Saturday, December 14, 2024
Homeಕ್ರೀಡೆಫುಟ್ಬಾಲ್ ಪ್ರಭುತ್ವ ಪ್ರತಿರೋಧ

ಫುಟ್ಬಾಲ್ ಪ್ರಭುತ್ವ ಪ್ರತಿರೋಧ

ಬಹುಶಃ ಫುಟ್ಬಾಲ್ ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆಯೆನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಇದರ ಜನಪ್ರಿಯತೆಗೆ ಈ ಆಟದ ಸರಳತೆ, ಕಡಿಮೆ ಸಾಧನಗಳ ಬಳಕೆ ಕಾರಣವಿರಬಹುದು. ಒಂದು ಚೆಂಡಿದ್ದರೆ ಸಾಕು ಈ ಆಟವನ್ನಾಡಿ ಬಿಡಬಹುದು. ಬ್ರೆಜಿಲ್ ದೇಶದ ಪೆಲೆ ತನ್ನ ತಂದೆಯ ಕಾಲುಚೀಲದ ಒಳಗೆ ಹಳೆಯ ಬಟ್ಟೆ, ಕಾಗದವನ್ನ ತುರುಕಿ ಚೆಂಡು ಮಾಡಿಕೊಂಡು ಆಟ ಕಲಿತ. ರಿಯೋ ನಗರದ ಬೀದಿಗಳಲ್ಲಿ ಬೆಳೆದು ಮನೆ ಮಾತಾದ ರೋನಲ್ದೋ, ಕಡು ಬಡತನ ಅಪೋಷ್ಟಿಕತೆಯಿಂದ ಕುರೂಪಿಯಾಗಿ, ತನ್ನೆಲ್ಲ ಹಲ್ಲುಗಳನ್ನ ಕಳೆದುಕೊಂಡರು ಶ್ರೇಷ್ಠ ಫುಟ್ಬಾಲ್ ಆಟಗಾರನಾದ ರಿವಾಲ್ಡೊ, ಅರ್ಜೆಂಟೀನಾದ ಸಣ್ಣ ಕೊಳಕು ಊರಾದ ವಿಲ್ಲ ಫ್ಲೋರಿತೋದಲ್ಲಿ ಓದು ಬರಹ ಕಲಿಯದೆ ಬರಿಯ ಫುಟ್ಬಾಲ್ ನಂಬಿಕೊಂಡು ದಂತಕತೆಯಾದ ಮರಡೋನ, ಗದ್ದೆಯ ಕೆಸರಲ್ಲಿ ಸದಾ ಕೆಲಸ ಮಾಡಿ ದೈತ್ಯ ಗಾತ್ರದ ತೊಡೆವೊಂದಿದ್ದ ಜಗತ್ತಿನ ಬೆಸ್ಟ್ ಕಿಕ್ಕರ್ ರೋಬೇರ್ತೊ ಕಾರ್ಲೋಸ್, ವಿಖ್ಯಾತ ಫುಟ್ಬಾಲ್ ಆಟಗಾರನಾಗಬೇಕೆಂಬ ಕಲ್ಲಿದ್ದಲ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಅಪ್ಪನ ಕನಸು ಈಡೇರಿಸಿದ ಅರ್ಜೆಂಟೀನಾದ ಡೀ ಮಾರಿಯ ನಮ್ಮೆಲ್ಲರ ಅಚ್ಚುಮೆಚ್ಚು… They are the underdogs who made it big!

ಲ್ಯಾಟಿನ್ ಅಮೇರಿಕಾ ರಾಷ್ಟ್ರಗಳು ಫುಟ್ಬಾಲ್ ಕ್ರೀಡೆಯ ಮೇಲೆ ಅಧಿಪತ್ಯ ಸಾಧಿಸಿದ್ದರೂ ಕಡುಬಡರಾಷ್ಟಗಳದ ಕ್ಯಾಮರೂನ್, ನೈಜಿರಿಯಾ, ಐವರಿ ಕೋಸ್ಟ್ನಿಂದ ಹಿಡಿದು ಮುಂದುವರೆದ ಯುರೋಪಿಯನ್ ಹಾಗು ಅಮೇರಿಕಾ ರಾಷ್ಟ್ರದಲ್ಲೂ ಈ ಫುಟ್ಬಾಲ್ ಜಾದು ಹರಡಿದೆ. ಆಟ ಹಾಗು ಮನೋರಂಜನೆಗೆ ಅಷ್ಟಾಗಿ ಆದ್ಯತೆ ನೀಡದ ಅರಬ್ ರಾಷ್ಟ್ರಗಳಲ್ಲೂ ಫುಟ್ಬಾಲ್ ಇಂದು ಅತ್ಯಂತ ಜನಪ್ರಿಯ. ಫುಟ್ಬಾಲ್ ಕ್ರೀಡಾಂಗಣದೊಳಗೆ ಹೆಣ್ಣುಮಕ್ಕಳಿಗೆ ಪ್ರವೇಶವಿಲ್ಲವೆಂದರು ಮಾರುವೇಷದಲ್ಲಿ ಕ್ರೀಡಾಂಗಣದೊಳಗೆ ನುಗ್ಗಿ, ಪೊಲೀಸರಿಗೆ ಸಿಕ್ಕಿ ಹಾಕಿಕೊಳ್ಳುವ ಇರಾನಿನ ಹೆಣ್ಣುಮಕ್ಕಳ ಕಥಾವಸ್ತುವುಳ್ಳ ಜಾಫರ್ ಪನಾಹಿ ಅವರ “ಆಫ್ ಸೈಡ್” ಚಲನಚಿತ್ರ ಧರ್ಮ, ಭಾಷೆ, ವರ್ಣ, ಲಿಂಗಬೇಧ ಮೀರಿದ ವಿಶ್ವವ್ಯಾಪಿ ಫುಟ್ಬಾಲ್ ಜನಪ್ರಿಯತೆಯ ಪ್ರತೀಕ.

ಈ ಕ್ರೀಡೆ ನನಗೂ ಕೂಡ ಅಚ್ಚುಮೆಚ್ಚು. ಬ್ರೆಜಿಲ್ ನನ್ನ ನೆಚ್ಚಿನ ತಂಡ. ನನ್ನ ತಂದೆಯ ಕಾಲದವರಿಗೆ ಪೆಲೆ ಇಷ್ಟವಾದರೆ, ನನಗೆ ರೋಮರಿಯೋ ಇಷ್ಟವಾಗಿದ್ದ, ಈಗ ನೆಮಾರ್ನನ್ನು ಫಾಲೋ ಮಾಡುತ್ತೇನೆ. ಆದರೆ ಇವರೆಲ್ಲರನ್ನ ಮೀರಿ ಸಾಕ್ರಟೀಸ್ ಎಂಬ ಆಟಗಾರ ನನ್ನ ಹೃದಯಕ್ಕೆ ಹತ್ತಿರವಾದವನು. ಈತ ಆಕ್ರಮಕ ಮಿಡ್ ಫೀಲ್ಡರ್. 1982ರ ವಿಶ್ವಕಪ್ ನಲ್ಲಿ ಬ್ರೆಜಿಲ್ ತಂಡವನ್ನ ಮುನ್ನೆಡಿಸಿದ್ದ. ಪೆಲೆಗೆ ಹೋಲಿಸಿದರೆ ಇವನ ಸಾಧನೆ ಗೌಣವೆಂದು ಅನಿಸಿದರು ಸಾಕ್ರಟೀಸ್ ನನಗೆ ಬೇರೆಯದೇ ಕಾರಣಕ್ಕೆ ಇಷ್ಟವಾಗುತ್ತಾನೆ.

ಸಾಕ್ರಟೀಸ್ ಬ್ರೆಜಿಲ್ ದೇಶದ ಕೋರಿನ್ತಿಯನ್ಸ್ ಕ್ಲಬ್ಗೆ ಆಡುವಾಗ ಆತ ಕೋರಿನ್ತಿಯನ್ಸ್ ಡೆಮಾಕ್ರಸಿ ಎಂಬ ಚಳುವಳಿ ಶುರುಮಾಡಿದ. ಈ ಚಳುವಳಿ ಬ್ರೆಜಿಲ್ನ ಆಗಿನ ಮಿಲಿಟರಿ ಆಳ್ವಿಕೆಯ ವಿರುದ್ದದ ಚಳುವಳಿಯಾಗಿತ್ತು. ಫುಟ್ಬಾಲ್ ಕ್ರೀಡಪಟುಗಳನ್ನ ಮಿಲಿಟರಿ ಕಾಣುತ್ತಿದ್ದ ರೀತಿ, ಅವರೊಂದಿಗೆ ನಡೆದುಕೊಳ್ಳುತ್ತಿದ್ದ ವಿಧಾನಗಳಿಂದ ಬೇಸತ್ತಿದ್ದ ಸಾಕ್ರಟೀಸ್ ಇಡಿಯ ಬ್ರೆಜಿಲ್ ಡೆಮಾಕ್ರೆಟಿಕ್ ಆಗಬೇಕೆಂದು ಪಣ ತೊಟ್ಟ. ಎಲ್ಲ ಪಂದ್ಯಗಳಲ್ಲು “ಡೆಮೋಕ್ರಾಸಿಯ” ಎಂದು ಅಚ್ಚಾಗಿದ್ದ ಅಂಗಿಯನ್ನೇ ತೊಟ್ಟ. ಅವನ ತಂಡ ಕೂಡ ಅವನನ್ನೇ ಅನುಕರಿಸಿತು.

ಅದು 1984, ಪ್ರಖ್ಯಾತ ಕ್ಯಾಥೆಡ್ರೆಲ್ ಚೌಕದಲ್ಲಿ ಎರಡು ಲಕ್ಷ ಜನ ಸೇರಿದ್ದಾರೆ. ಸಾಕ್ರಟೀಸ್ ಪ್ರಾಣದ ಹಂಗು ತೊರೆದು “ದೇಶದಲ್ಲಿ ಚುನಾವಣೆ ನಡೆಯಲೇಬೇಕು. ಇಲ್ಲಿ ಪ್ರಜಾತಂತ್ರ ಬಂದು ಮಿಲಿಟರಿ ಆಡಳಿತ ಕೊನೆಗೊಳ್ಳಲೇಬೇಕು. ಒಂದು ವೇಳೆ ಇಲ್ಲಿ ಮುಕ್ತ ಮತ್ತು ನ್ಯಾಯಯುತವಾದ ಚುನಾವಣೆ ನಡೆಯಲಿಲ್ಲವೆಂದರೆ ನಾನು ದೇಶ ತೊರೆದು ಇಟಲಿ ದೇಶಕ್ಕೆ ಹೋಗಿಬಿಡುತ್ತೇನೆ” ಎಂದು ಘೋಷಿಸಿದ. ಫುಟ್ಬಾಲ್ ಎಂದರೆ ಪ್ರಾಣ ಬಿಡುವ ಕೊಟ್ಯಂತರ ಫ್ಯಾನ್ಗಳಿರುವ ಬ್ರೆಜಿಲ್ ತಂಡದ ನಾಯಕ ಈ ರೀತಿಯ ಕರೆ ನೀಡಿದರೆ ಅದರ ಪ್ರಭಾವ ಹೇಗಿದ್ದಿರಬಹುದು ಊಹಿಸಿ?

ಸಾಕ್ರೆಟಿಸ್ ಕೋರಿನ್ತಿಯನ್ಸ್ ಕ್ಲಬ್ಬಿನ ಒಳಗೂ ಎಲ್ಲವು ಡೆಮಾಕ್ರೆಟಿಕ್ ಆಗಿ ನಿರ್ಧಾರ ಕೈಗೊಳ್ಳುವ ಕ್ರಮವನ್ನ ಜಾರಿಗೆ ತಂದ. ಅಲ್ಲಿಯವರೆಗೆ ಕ್ಲಬ್ ಮ್ಯಾನೇಜ್ಮೆಂಟ್ ಎಲ್ಲವನ್ನ ನಿರ್ಧರಿಸುತ್ತಿತ್ತು, ಆದರೆ ಸಾಕ್ರಟೀಸ್ ಈ ಕ್ಲಬ್ ಸೇರಿದ ಮೇಲೆ ಎಲ್ಲವನ್ನು ತಂಡ ಒಟ್ಟಿಗೆ ಕೂತು ವೋಟ್ ಚಲಾಯಿಸಿಯೇ ತೀರ್ಮಾನಿಸಬೇಕು ಎಂಬ ಹೊಸ ಕಾನೂನು ಮಾಡಿದ. ಪಂದ್ಯದಲ್ಲಿ ಯಾವ ತಂತ್ರ ಬಳಸಬೇಕು, ಯಾರು ಯಾವ ಸ್ಥಳದಲ್ಲಿ ಯಾರು ಆಡಬೇಕು, ಯಾವ ಆಟಗಾರನಿಗೆ ವಿರಾಮದ ಅಗತ್ಯವಿದೆ, ತೊಡಬೇಕಾದ ಸಮವಸ್ತ್ರ ಯಾವುದು, ಊಟಕ್ಕೆ ಏನು ತಿನ್ನಬೇಕು, ಯಾವ ಹೋಟೆಲ್ನಲ್ಲಿ ತಂಗಬೇಕು ಎಲ್ಲವು ಚರ್ಚೆಯಾಗುತ್ತಿದ್ದವು. ಪಂದ್ಯದ ಮುಂಚೆ ಮೂರೂ ದಿನಗಳ ಕಾಲ ಇಡಿಯ ತಂಡವನ್ನೇ ಗೃಹ ಬಂಧನದಲ್ಲಿ ಇಡಲಾಗುತ್ತಿತ್ತು. ಸಾಕ್ರಟೀಸ್ ಈ ನೀತಿಯನ್ನ ಕೂಡ ಪ್ರಶ್ನಿಸಿದ.

ಸಾಕ್ರಟೀಸ್ ಪ್ರಕಾರ ಕ್ಲಬ್ ಮ್ಯಾನೇಜ್ಮೆಂಟ್ ಹೀಗೆ ತಂಡವನ್ನ ನಿಯಂತ್ರಿಸುವ ಪರಿ ದೇಶವನ್ನ ಮಿಲಿಟರಿ ಆಳ್ವಿಕೆ, ಪ್ರಭುತ್ವ ತನ್ನ ಬಿಗಿ ಮುಷ್ಠಿಯಲ್ಲಿ ಇಟ್ಟಿದ್ದರ ಪ್ರತಿರೂಪವೆ ಆಗಿತ್ತು. ಕ್ಲಬ್, ಆತನಿಗೆ ದೇಶದ ಮೈಕ್ರೋಕಾಸ್ಮ್ ಆಗಿತ್ತು. ಪ್ರತಿರೋಧ, ಕ್ರಾಂತಿ ಮತ್ತು ಪ್ರಜಾತಂತ್ರಕ್ಕಾಗಿ ಅಭಿಯಾನ ತನ್ನ ತಂಡದಿಂದಲೇ ಶುರುವಾಗಿ ದೇಶದೆಲ್ಲೆಡೆ ವ್ಯಾಪಿಸಬೇಕು ಎಂಬುದು ಆತನ ಆಸೆಯಾಗಿತ್ತು. 1964ರಿಂದ ಯಾವುದೇ ಬಹುಪಾರ್ಟಿ ಚುನಾವಣೆ ನಡೆಯದ ಬ್ರೆಜಿಲ್ನಲ್ಲಿ ಕೊನೆಗೂ ಚುನಾವಣೆ ಘೋಷಣೆಯಾದಾಗ ಸಾಕ್ರಟೀಸ್ನ ತಂಡದ ಎಲ್ಲ ಆಟಗಾರರು ತಮ್ಮ ಬೆನ್ನ ಹಿಂದೆ “15ರಂದು ವೋಟ್ ಮಾಡಿ” ಎಂದು ಅಚ್ಚಾಗಿದ್ದ ಅಂಗಿ ತೊಟ್ಟರು. ತಂಡದ ಎಲ್ಲರು “ win or lose, but always with democracy” ಎಂದು ಪ್ರತಿಪಾದಿಸಿದರು. ಹೀಗೆ ಕ್ರೀಡೆಯನ್ನೇ ಪ್ರತಿರೋಧದ ಮಾಧ್ಯಮ ಮಾಡಿಕೊಂಡ ಸಾಕ್ರಟೀಸ್ಗೆ ಚೇ ಗವಾರ, ಫಿಡೆಲ್ ಕ್ಯಾಸ್ಟ್ರೋ, ಜಾನ್ ಲೆನನ್ ನೆಚ್ಚಿನ ನಾಯಕರು!!!

ಸರ್ವಾಧಿಕಾರ, ಪ್ರಭುತ್ವವನ್ನ ಹತ್ತಿಕ್ಕಲು, ಪ್ರತಿರೋಧ ಒಡ್ಡಲು ಮತ್ತೊಂದು ಪ್ರಬಲ ರಾಜಕೀಯ ಪಾರ್ಟಿಯೇ ಬೇಕೆಂದೇನಿಲ್ಲ. ಕಲೆ, ಕ್ರೀಡೆ, ಪ್ರತಿ ಸಂಸ್ಕೃತಿಗಳು ಪ್ರಭುತ್ವವನ್ನೇ ನೆಲಕ್ಕುರುಳಿಸಬಹುದು. ಅಮೇರಿಕಾ ಅನವಶ್ಯಕ ವಿಯಟ್ನಾಮ್ ಯುದ್ದದಲ್ಲಿ ತೊಡಗಿದ್ದಾಗ ಅದಕ್ಕೆ ತೀವ್ರ ಪ್ರತಿರೋಧ ಬಂದದ್ದು ಹಿಪ್ಪಿ ಚಳುವಳಿಯಿಂದ. ಬಾಬ್ ಡಿಲನ್, ಜಾನ್ ಲೆನನ್ ಬರೆದ ಹಾಡುಗಳಿಂದ. ಸೌತ್ ಆಫ್ರಿಕದ ವರ್ಣಬೇಧ ನೀತಿಯ ಕುರಿತು ವಿಶ್ವಾದ್ಯಂತ ಅರಿವು ಮೂಡಿಸುವ ಕ್ರಿಯೆಯನ್ನ ಅಲ್ಲಿನ ಸಾಹಿತ್ಯ ಮಾಡಲಿಲ್ಲವೆ? ಆಫ್ರೋ ಅಮೆರಿಕನ್ರ ಹಾರ್ಲೆಮ್ ರೆನೈಸಾನ್ಸ್, ಬ್ಲೂಸ್ ಬ್ಯಾಂಡ್ ಮಾಡಿದ ಕ್ರಾಂತಿ ಕಡೆಗಣಿಸಲಾದೀತೆ? ಕ್ರಿಕೆಟಿನಲ್ಲಿ ಬಿಳಿಯರ ಪ್ರಾಬಲ್ಯ, ಅವರ ಮೇಲಿರಿಮೆ, ಅಹಂಕಾರಗಳನ್ನ ದಿಟ್ಟತನ ಎದುರಿಸಿ ಮುರಳಿತರನ್ ಪರವಾಗಿ ನಿಂತ ಅರ್ಜುನ್ ರಣತುಂಗಾನಂತಹ ನಾಯಕನನ್ನ ಮರೆಯಲಾದೀತೆ?

ಕ್ರೀಡೆ, ಕಲೆ, ಸಂಗೀತ, ಕ್ರಾಫ್ಟ್, ಸಿನಿಮಾ, ಪೇಂಟಿಂಗ್ ಮತ್ತೆಲ್ಲಾ ಕಲಾ ಪ್ರಕಾರಗಳು ಎಂತಹ ಬಲಿಷ್ಠ ಪ್ರಭುತ್ವಕ್ಕೂ ತೀವ್ರ ಸ್ಪರ್ಧೆ ನೀಡಬಹುದು. ಎಂದೆಂದಿಗೂ “ಆರ್ಟ್ಸ್ ಫಾರ್ ಆರ್ಟ್ಸ್ ಸೇಕ್” “ಕಲೆ ಕಲೆಗಾಗಿ ಮಾತ್ರ” ಎನ್ನುವ ವಾದಗಳು ಇರುವ ವ್ಯವಸ್ಥೆಯಿಂದ ಲಾಭ ಪಡೆದ ಪ್ರಿವಿಲೇಜದ್ ವರ್ಗ ಪ್ರತಿಪಾದಿಸುವ ವಾದವೇ ಆಗಿರುತ್ತದೆ. ಈ aesthetic protocol ಅನುಸರಿಸುವ ವರ್ಗ ಯಥಾಸ್ಥಿತಿಯನ್ನೇ ಕಾಪಾಡಿಕೊಂಡು ಹೋಗುವ ವರ್ಗವೆ ಆಗಿರುತ್ತದೆ.

ಪ್ರಭುತ್ವ ಅಸ್ತಿತ್ವಕ್ಕೆ ಬರಲು ಸಿದ್ದಾಂತ, ಧರ್ಮ, ಜಾತಿ, ದ್ವೇಷ ತುಂಬಿದ ಭಾಷಣಗಳು ಹೇಗೆ ಸಹಾಯಕವಾಗುತ್ತವೋ ಹಾಗೆಯೇ ಪ್ರಭುತ್ವದ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವುದು ಕ್ರೀಡೆ, ಕಲೆ ಹಾಗು ಸಾಹಿತ್ಯದ ಪ್ರಕಾರಗಳು. ಎಲ್ಲಿಯವರೆಗೆ ನಾವು ತುಂಬಾ ಚನ್ನಾಗಿ ಪ್ಯಾಕೇಜ್ ಮಾಡಿ ಮಾರ್ಕೆಟಿಂಗ್ ಮಾಡಿದ ಸಾಹಿತ್ಯವನ್ನ ಪ್ರಶ್ನಿಸುವುದಿಲ್ಲವೋ, ಕ್ರೀಡೆ, ಕಲೆಯನ್ನ ಬರಿಯ ಮನೋರಂಜನೆಯ ಮಾಧ್ಯಮವಾಗಿ ನೋಡುತ್ತೆವೋ ಅಲ್ಲಿಯವರೆಗೆ ಯಾವ ಸಮಾಜವು ಆತ್ಮಾವಲೋಕನ ಮಾಡಿಕೊಂಡು ಸರಿಯಾದ ದಾರಿಯಲ್ಲಿ ಸಾಗಲಾರವು. ವಿಶ್ವಕಪ್ ಫುಟ್ಬಾಲ್ ನೆಡೆಯುತ್ತಿರುವ ಈ ದಿನಗಳಲ್ಲಿ ಫುಟ್ಬಾಲ್ ಮೂಲಕ ಪ್ರಭುತ್ವಕ್ಕೆ ತೀವ್ರ ಪ್ರತಿರೋಧದವೊಡ್ಡಿದ ಸಾಕ್ರಟೀಸ್ ನೆನಪಾದ…

  • Harish Gangadhar