Saturday, December 14, 2024
Homeಉತ್ತರ ಕರ್ನಾಟಕವಿಜಯಪುರಪ್ರೌಢಶಾಲಾ ಹೆಣ್ಣು ಮಕ್ಕಳಿಗೆ ‘ರೈತ ವಿದ್ಯಾನಿಧಿ’ ವಿಸ್ತರಣೆ: ಬೊಮ್ಮಾಯಿ ಘೋಷಣೆ

ಪ್ರೌಢಶಾಲಾ ಹೆಣ್ಣು ಮಕ್ಕಳಿಗೆ ‘ರೈತ ವಿದ್ಯಾನಿಧಿ’ ವಿಸ್ತರಣೆ: ಬೊಮ್ಮಾಯಿ ಘೋಷಣೆ

ವಿಜಯಪುರ:ರೈತ ವಿದ್ಯಾನಿಧಿ ಯೋಜನೆಯನ್ನು ಮುಂದಿನ ಶೈಕ್ಷಣಿಕ ಸಾಲಿನಿಂದ 8, 9 ಮತ್ತು 10ನೇ ತರಗತಿಯ ಗ್ರಾಮೀಣ ಭಾಗದ ರೈತರ ಹೆಣ್ಣು ಮಕ್ಕಳಿಗೂ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ನಗರದಲ್ಲಿ ಶನಿವಾರ ನೂತನ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ರೈತ ಕುಟುಂಬದ ಹೆಣ್ಣುಮಕ್ಕಳು ಪ್ರಾಥಮಿಕ, ಪ್ರೌಢಶಾಲಾ ಹಂತದಲ್ಲೇ ಕಲಿಕೆಯನ್ನು ಅರ್ಧಕ್ಕೆ ಬಿಡುತ್ತಿರುವ ಸಂಖ್ಯೆ ಹೆಚ್ಚಿದೆ. ಈ ಕಾರಣಕ್ಕೆ ರೈತ ಕುಟುಂಬದ ಹೆಣ್ಣು ಮಕ್ಕಳ ಹಾಜರಾತಿ ಹೆಚ್ಚಿಸುವ ಉದ್ದೇಶದಿಂದ ವಿದ್ಯಾನಿಧಿ ಯೋಜನೆ ವಿಸ್ತರಿಸಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿಯಾಗಿ ನಾನು ಪ್ರಮಾಣ ವಚನ ಸ್ವೀಕರಿಸಿದ ದಿನದಂದೇ ‘ರೈತ ವಿದ್ಯಾನಿಧಿ’ ಯೋಜನೆ ಜಾರಿಗೆ ತರಲಾಗಿದ್ದು, ಈ ಯೋಜನೆಯಡಿ 2.40 ಲಕ್ಷ ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ಒದಗಿಸಲಾಗಿದೆ. ಮುಂದಿನ ವರ್ಷ ಐದು ಲಕ್ಷ ಮಕ್ಕಳಿಗೆ ಈ ಯೋಜನೆ ಲಭಿಸುವಂತೆ ಮಾಡಲಾಗುವುದು ಎಂದರು.

ಉ.ಕ. ಅಭಿವೃದ್ಧಿಗೆ ಆದ್ಯತೆ:

ಹಿಂದುಳಿದ ಮತ್ತು ಬರಪೀಡಿತ ಉತ್ತರ ಕರ್ನಾಟಕದ ಅಭಿವೃದ್ಧಿ ಸಂಬಂಧ ಈಗಾಗಲೇ ಅನೇಕ ತಜ್ಞರ ಸಮಿತಿಗಳು ನೇಮಕವಾಗಿವೆ, ವರದಿ ನೀಡಿವೆ, ಅನುದಾನ ನೀಡಿ, ಖರ್ಚೂ ಆಗಿದೆ. ಆದರೆ, ಗ್ರಾಮೀಣ ಭಾಗದ ಜನರ ಪರಿಸ್ಥಿತಿ ನೋಡಿದಾಗ ಮನಸ್ಸಿಗೆ ಘಾಸಿಯಾಗುತ್ತದೆ. ಇದಕ್ಕೆ ಕಾರಣ ರಾಜಕೀಯ ಇಚ್ಛಾಶಕ್ತಿ, ಒಗ್ಗಟ್ಟಿನ ಕೊರತೆ ಕಾರಣ ಎಂದು ಹೇಳಿದರು.

60 ತಿಂಗಳ ಅಧಿಕಾರವಧಿಯಲ್ಲಿ 59 ತಿಂಗಳು ಒಗ್ಗಟ್ಟಿನಿಂದ ಅಭಿವೃದ್ಧಿ ರಾಜಕಾರಣ ಮಾಡೋಣ, ಇನ್ನುಳಿದ ಒಂದು ತಿಂಗಳು ಚುನಾವಣಾ ರಾಜಕೀಯ ಮಾಡೋಣ. ಇದು ನನ್ನಿಂದಲೇ ಆರಂಭವಾಗಲಿದ್ದು, ಎಲ್ಲ ಪಕ್ಷದವರೂ ಕೈಜೊಡಿಸಬೇಕು ಎಂದು ಮನವಿ ಮಾಡಿದರು.

5 ಲಕ್ಷ ಮನೆ ನಿರ್ಮಾಣ:

ವಿವಿಧ ವಸತಿ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ 4 ಲಕ್ಷ ಹಾಗೂ ನಗರ ಪ್ರದೇಶದಲ್ಲಿ 1 ಲಕ್ಷ ಸೇರಿದಂತೆ ಒಟ್ಟು 5 ಲಕ್ಷ ಮನೆಗಳ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ನೀಡಲಾಗಿದೆ. ನಮ್ಮ ಸರ್ಕಾರದ ಅವಧಿ ಪೂರ್ಣಗೊಳ್ಳುವ ಒಳಗಾಗಿ ಈ ಮನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡುವಂತೆ ವಸತಿ ಸಚಿವ ವಿ.ಸೋಮಣ್ಣ ಮತ್ತು ಅಧಿಕಾರಿಗಳಿಗೆ ಕಾರ್ಯಕ್ರಮದಲ್ಲೇ ಸೂಚನೆ ನೀಡಿದರು.

ವಿಮಾನ ನಿಲ್ದಾಣಕ್ಕೆ ಅನುದಾನ:

ವಿಜಯಪುರ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿಯಾಗಿ ₹120 ಕೋಟಿ ಅನುದಾನ ನೀಡುವುದಾಗಿ ಬೊಮ್ಮಾಯಿ ಭರವಸೆ ನೀಡಿದರು.

ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಲು ಹಾಗೂ ಪುನರ್ವಸತಿ, ಪುನರ್‌ ನಿರ್ಮಾಣಕ್ಕೆ ಮುಂದಿನ ಬಜೆಟ್‌ನಲ್ಲಿ ಅಗತ್ಯ ಅನುದಾನ ನೀಡಲಾಗುವುದು ಎಂದು ಹೇಳಿದರು.

ಯತ್ನಾಳ ಹೊಗಳಿದ ಸಿಎಂ:

ವಿಜಯಪುರ ನಗರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ ನೇರ ನಡೆನುಡಿಯ ಡಬಲ್‌ ಎಂಜಿನ್‌ ನಾಯಕ. ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಅವರಿಗೆ ಭವಿಷ್ಯದಲ್ಲಿ ಒಳ್ಳೆಯದಾಗಲಿದೆ ಎಂದು ಹೊಗಳಿದರು.

ಹನುಮಗೆ ಬೆಳ್ಳಿಗಧೆ:

ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಅವರು ನೀಡಿದ ಬೆಳ್ಳಿಗಧೆಯನ್ನು ವಿಜಯಪುರದ ಹನುಮಂತ ದೇವರಿಗೆ ಅರ್ಪಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾಟೀಲ ಅವರಿಗೆ ಮರಳಿಸಿದರು.