ಕುಷ್ಟಗಿ: ಶನಿವಾರ ಸಂಜೆ ಸುರಿದ ಮಳೆಗೆ ಹಳ್ಳಕ್ಕೆ ಪ್ರವಾಹ ಬಂದು ವ್ಯಕ್ತಿಯೊಬ್ಬ ನೀರಿನಲ್ಲಿ ಕೊಚ್ಚಿಹೋಗಿರುವ ಘಟನೆ ತಾಲ್ಲೂಕಿನ ಹಿರೇಮನ್ನಾಪುರ ಗ್ರಾಮದಲ್ಲಿ ನಡೆದಿದೆ.
ಬುಡನ್‌ಸಾಬ್ ಅಗಸಿಮುಂದಿನ (65) ಮೃತ ವ್ಯಕ್ತಿ. ಹಸು ಮೇಯಿಸಲು ಜಮೀನಿಗೆ ತೆರಳಿದ್ದ ಇವರು ಚಾಕ್ರಿ ಹಳ್ಳದ ಪ್ರವಾಹಕ್ಕೆ ತುತ್ತಾಗಿದ್ದಾರೆ. ಹಸು ಮನೆಗೆ ಬಂದರೂ ಬುಡನ್‌ಸಾಬ್ ಮಾತ್ರ ಮರಳದಿರುವುದು ಅನುಮಾನಕ್ಕೆ ಕಾರಣವಾಗಿತ್ತು. ನಂತರ ಹುಡುಕಾಟ ನಡೆಸಿದಾಗ ತಡರಾತ್ರಿ ಶವ ಪತ್ತೆಯಾಗಿದೆ. ಈ ಕುರಿತು ಮೃತನ ಪುತ್ರ ನೀಡಿದ ದೂರಿನ ಅನ್ವಯ ಪ್ರಕರಣ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ತಹಶೀಲ್ದಾರ್ ಎಂ.ಸಿದ್ದೇಶ್ ಭಾನುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಕುಟುಂಬದವರಿಗೆ ಪರಿಹಾರ ಮಂಜೂರು ಮಾಡಿಸುವ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.