(ತಮಿಳು ಕವಿ ಇನ್ಕಿಲಾಬ್ ಅವರ ಪುಟ್ಟ ಪರಿಚಯ)
ಕನ್ನಡಕ್ಕೆ ಜ್ಞಾನಪೀಠ ಜಸ್ಟ್ ಮಿಸ್ ಆಗಿದಕ್ಕೆ ಕನ್ನಡಿಗರು ಸಂತಸ ವ್ಯಕ್ತ ಪಡಿಸುತ್ತಿದ್ದಾರೆ. It should have been the opposite.. ನಮ್ಮ ಸಾಹಿತಿಗಳಿಗೆ ಶಿಫಾರಸ್ಸು ಮಾಡಿಸಿಕೊಂಡು ಪ್ರಶಸ್ತಿ ಪಡೆದುಕೊಳ್ಳುವ ಹುಚ್ಚೇಕೆ? ಹಾರ ಶಾಲುಗಳನ್ನ ಹಾಕಿಸಿಕೊಂಡು ಪಲಕಗಳನ್ನ ಹಿಡಿದುಕೊಳ್ಳಲಿಕ್ಕೆ ಈ ರೀತಿಯ ತವಕವೇಕೆ? ಪ್ರಭುತ್ವ ನಡೆಸುವ ನಿರಂತರ ದಾಳಿಗಳ ಕುರಿತು, ಅನ್ಯಾಯಗಳ ಬಗ್ಗೆ ಒಂದೂ ಮಾತನ್ನಾಡದೆ ಪ್ರಾಧಿಕಾರ, ಪರಿಷತ್ತು, ಪ್ರತಿಷ್ಠಾನಗಳಲ್ಲಿ ಸ್ಥಾನ ಗಿಟ್ಟಿಸುವ ಹಂಬಲವೇಕೆ?
ಯಾವುದೇ ಪ್ರಶಸ್ತಿಗಳ ಆಸೆ ಪಡದೆ ದಮನಿತರ, ಶೋಷಿತರ ದನಿಯಾಗಿ ಪ್ರಭುತ್ವದ ವಿರುದ್ಧ ಸೆಟೆದು ನಿಂತ ಅನೇಕ ಲೇಖಕ/ಕವಿಗಳಿದ್ದಾರೆ. ನಮಗೆಲ್ಲ ಗೊತ್ತಿರುವ ಹಾಗೆ 1964ರಲ್ಲಿ ಜೀನ್ ಪಾಲ್ ಸಾರ್ತ್ ತನಗೆ ಸಿಕ್ಕ ನೊಬೆಲ್ ಪ್ರಶಸ್ತಿಯನ್ನೇ ನಿರಾಕರಿಸಿದ. “ಬರಹಗಾರ ಯಾವುದೇ ಅಧಿಕೃತ ಪ್ರಶಸ್ತಿಗಳನ್ನ ಸ್ವೀಕರಿಸಬಾರದು ಏಕೆಂದರೆ ಹಾಗೆ ಮಾಡುವುದರಿಂದ ಆತ ಒಂದು ಸಂಸ್ಥೆಯ ಪ್ರಭಾವಕ್ಕೆ ಒಳಗಾಗುತ್ತಾನೆ. ಸಂಸ್ಥೆಗಳು ಬರಿಯ ನನ್ನ ಲೇಖನಿಯ ಶಕ್ತಿ ಹಾಗು ಕೃತಿಯನ್ನ ಗುರುತಿಸಿ ಪ್ರಶಸ್ತಿ ನೀಡುತ್ತದೆ. That is not fair for the reader.” ಎಂದು ಹೇಳಿಕೆಕೊಟ್ಟ.
ಇಂತಹ ದುರಿತ ಕಾಲದಲ್ಲಿ ಓದುಗರನ್ನಷ್ಟೇ ಗಮನದಲ್ಲಿಟ್ಟುಕೊಂಡು ಬರವಣಿಗೆಯಲ್ಲಿ ತೊಡಗಿದ್ದ, ಯಾವ ಪ್ರಶಸ್ತಿಗಳನ್ನೂ ನಿರೀಕ್ಷಿಸದೆ, ಬಂದ ಪ್ರಶಸ್ತಿಗಳನ್ನ ತಿರಸ್ಕರಿಸಿ ಬಾಳಿ ಬದುಕಿದ ಇತ್ತೀಚಿನ ಲೇಖಕರೊಬ್ಬರನ್ನು ನಿಮಗೆ ಪರಿಚಯಿಸುವ ಇರಾದೆ ನನ್ನದು.ನಾನು ಸತ್ತಂತೆ ಬದುಕಿದ್ದರೆ ನನಗೆ ಪ್ರಶಸ್ತಿ ಪಡೆಯುವ ಗೌರವ ಸಿಗುತಿತ್ತು- Awards will honour me if I were to live like a corpse ಅಂತ ಘೋಷಿಸಿದ್ದು ತಮಿಳಿನ ಕವಿ ಇನ್ಕಿಲಾಬ್.
ಡಿಸೆಂಬರ್ 1, 2016ರಂದು ಇನ್ಕಿಲಾಬ್ ತಮ್ಮ 72ನೆಯ ಇಳಿ ವಯಸ್ಸಿನಲ್ಲಿ ಮರಣ ಹೊಂದಿದರು. ಅವರ “ಕಾಂದ್ಹಲ್ ನಾಟ್ಕಲ್” ತಮಿಳು ಕವನ ಸಂಕಲಕ್ಕೆ ಮರಣೋತ್ತರವಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಯಿತು. ಕುಟುಂಬ ವರ್ಗದವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನ ಸ್ವೀಕರಿಸಲು ನಿರಾಕರಿಸಿದರು. ಇನ್ಕಿಲಾಬ್ ಕುಟುಂಬದವರು ಅಕಾಡೆಮಿಯ ಕಾರ್ಯದರ್ಶಿಗೆ ಕಳುಹಿಸಿದ ಇಮೇಲ್ ಹೀಗಿತ್ತು-ಇನ್ಕಿಲಾಬ್ ಅವರ ಬರಹಗಳು ಜನ ಸಾಮಾನ್ಯರನ್ನ ತಲುಪಿದ್ದರ ಬಗ್ಗೆ ನಮಗೆ ತೃಪ್ತಿಯಿದೆ. ಒಬ್ಬ ಬರಹಗಾರನಿಗೆ ಜನರಿಂದ ಸಿಕ್ಕುವ ಮನ್ನಣೆಗಿಂತ ಹಮ್ಮೆಪಡುವ ವಿಷಯ ಬೇರೊಂದಿರಲಿಕ್ಕಿಲ್ಲ. ಆದಕಾರಣದಿಂದ ಅವರಿಗೆ ಅಕಾಡೆಮಿ ನೀಡಿದ ಈ ಗೌರವವನ್ನ ನಾವು ಸ್ವೀಕರಿಸಲಾರೆವು.
ಇನ್ಕಿಲಾಬ್ ಅವರು ಸದಾ ದನಿ ಇಲ್ಲದವರ, ದಮನಿತರ, ಸವಲತ್ತುಗಳಿಲ್ಲದರ ಹಾಗು ಹಿಂದುಳಿದ ವರ್ಗದವರ ದನಿಯಾಗಿದ್ದರು. ಇಷ್ಟೆಲ್ಲಾ ಜನರಿಂದ ಅವರಿಗೆ ಸಿಕ್ಕ ಪ್ರೀತಿ, ಗೌರವ ಮತ್ತು “ಜನ ಕವಿಯೆಂಬ” ಪ್ರಶಂಸೆ ಎಲ್ಲಕಿಂತ ದೊಡ್ಡದು. “ನಾನು ಪ್ರಶಸ್ತಿ, ಸನ್ಮಾನಗಳಿಗಾಗಿ ಬರೆಯುವುದಿಲ್ಲ ಬದಲಾಗಿ ನಾನು ಪ್ರತಿರೋಧ, ಖಂಡನೆ ಹಾಗು ಹೇವರಿಕೆಗಳನ್ನ ಮುಂಗಾಣುತ್ತೇನೆ” ಅಂತ ಇನ್ಕಿಲಾಬ್ ಅವರೇ ಹೇಳಿಕೊಂಡಿದ್ದರು.
ಅವರು ಬದುಕಿದ್ದಾಗಲೂ ತೀವ್ರ ಪ್ರತಿರೋಧಗಳನ್ನ ಧೈರ್ಯಯಿಂದ ಎದುರಿಸಿದ್ದರು. ಸರ್ಕಾರಗಳು ಬದಲಾಗುತ್ತವೆ ಆದರೆ ಎಲ್ಲ ಸರ್ಕಾರಗಳ ಮುಖವಾಡ ಒಂದೇ ಆಗಿರುತ್ತದೆ ಎಂದೇಳುತ್ತಿದ್ದರು. ಬದುಕಿದ್ದಾಗಲು ಅವರು ಸರ್ಕಾರ ನೀಡಿದ ಯಾವುದೇ ಪ್ರಶಸ್ತಿಯನ್ನು ಸ್ವೀಕರಿಸಲಿಲ್ಲ. ಇಂದು ದ್ವೇಷ ಹರಡುವ ದುಷ್ಟ ಶಕ್ತಿಗಳ ಉಪಟಳ ಹೆಚ್ಚಾಗಿ ಜಾತಿವಾದ, ಕೋಮುವಾದ ಹಾಗು ಧಾರ್ಮಿಕ ಮೂಲಭೂತವಾದ ಎಲ್ಲೆಡೆ ತಾಂಡವವಾಡುವಾಗ, ಭಿನ್ನಾಭಿಪ್ರಾಯಗಳನ್ನ ಉಸಿರುಗಟ್ಟಿಸಿ ಕೊಲ್ಲುವಾಗ ನಾವು ಪ್ರಶಸ್ತಿಯನ್ನು ಸ್ವೀಕರಿಸುವುದು ಇನ್ಕಿಲಾಬ್ ಅವರ ಬರಹಗಳಿಗೆ ಹಾಗು ಅವರ ಜೀವನಕ್ಕೆ ದ್ರೋಹ ಬಗೆದಂತಾಗುತ್ತದೆ.
1944ರಲ್ಲಿ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿ ಹುಟ್ಟಿದ ಸಾಹುಲ್ ಹಮೀದ್, ಇನ್ಕಿಲಾಬ್ (ಕ್ರಾಂತಿ) ಎಂಬ ಹೆಸರನ್ನ ಕಾವ್ಯನಾಮವಾಗಿಟ್ಟುಕೊಂಡರು. ಆಯ್ಕೆ ಮಾಡಿಕೊಂಡ ಹೆಸರಿಗೆ ತಕ್ಕ ಹಾಗೆ ತನ್ನ ಸುತ್ತ ಕಂಡ ಎಲ್ಲಾ ಸಾಮಾಜಿಕ ಪಿಡುಗುಗಳ ವಿರುದ್ದ ಸಮರ ಸಾರಿದರು. ಹನ್ನೆರಡನೆ ವಯಸ್ಸಿಗೇ ಬುದ್ದಿ ಮಾಂದ್ಯ ಬಾಲಕಿಯೊಬ್ಬಳ ಮೇಲೆ ದರ್ಗಾದಲ್ಲಿ ನಡೆದ ದೌರ್ಜನ್ಯ, ಕಿರುಕುಳಗಳ ಕುರಿತು ತಮ್ಮ ಮೊದಲ ಕವಿತೆ ಬರೆದರು. ಸಾಮಾಜಿಕ ಹಾಗು ಮಾರ್ಕ್ಸಿಯನ್ ವಿಚಾರಗಳನ್ನ ಮೈಗೂಡಿಸಿಕೊಂಡ 1970ರ ದಶಕದ “ವನಂಬಾಡಿ” ಕಾವ್ಯ ಚಳುವಳಿಯೊಂದಿಗೆ ಗುರುತಿಸಿಕೊಂಡಿದ್ದ ಇನ್ಕಿಲಾಬ್ ಕವಿತೆಗಳಲ್ಲಿ ಭಾವ ಮತ್ತು ಲಯಗಳ ಅಂಶಗಳಿಗೇನು ಕೊರತೆಯಿರಲಿಲ್ಲ ಎಂಬುದು ವಿಶೇಷ.
ಅವರ ಮಾರ್ಕ್ಸ್ಸಿಯನ್ ಒಲವನ್ನ ಅವರ ಸುಪ್ರಸಿದ್ದ ಕವಿತೆ “ಕಣ್ಮಣಿ ರಾಜಂ” ನಲ್ಲಿ ಕಾಣಬಹುದು. ರಾಜಕಾರಣಿಗಳಲ್ಲಿನ ನೈತಿಕ ದಿವಾಳಿತನವನ್ನ ತಮಿಳು ಜನರಿಗೆ ಮನಮುಟ್ಟುವಂತೆ ಹೇಳಿದ್ದೇ ಈ ಕವಿತೆ. ನನ್ನ ಲೇಖನಿ “ಸತ್ಯದ ಕಾವಿಗೆ ಕೆಂಪಾದ ಕಂಗಳಿಂದ, ಹಕ್ಕಿಗಾಗಿ ಬೇಡಿಕೆಯಿಡುವ ನಡುಗುವ ತುಟಿಗಳಿಂದ ಹಾಗು ಕ್ರೌರ್ಯ ವಿರುದ್ಧ ಏಳುವ ಕೈಗಳಿಂದ” ಕೆಲಸ ಮಾಡುತ್ತದೆಯೆಂದು ಹೇಳಿದ್ದರು ಇನ್ಕಿಲಾಬ್. (My pen was operated by the eyes reddened by the heat of honesty; trembling lips that demand rights and rising hands against cruelty.) ಪೆರಿಯಾರ ಅವರ ದ್ರಾವಿಡ ರಾಷ್ಟ್ರೀಯತೆ, ತಮಿಳು ರಾಷ್ಟ್ರೀಯತೆಯಿಂದ ಹಿಡಿದು ಮಾರ್ಕ್ಸ್-ಲೆನಿನಿಸಂ ಸಿದ್ದಾಂತಗಳ ಮೇಲೆ ಅಪಾರ ನಂಬಿಕೆಯಿಟ್ಟು ಬರೆದ ಇನ್ಕಿಲಾಬ್, ದ್ರಾವಿಡ ಚಳುವಳಿಯ ಮುಂಚೂಣಿಯಲ್ಲಿದ್ದರೂ, ತಮ್ಮ ನಾಯಕರು ನಿಷ್ಕ್ರಿಯರಾದಾಗ ಅವರ ವಿರುದ್ದ ಮುಲಾಜಿಲ್ಲದೆ ಸಿಡಿದೇಳುತ್ತಿದ್ದರು.
‘ಕೀಲವೆನ್ಮಣಿಯಲ್ಲಿ’ 44 ದಲಿತರ ನರಮೇಧ ನಡೆದಾಗ ದ್ರಾವಿಡ ನಾಯಕರು ತಾಳಿದ ಅಸಹನೀಯ ಮೌನ, ಸರ್ಕಾರದ ಕಣ್ಣೊರೆಸುವ ಆಶ್ವಾಸನೆಗಳಿಂದ ಬೇಸರಗೊಂಡು ತಮಿಳು-ದ್ರಾವಿಡ ಚಳುವಳಿಯಿಂದ ವಿಮುಖರಾಗಿ ಕಮ್ಯುನಿಸಂಕಡೆಗೆ ವಾಲಿದರು ಇನ್ಕಿಲಾಬ್. ಕೀಲವೆನ್ಮಣಿ ನರಮೇಧದ, ಜಾತಿ ಹಾಗು ವರ್ಗಗಳ ದಬ್ಬಾಳಿಕೆಗಳ ಕುರಿತು ಕೆರಳಿ ಬರೆದ “ಮನುಸಾಂಗದ…. ನಾಂಗ ಮನುಸಾಂಗದ” (Human beings, we are human beings) ಎಂಬ ಕವಿತೆ ನಂತರದ ದಿನಗಳಲ್ಲಿ ದಲಿತರ ಸ್ವಾತಂತ್ರ್ಯ ಗೀತೆಯಾಯಿತು. ದಮನಿತರ, ಶೋಷಿತರ, ತಳವರ್ಗದವರ ಕೋಪ, ವೇದನೆಗಳಿಗೆ ಈ ಕವಿತೆ ಕನ್ನಡಿ ಹಿಡಿಯಿತು.
ಈ ಕವಿತೆ ದಲಿತರ ಸೋಶಿಯಲ್ ಎಕ್ಸ್ ಕ್ಲೂಷನ್, ಒಂದು ಮಾಫಿಯಾದಂತೆ ಸರ್ಕಾರದಲ್ಲಿ ಕೆಲಸ ಮಾಡುವ ಕೆಲ ಜಾತಿಗಳ ದರ್ಪ ಹಾಗು ಪ್ರಾಬಲ್ಯತೆಯ ಬಗ್ಗೆ ಬೆಳಕು ಚೆಲ್ಲಿತು. ಕೋಲಪ್ಪಾಡಿ ಎಂಬ ಹಳ್ಳಿಯಲ್ಲಿ ಬಾವಿಯಿಂದ ನೀರು ಕುಡಿದ ಎಂಬ ಕಾರಣಕ್ಕೆ ದಲಿತ ಬಾಲಕರನ್ನ ಬರ್ಬರವಾಗಿ ಕೊಂದ ಘಟನೆಯ ಪ್ರಸ್ತಾಪವೂ ಈ ಪದ್ಯದಲ್ಲಿದೆ.ಕೋಲಪ್ಪಾಡಿಯ ಬಾವಿಯ ನೀರು ಮಗುವನ್ನ ಸುಟ್ಟುಬಿಟ್ಟಿತು.ನೀರು ಕೂಡ ಬೆಂಕಿಯಂತೆ ಧಗಧಗನೆ ಉರಿದುಬಿಟ್ಟಿತುಮೇಲ್ಜಾತಿಯವರನ್ನ ಆಳುವಾವರ ಯಾವ ಕಾನೂನು ತಾನೇ ಮುಟ್ಟೀತು?ನೀವೆ ಹಚ್ಚಿದ ಬೆಂಕಿಯಲಿ ಮಾಂಸ ಮೂಳೆಗಳು ಉರಿಯುತ್ತಲೇ ಇತ್ತುನಿಮ್ಮ ಸರ್ಕಾರ-ನ್ಯಾಯಾಲಯ ಉರಿವ ಬೆಂಕಿ ಎಣ್ಣೆ ಸುರಿಯುತ್ತಲೇ ಇತ್ತು. (The water in the well at Kolappadi burnt the child: The water too burnt like fire.Which Mirasdar was touched by the law of the rulers?The flesh and bones are steaming in the fire you lit: Your government and court pour oil on it.)
ಬಹುಶಃ ಇನ್ಕಿಲಾಬ್ ಸ್ವೀಕರಿಸಿದ ಏಕೈಕ ಪ್ರಶಸ್ತಿ “ಕಲೈಮಾಮಣಿ ಸಾಹಿತ್ಯ ಪ್ರಶಸ್ತಿ.” ಈ ಪ್ರಶಸ್ತಿಯನ್ನೂ ಕೂಡ 2006ರಲ್ಲಿ ತಮಿಳುನಾಡಿನ ಸರ್ಕಾರ ಶ್ರೀಲಂಕಾ ತಮಿಳರ ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳದೆ ಅಸಹಾಯಕವಾಗಿ ಕೂತಿದೆಯೆಂದು ಕಟುವಾಗಿ ಟೀಕಿಸಿ ಹಿಂದುರಿಗಿಸಿದರು. ನಮ್ಮ ಮುಗ್ಧ ಜನರಲ್ಲಿ ಸಾಯುವಾಗ ಈ ಪ್ರಶಸ್ತಿಗಳು ನನಗೆ ಮುಳ್ಳಿನಂತೆ ಚುಚ್ಚುತ್ತವೆಯೆಂದರು. ಅಂದು ಅವರು ಆಡಿದ ಒಂದು ಮಾತು ನನ್ನ ಮನದಲ್ಲಿ ಹಾಗೆ ಉಳಿದುಬಿಟ್ಟಿದೆ-State government establishments would recognize those who lived and those who were dead and those who “live like the dead.” ಈ ಬರಹದ ಉದ್ದೇಶ ಎಲ್ಲರು ಪ್ರಶಸ್ತಿ ಸ್ವೀಕರಿಸದೆ, ಅವುಗಳಿಂದ ದೂರ ಉಳಿಯಿರಿ ಎಂದೇಳುವುದು ಖಂಡಿತ ಅಲ್ಲ. ಪ್ರಶಸ್ತಿಗಳನ್ನ ಸ್ವೀಕರಿಸಲಿ. ಆದರೆ ಪ್ರಶಸ್ತಿ ಕೊಟ್ಟ ಸರ್ಕಾರ ಎಡವಿದಾಗ, ನೀಚ ಆಡಳಿತ ನಡೆಸಿದಾಗ ಪ್ರಶಸ್ತಿ ಹಿಂದುರಿಗಿಸಿ ನಿರ್ಭೀತಿಯಿಂದ ಸರ್ಕಾರವನ್ನ ಖಂಡಿಸುವ ತಾಕತ್ತು ಬೆಳೆಸಿಕೊಳ್ಳಿಯೆಂದು ಹೇಳುವುದೇ ಆಗಿದೆ. ಪ್ರಶಸ್ತಿಗಳಿಗೆ ಆಸೆ ಬಿದ್ದು ಕಣ್ಣಿದ್ದು ಕುರುಡರಾಗಬೇಡಿ, ದಿವ್ಯ ಮೌನಕ್ಕೆ ಶರಣರಾಗಬೇಡಿ, ಎಲ್ಲಕಿಂತ ಹೆಚ್ಚಾಗಿ ಪ್ರಭುತ್ವಕ್ಕೆ appropriate ಆಗಿಬಿಡಬೇಡಿಯೆಂದು ಎಚ್ಚರಿಸುವುದೇ ಆಗಿದೆ.
ಸಾರ್ತ್, ಇನ್ಕಿಲಾಬ್ ಅಂತ ಮಹನೀಯರಿದ್ದರು ಎಂದು ನಂಬಲಸಾದ್ಯವಾದಂತಹ ಕಾಲದಲ್ಲಿ ನಾವಿಂದು ಬದುಕುತ್ತಿದ್ದೇವೆ. ಕವಿಗಳ, ನಟರ, ಗಾಯಕರ ಮುಖವಾಡಗಳು ದಿನನಿತ್ಯ ಕಳಚಿಬಿದ್ದು “ಇವರೇನ ಅವರು” ಎಂದು ಭ್ರಮನಿರಸನರಾಗಿ ಕೇಳುವಂತಾಗಿದೆ. ಯಾವುದೇ ಬದ್ದತೆಯಿಲ್ಲದೆ ಮರದಲ್ಲಿನ ಮರ್ಕಟದಂತೆ ಆ ಪಂಥದಿಂದ ಈ ಪಂಥಕ್ಕೆ ಜಿಗಿಯುವವರ ಸಂಖ್ಯೆಯು ಹೆಚ್ಚಾಗಿದೆ. ಪುಸ್ತಕ ಬಿಡುಗಡೆ ಸಮಾರಂಭಗಳೇ ಮೆಗಾ ಇವೆಂಟ್ಗಳಂತೆ ನೆಡೆಯುವಾಗ ಯಾಕೋ ತನ್ನೆಲ್ಲಾ ಬರಹಗಳು mediocre ಆಗಿವೆ, ದಯವಿಟ್ಟು ನಾನೆಲ್ಲಾ ಬರಹಗಳನ್ನೂ ಸುಟ್ಟುಬಿಡು ಎಂದು ಗೆಳೆಯನಲ್ಲಿ ವಿನಂತಿಸಿಕೊಂಡ ಕಾಫ್ಕ ನೆನಪಾಗುತ್ತಾನೆ.
- ಹರೀಶ್ ಗಂಗಾಧರ್
(ಈ ಬರಹದ ಸಾಕಷ್ಟು ಮಾಹಿತಿ Frontlineನಲ್ಲಿ ಪ್ರಕಟವಾದ ಲೇಖನದಲ್ಲಿ ಓದಿದ್ದೆ. ನೆನಪಿನಲ್ಲಿತು. ಇಲ್ಲಿ ಬಳಸಿಕೊಂಡಿದ್ದೇನೆ)