ಆನೇಕಲ್ : ನಿರ್ಜನ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಅರೇಹಳ್ಳಿ ಕ್ರಾಸ್ ಸಮೀಪದಲ್ಲಿ ಗುರುವಾರ ರಾತ್ರಿ ನಡೆದಿದೆ.
ಕೊಲೆಯಾದವರನ್ನು ತಾಲ್ಲೂಕಿನ ಮಾಯಸಂದ್ರದ ಭಾಸ್ಕರ್(30) ಮತ್ತು ಅತ್ತಿಬೆಲೆಯ ದೀಪಕ್(40) ಎಂದು ಗುರುತಿಸಲಾಗಿದೆ. ಭಾಸ್ಕರ್ ಮತ್ತು ದೀಪಕ್ ಸ್ನೇಹಿತರಾಗಿದ್ದು ಜೊತೆಗೂಡಿ ಪೈನಾನ್ಸ್ ವ್ಯವಹಾರ ಮಾಡುತ್ತಿದ್ದರು ಎನ್ನಲಾಗಿದೆ. ಕೊಲೆಗೆ ಫೈನಾನ್ಸ್ ವ್ಯವಹಾರವೇ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಭಾಸ್ಕರ್ ಜೂಜಾಟದ ಪ್ರಕರಣವೊಂದಕ್ಕೆ ಸಂಭವಿಸಿದಂತೆ ಸಿಪ್‌ಕಾಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎನ್ನಲಾಗಿದ್ದು ಪ್ರತಿದಿನ ಹೋಗಿ ಪೊಲೀಸ್ ಠಾಣೆಯಲ್ಲಿ ಸಹಿ ಮಾಡಿ ಬರಬೇಕಾಗಿತ್ತು. ಅದರಂತೆ ಗುರುವಾರ ಸಂಜೆ ಸಹಿ ಮಾಡಿ ಬಂದ ನಂತರ ಅತ್ತಿಬೆಲೆಯಿಂದ ಮಾಯಸಂದ್ರಕ್ಕೆ ಬರುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಕೊಲೆಗೆ ನಿಖರ ಕಾರಣಗಳು ಕಂಡು ಬಂದಿಲ್ಲ.
ತಾಲ್ಲೂಕಿನ ಅರೇಹಳ್ಳಿ ಕ್ರಾಸ್‌ನ ಸಮೀಪದ ಬಯಲಿನಲ್ಲಿ ಮೃತ ದೇಹಗಳನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಭೇಟಿ ನೀಡಿದ್ದ ಬೆಂಗಳೂರು ಗ್ರಾಮಾಂತರ ಎಸ್ಪಿ ಡಾ.ಕೆ.ವಂಶಿಕೃಷ್ಣ ಮಾತನಾಡಿ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಎಲ್ಲಾ ಆಯಾಮಗಳಲ್ಲೂ ಪರಿಶೀಲನೆ ಮಾಡಲಾಗುತ್ತಿದೆ. ಆರೋಪಿಗಳ ಪತ್ತೆಗಾಗಿ ತಂಡಗಳನ್ನು ರಚಿಸಲಾಗಿದೆ ಎಂದರು.
ಡಿವೈಎಸ್ಪಿ ಎಂ.ಮಲ್ಲೇಶ್, ಸರ್ಕಲ್ ಇನ್‌ಸ್ಪೆಕ್ಟರ್ ಕೆ.ವಿಶ್ವನಾಥ್ ಇದ್ದರು. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳದ ಸಿಬ್ಬಂದಿ ಬಂದಿದ್ದು ಪರಿಶೀಲನೆ ನಡೆಸಿದ್ದಾರೆ.