಗೆ ಒಳಗಾಗಬಾರದಿತ್ತು. ಆದರೆ ಅವಳು ಅವಳ ಮನಸ್ಸಿಗೆ ಬಂದದ್ದೆ ಮಾಡಿದ್ದು. ನೂರಾರು ಗಂಡಸರು ಆಕೆಯ ಸಖ್ಯ ಬಯಸಿ ಬಂದರು.

ಒಂದು ದಿನ ಹೀಗೆ ಸುಖ ಅರಸಿಬಂದವನೊಬ್ಬ ಕೋಣೆಯಿಂದ “ ಈಕೆ ವೇಶ್ಯೆಯಲ್ಲ. ಕುರಿಯೆಡತು ಮನೆತನದ ಸಾವಿತ್ರಿಯೀಕೆ. ಇವಳೊಬ್ಬ ಅಂತರ್ಜನಂ. ಈಕೆ ಪಾಪ ಮಾಡುತ್ತಿದ್ದಾಳೆಂದು” ಕೂಗುತ್ತ ಹೊರ ಓಡಿಬಂದ. ಅವನಿಗೆ ಆಕೆ ಗುರುತು ಸಿಕ್ಕಿಬಿಟ್ಟಿತ್ತು. ಆ ವರುಷ 1905. ಹಗರಣ ಬಯಲಾಗಿ ಎಲ್ಲೆಡೆ ಕೋಪದ ಕಟ್ಟೆ ಹೊಡೆದಿದ್ದವು. ಇಡಿಯ ಕೇರಳ ತನ್ನ ಉಸಿರು ಬಿಗಿ ಹಿಡಿದು ಕುಳಿತಿತ್ತು. ಆಧುನಿಕತೆಯ ಅಲೆಗಳು ಕೇರಳ ಕಡಲ ದಡಕ್ಕೆ ಅಪ್ಪಳಿಸಿದರು ಅದರಿಂದ ದೂರವೇ ಉಳಿದಿದ್ದರು ನಂಬೋದರಿಗಳು. ಎಲ್ಲ ಹೊಸತುಗಳಿಗೆ ವಿಮುಖರಾಗಿ ಬದುಕು ಸಾಗಿಸಿದ್ದರು. “ They were too exalted to care, too wealthy to change.” ಇಂತಹ ನಂಬೋದರಿಗಳ ಪ್ರಪಂಚ ಹಠತ್ತನೆ ಮುಳುಗ ತೊಡಗಿತ್ತು. ಅವರ ಹಾಯಿ ದೋಣಿಯಲ್ಲಿ ಆಗಲೇ ರಂದ್ರಗಳಿದ್ದವು ಆದರೀಗ ಸಾವಿತ್ರಿ ದೋಣಿಯನ್ನೇ ಸಿಡಿಸಿಬಿಟ್ಟಿದ್ದಳು. ಮೇಲ್ಜಾತಿ ವರ್ಗದ ಅಹಂಕಾರ ಮಣ್ಣು ಮುಕ್ಕಿತ್ತು. ಕೊಚ್ಚಿಯ ರಾಜ ತನಿಖೆಗೆ ಆದೇಶ ನೀಡಿದ. ಇದಕ್ಕಿಂತ ಮುಂಚೆಯೇ ಕೆಲ ನಂಬೋದರಿ ಮಹಿಳೆಯರು ಇದೇ ರೀತಿಯ ಸಾಹಸ ಮಾಡಿದ್ದರು. ಅವರಂತೆ ಸಾವಿತ್ರಿಯನ್ನೂ ಬಹಿಷ್ಕರಿಸುವ ನಿರ್ಧಾರವಾಯಿತು. ಸಾವಿತ್ರಿಯ ಕುಟುಂಬ ಅವಳ ಅಂತ್ಯಸಂಸ್ಕಾರ, ಶ್ರಾದ್ದ ಮಾಡಲು ಮುಂದಾಯಿತು. ತನ್ನ ಮನೆಯ ಎಲ್ಲಾ ಕದವನ್ನ ಮುಚ್ಚಿ ಅವಳ ಮುಖ ನೋಡುವುದಿಲ್ಲವೆಂದು ನಿಶ್ಚಯಿಸಿತು. ಶಾಪಗ್ರಸ್ತ ವೇಶ್ಯೆಯೊಬ್ಬಳು ಅಲ್ಲಿಗೆ ಸುಮ್ಮನಾಗಿಬಿಡುತ್ತಾಳೆ ಅನ್ನೋದು ಅವರ ಅಂದಾಜಾಗಿತ್ತು.

ಆದರೆ ಸಾವಿತ್ರಿ ಬೇರೆಲ್ಲರಂತಿರಲಿಲ್ಲ. ಆಕೆ ಸುಮ್ಮನಿರಲಿಲ್ಲ. “ ನಾನೊಬ್ಬಳೆ ಪಾಪ ಮಾಡಲಿಲ್ಲ. ನಾನೊಬ್ಬಳೆ ಕಾನೂನು ಮುರಿಯಲು ಸಾಧ್ಯವಿಲ್ಲ” ವೆಂದು ಸಿಡಿದೆದ್ದಳು. ನನ್ನ ಬಳಿ ಸುಖ ಬಯಸಿಬಂದವರ ಮೇಲೂ ಕೇಸ್ ದಾಖಲಿಸಬೇಕು. “ I did not break the law alone.” ಸಾವಿತ್ರಿ ವಿಶ್ವಾಸಘಾತುಕ ಕ್ಯಾಟಲಾಗ್ ಒಂದನ್ನೇ ಎಲ್ಲರ ಮುಂದೆ ತೆರೆದಿಟ್ಟಳು. ನಡೆದಾಡುವ ದೇವರುಗಳು, ಘನತೆವೆತ್ತವರು ಅವಳೊಡನೆ ನಡೆಸಿದ ಸರಸ ಸಲ್ಲಾಪ, ಅವರ ಮೈ ಮೇಲಿದ್ದ ಮಚ್ಚೆಯ ಗುರುತುಗಳ ವಿವರ ಎಲ್ಲರ ಮುಂದೆ ತೆರೆದಿಟ್ಟಳು. ಅವರ ಮಿಲನದ ದಿನಗಳು, ಆ ಮಹಾಪುರುಷರ ಕೌಟುಂಬಿಕ ವಿವರಗಳನೆಲ್ಲಾ ಆಕೆ ಬರೆದಿಟ್ಟುಕೊಂಡಿದ್ದಳು. ಸಾವಿತ್ರಿ ಯಾವುದೇ ಶಿಕ್ಷೆ ಅನುಭವಿಸಲು ತಯಾರಿದ್ದಳು ಆದರೆ ಜೊತೆಗೆ ಈ ಮಹಾಪುರುಷರನ್ನು ಕರೆದುಕೊಂಡು ಹೋಗಬೇಕೆಂದು ಸಂಕಲ್ಪ ಮಾಡಿದ್ದಳು. They gathered in judgement, certain the slut would fail. But the slut was clever, and there was no escape.

ಸಾವಿತ್ರಿಯ ಪಟ್ಟಿಯಲ್ಲಿ ಒಂದು ಸೇನಾ ದಳವೇ ಇತ್ತು. ಅಲ್ಲಿ ದುರ್ಬಲ ವೃದ್ದರಿದ್ದರು, ಸಮಾಜ ಗೌರವಿಸುವ ಹಿರಿಯರಿದ್ದರು, ವೇದ ಪಾರಂಗತರಿದ್ದರು, ಆಕರ್ಷಕ ನಟರಿದ್ದರು, ಸಂಸ್ಕೃತ ಪಂಡಿತರಿದ್ದರು, ಧನಿಕ ವ್ಯಾಪಾರಿಗಳಿದ್ದರು, ದೇವಾಲಯದ ಅರ್ಚಕರಿದ್ದರು, ಅಕ್ಕ ತಂಗಿಯರ ಗಂಡಂದಿರಿದ್ದರು, ಗಂಡನ ತಮ್ಮನಿದ್ದ, ಉನ್ನತ ಅಧಿಕಾರಿಗಳಿದ್ದರು, ಆಗಲೇ ಸತ್ತು ಸ್ಮಶಾನ ಸೇರಿದವರಿದ್ದರು.

ಪರದೆಯ ಹಿಂದೆ ಸಾವಿತ್ರಿಯನ್ನ ನಿಲ್ಲಿಸಿ ವಿಚಾರಣೆ ನಡೆಸುತ್ತಿದ್ದವ ಕೂಗಿದ “ನೀ ಒಪ್ಪಿಕೊ” ಎಂದು. ಆಕೆ ಆತನ ಸಹೋದರರ ಹೆಸರೇಳಿ ಅವರೆಲ್ಲರ ಗುರುತು ಹೇಳಿದಳು, ಸಾಕ್ಷಿ ನೀಡಿದಳು! ತುಂಬಿದ ಸಭಾಂಗಣದಲ್ಲಿ ಅಂದು ನೂರಾರು ಗಂಡಸರ ತೋರಿಕೆ, ಆಡಂಬರ, ಸುಳ್ಳು ಪ್ರತಿಷ್ಠೆಗಳಿಗೆ ಬಲವಾಗಿ ಇರಿದಳು. ನೂರಾರು ಗೌರವಾನ್ವಿತರ ಮುಖವಾಡ ಕಳಚಿ ಬಿಟ್ಟಳು. ಪರದೆ ಹಿಂದೆ ನಿಂತ ಸಾವಿತ್ರಿ ಅಂದು ನೂರಾರು ಜನರನ್ನ ಬೆತ್ತಲಾಗಿಸಿದ್ದಳು.

ಕೊಚ್ಚಿಯ ರಾಜ ಹೌಹಾರಿಹೋದ. ಈ ಕೇಸ್ ನಿಲ್ಲಿಸಿಬಿಡಿ ಎಂದು ಆಜ್ಞೆಯಿತ್ತ. “ಸಾಕು ಸಾಕು ಇನ್ನಷ್ಟು ಹೆಸರುಗಳನ್ನ ಆಕೆಯ ಬಾಯಲ್ಲಿ ಕೇಳಲಾರೆ. ನಿಲ್ಲಿಸಿಬಿಡಿ ಈ ವಿಚಾರಣೆಯನ್ನ ಎಂದ.” ಅರವತ್ತ ನಾಲ್ಕು ಹೆಸರುಗಳನ್ನ ಹೊರ ಹಾಕಿದ್ದ ಸಾವಿತ್ರಿಯ ಪಟ್ಟಿಯಲ್ಲಿ ಅರವತ್ತೈದನೆ ಹೆಸರು ರಾಜನದ್ದೇ ಆಗಿತ್ತೆ?

ಸಾವಿತ್ರಿ ನಿರ್ಲಜ್ಜೆಯಿಂದ ಬದುಕಿದಳು. ಆಕೆಯ ತಂದೆ ಮಗಳು ಸತ್ತಳೆಂದು ಘೋಷಿಸಿಬಿಟ್ಟ. ಮನೆ ಪಾಳು ಬಿತ್ತು. ಅವಳ ಗಂಡ ಅವಳಿಂದ ದೂರ ಸರಿದ. ಸರಸವಾಡಿದ ಗಂಡಸರು ಅಪಕೀರ್ತಿಯ ಭಾರಕ್ಕೆ ಕುಸಿದುಹೋದರು. ಸಾವಿತ್ರಿಯ ಜೊತೆ ಸರಸವಾಡಿದವರ ಮಕ್ಕಳು ಕೂಡ ಅಲ್ಲಿನ ಸಮಾಜ ತಿರಸ್ಕರಿಸಿತು. ಆದರೆ ಸಾವಿತ್ರಿ ಎಂದಿಗೂ ನಾಚಿಕೆಯಿಂದ ತಲೆತಗ್ಗಿಸಲಿಲ್ಲ. ಆಕೆ ಬೆಟ್ಟಗಳನ್ನ ದಾಟಿ ತಮಿಳುನಾಡಿಗೆ ಹೋಗಿ ಬಿಟ್ಟಳಂತೆ. ಅಲ್ಲಿ ಆಂಗ್ಲೋ ಇಂಡಿಯನ್ ಒಬ್ಬರ ಮನೆಯಲ್ಲಿ ನೆಲೆಸಿ, ಮುಸ್ಲಿನನ್ನ ಮದುವೆಯಾದಳಂತೆ. ಕೇರಳದ ಸರೋವರಗಳ ಶುದ್ದತೆ ಪಾವಿತ್ರ್ಯತೆ ಹಾಳು ಮಾಡಿ ಸೇಡಿನಲ್ಲಿ ಮಿಂದೆದ್ದಳಂತೆ ಸಾವಿತ್ರಿ.

ಈ ಘಟನೆಯ ನಂತರ ನಂಬೋದರಿಗಳು ಶತಮಾನಗಳ ಮಂಪರಿನಿಂದ ಒಮ್ಮೆಲೇ ಎಚ್ಚರಗೊಂಡರು. ಕಾಲ ಬದಲಾಗಿದೆ, ನಾವು ಕೂಡ ಬದಲಾಗಬೇಕೆಂಬ ಅರಿವು ಅವರಲ್ಲಿ ಮೂಡಿತು. ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ಗಂಡಸರು ಕರೆ ನೀಡಿದರು. Women began to speak: ಆರ್ಯ ಪಲ್ಲೊಂ ಗಂಡಸರ ಮುಂದೆ ಗುಡುಗಿದಳು; ಕೆ ದೇವಿಕ ವಿಧಾನಸಭೆ ಪ್ರವೇಶಿಸಿದಳು, ಲಲಿತಾಂಬಿಕ ಅಂತರ್ಜನಂ ನಂಬೋದರಿ ಹೆಂಗಸರ ಕರಾಳ ಬದುಕು, ಬವಣೆಗಳ ಕುರಿತು ಕಥೆ ಬರೆದಳು. ಗಂಡಸರು ಅಂಗಿ ಧರಿಸಲು ಶುರು ಮಾಡಿದರೆ, ಮಹಿಳೆಯರು ರಂಗು ರಂಗಿನ ರವಿಕೆ ತೊಡಲು ಮುಂದಾದರು. ವಿಧವೆಯರು ಮರುವಿವಾಹವಾದರು. ಮಡಿ, ಸದಾ ಛತ್ರಿ ಹಿಡಿದು ಸಾಗುವ ಪದ್ಧತಿ ಮಾಯವಾಯಿತು. ವರುಷಗಳು ಕಳೆದವು. ಹೊಸ ಹೊಸ ಸವಾಲುಗಳು ಹುಟ್ಟಿಕೊಂಡವು. ಜನ ಆ ಸವಾಲುಗಳ ಉತ್ತರ ಕಂಡುಹಿಡಿಯುವಲ್ಲಿ ಮಗ್ನರಾದರು. ಅದರೂ ಇದೆಲ್ಲಾದರ ನಡುವೆ ಕೊಂಚ ಭಯ ಮತ್ತು ಅಪರಿಮಿತ ಸಾಗರದಷ್ಟು ಗೌರವ, ಅಭಿಮಾನಗಳೊಂದಿಗೆ ಆ ವೇಶ್ಯೆಯ ಹೆಸರು ಪಿಸುಮಾತಿನಲ್ಲಾದರು ಕೇಳುತ್ತಲೇ ಇತ್ತು. ಆ ವೇಶ್ಯೆ ಕಾಲವಾದಳು ಆದರೆ ಅವಳು ಅಂದು ಎತ್ತಿದ ದನಿ ಮಾತ್ರ ಹಾಗೆ ಉಳಿದಿದೆ.

ಮೂಲ: ಮನು ಎಸ್ ಪಿಳ್ಳೈ ( Savitri’s Revenge: The story of how this ‘antharjanam’ shook the imperfect world of Namboodiri men.)

ಅನುವಾದ: ಹರೀಶ್ ಗಂಗಾಧರ್