ಜ.5ರಂದು ರಂದು ಮಾನ್ಯ ಪ್ರಧಾನ ಮಂತ್ರಿಗಳು ಪಂಜಾಬ್‍ನ ಫಿರೋಜ್‍ಪುರದ ರ್ಯಾಲಿಯಲ್ಲಿ ಭಾಗವಹಿಸಲು ಹೋಗುತ್ತಿದ್ದ ಸಂದರ್ಭದಲ್ಲಿ ಭದ್ರತಾ ವೈಫಲ್ಯದಿಂದಾಗಿ ವಾಪಾಸ್ಸಾಗಿರುವ ಘಟನೆಯು ತುಂಬಾ ಖಂಡನೀಯ ಮತ್ತು ವಿಷಾಧನೀಯ ಸಂಗತಿಯಾಗಿದೆ. ಈ ಘಟನೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಕಪ್ಪು ಚುಕ್ಕೆಯಾಗಿದೆ. ದೇಶದ ಉನ್ನತ ಸ್ಥಾನದಲ್ಲಿರುವ ಒಬ್ಬ ಪ್ರಧಾನಿಗೆ ಸರಿಯಾದ ಭದ್ರತೆಯನ್ನು ಒದಗಿಸಲು ಭದ್ರತಾ ಪಡೆಗಳು ವಿಫಲವಾಗಿರುವುದನ್ನು ಗಮನಿಸಿದರೆ ದೇಶದ ಸಾಮಾನ್ಯ ಮನುಷ್ಯನ ಬದುಕಿನ ಭದ್ರತೆ ಬಗ್ಗೆ ಪ್ರಶ್ನೆ ಏಳುತ್ತದೆ ಎಂದು ದಾವಣಗೆರೆಯ ಹಿರಿಯ ವಕೀಲ, ಹೋರಾಟಗಾರ ಅನೀಸ್ ಪಾಷ ತಿಳಿಸಿದ್ದಾರೆ.
ವಾಸ್ತವದಲ್ಲಿ ವಿಷೇಶ ಗಣ್ಯ ವ್ಯಕ್ತಿಗಳಿಗೆ ಎಸ್.ಪಿ.ಜಿ (ಸ್ಪೆಷಲ್ ಪ್ರೊಟೆಕ್ಚನ್ ಗ್ರೂಪ್) ಇದ್ದು, ಅವರ ಭದ್ರತೆ ಬಗ್ಗೆ ವಿಷೇಶವಾದ ಜವಾಬ್ದಾರಿಯನ್ನು ಹೊಂದಿರುತ್ತಾರೆ. ನಂತರದಲ್ಲಿ ವಿಷೇಶ ಸೇನಾ ಅಧಿಕಾರಿಗಳ ತಂಡ ಭದ್ರತೆಯನ್ನು ನೀಡುತ್ತದೆ. ಈ ಎರಡೂ ಪಡೆಗಳ ಭದ್ರತೆಯ ನಂತರದಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳ ತಂಡವು ಭದ್ರತೆಯನ್ನು ನೀಡುತ್ತದೆ ಹಾಗೂ ಗಣ್ಯ ವ್ಯಕ್ತಿಗಳು ಸಾಗುವ ದಾರಿಯಲ್ಲಿ ಎರಡು-ಮೂರು ಬಾರಿ ಅಭ್ಯಾಸ ಕೂಡ ಮಾಡಲಾಗುತ್ತದೆ. ಹೀಗಿದ್ದಾಗ ಇಷ್ಟು ಭದ್ರತೆ ಇದ್ದರೂ ಕೂಡ ಕರ್ತವ್ಯಲೋಪವಾಗಲು ಹೇಗೆ ಸಾಧ್ಯ ಎಂಬುವುದು ದೊಡ್ಡ ಪ್ರಶ್ನೆಯಾಗಿದೆ.
ಹೆಲಿಕ್ಯಾಪ್ಟರ್ ಮೂಲಕ ಹೋಗಬೇಕಾಗಿದ್ದ ಮಾರ್ಗ ಬದಲಾಯಿಸಿ ಮಾನ್ಯ ಪ್ರಧಾನಿಗಳು ಸಾಗಲು ನಿರ್ದರಿಸಿದ ದಾರಿಯಲ್ಲಿ ಮುಂಚೆಯಿಂದಲೇ ರೈತರು ಪ್ರತಿಭಟನೆ ನಡೆಸುತ್ತಿರುವ ಮಾಹಿತಿ ಗೊತ್ತಿದ್ದೂ ರೈತರನ್ನು ಅವಮಾನಿಸುವ ಉದ್ದೇಶದಿಂದ ದಾರಿ ಬದಲಾಯಿಸಿರಬಹುದೇ ಎಂಬ ಅನುಮಾನ ಕೂಡ ಮೂಡುತ್ತದೆ.
ಪಂಜಾಬ್‍ನ ಮಾನ್ಯ ಮುಖ್ಯ ಮಂತ್ರಿಗಳಾದ ಚರಣ್‍ಜಿತ್‍ಸಿಂಗ್ ಚನ್ನಿಯವರ ಹೇಳಿಕೆಯಂತೆ ಮತ್ತು ಬಿಡುಗಡೆ ಮಾಡಿರುವ ದಾಖಲೆಯಂತೆ ಮಾನ್ಯ ಪ್ರಧಾನ ಮಂತ್ರಿಗಳು ವಾಯು ಮಾರ್ಗವಾಗಿ ಕಾರ್ಯಕ್ರಮದ ಸ್ಥಳಕ್ಕೆ ಹೋಗುವ ನಿರ್ದೇಶನವಿದ್ದು, ನೆಲ ಮಾರ್ಗದಲ್ಲಿ ಹೋಗುವ ಕಾರ್ಯಕ್ರಮ ಮೂಲ ಪಟ್ಟಿಯಲ್ಲಿ ಇರಲಿಲ್ಲ. ಹೀಗಿದ್ದಾಗ ಏಕಾಏಕಿ ಯೋಜನೆಯನ್ನು ಬದಲಿಸಿದ್ದಾರೆ ಎಂದು ತಿಳಿಸಿರುತ್ತಾರೆ. ವಿರೋಧ ಪಕ್ಷಗಳ ಹೇಳಿಕೆಯಂತೆ ಮಾನ್ಯ ಪ್ರಧಾನ ಮಂತ್ರಿಗಳು ಭಾಗವಹಿಸಬೇಕಾಗಿದ್ದ ಸಭೆಯಲ್ಲಿ 70,000 ಜನ ಸೇರಬೇಕಾಗಿತ್ತು. ಆದರೆ ಕೇವಲ 700 ಜನ ಸೇರಿರುವುದರಿಂದ ಕಾರ್ಯಕ್ರಮ ಮೊಟಕುಗೊಳಿಸಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದು ಆರೋಪಿಸಿರುತ್ತಾರೆ. ಹಾಗಾದರೆ ಈ ಒಂದು ಘಟನೆಯನ್ನು ಎರಡೂ ಪಕ್ಷಗಳು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರಬಹದೇ ಎಂಬ ಅನುಮಾನ ಮೂಡುತ್ತದೆ ಹಾಗೂ ಮಾನ್ಯ ಪ್ರಧಾನ ಮಂತ್ರಿಗಳು ” ಅಪ್ನೆ ಸಿಎಂ ಕೋ ಥ್ಯಾಂಕ್ಸ್ ಕೆಹ್ನಾ, ಕಿ ಮೈ ಭಟಿಂಡಾ ಏರ್‍ಪೋರ್ಟ್ ತಕ್ ಝಿಂದಾ ಲೌಟ್ ಪಾಯಾ ” (ನಾನು ಭಟಿಂಡಾ ವಿಮಾನ ನಿಲ್ದಾಣದ ತನಕ ಜೀವಂತ ಮರಳಲು ಸಾಧ್ಯವಾಗಿದ್ದಕ್ಕೆ ನಿಮ್ಮ ಮುಖ್ಯ ಮಂತ್ರಿಗೆ ಧನ್ಯವಾದ ತಿಳಿಸಿ) ಎಂದು ಹೇಳಿರುವ ಮಾತುಗಳು ತಂಬಾ ಸೂಕ್ಷ್ಮ ವಿಚಾರವಾಗಿದ್ದು, ಆ ಸ್ಥಳದಲ್ಲಿ ನಿಜವಾಗಲು ಪ್ರಧಾನಿಗಳ ಜೀವಕ್ಕೆ ಅಪಾಯವಿತ್ತೇ ಎಂಬುವುದನ್ನು ನ್ಯಾಯಾಂಗವು ತೀರ್ವವಾದ ತನಿಖೆ ಮಾಡಬೇಕಾಗಿದೆ. ಇಂತಹ ಭದ್ರತಾ ವೈಫಲ್ಯದ ವಿಚಾರವನ್ನು ಯಾವುದೇ ಪಕ್ಷದವರು ರಾಜಕೀಯ ಲಾಭ ಪಡೆಯಬಾರದು. ಇದು ನಮ್ಮ ದೇಶದ ಘನತೆಯ ಮತ್ತು ಆಂತರಿಕ ಭದ್ರತೆಯ ಪ್ರಶ್ನೆಯಾಗಿದೆ.
ಆದ್ದರಿಂದ ಮಾನ್ಯ ರಾಷ್ಟ್ರಪತಿಗಳು ಈ ವಿಷಯವನ್ನು ತುಂಬಾ ಗಂಭೀರವಾಗಿ ಪರಿಗಣಿಸಿ ಪಚಿಜಾಬ್ ಉಚ್ಚ ನ್ಯಾಯಮೂರ್ತಿಗಳಿಂದ ತನಿಖೆಗೆ ಒಳಪಡಿಸಬೇಕೆಂದು ಅನೀಸ್ ಪಾಷ ಮನವಿ ಮಾಡಿದ್ದಾರೆ.