ಉಡುಪಿ: ‘ಮುಖ್ಯಮಂತ್ರಿ ಮಾಡಲು ₹ 2,500 ಕೇಳಿದ್ದರು’ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನು ಪಕ್ಷ ಗಂಭೀರವಾಗಿ ತೆಗೆದುಕೊಂಡು ಸೂಕ್ತ ಕ್ರಮಕ್ಕೆ ಕೇಂದ್ರ ಶಿಸ್ತುಸಮಿತಿಗೆ ಕಳುಹಿಸಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಮಂಗಳವಾರ ನಗರದ ಕಿದಿಯೂರು ಹೋಟೆಲ್‌ನಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ‘ಬಿ’ ಫಾರಂ ಪಡೆದು ಶಾಸಕರಾದವರು ಪಕ್ಷಕ್ಕೆ ವಿರುದ್ಧವಾಗಿ ಹೇಳಿಕೆ ನೀಡಿದರೆ ಕೇಂದ್ರ ಶಿಸ್ತುಸಮಿತಿ ನೋಟಿಸ್ ನೀಡಿ ಕ್ರಮ ತೆಗೆದುಕೊಳ್ಳುತ್ತದೆ’ ಎಂದರು.
ಹೋರಾಟಗಾರರ ವಿಚಾರಧಾರೆಗಳು ಬೇರೆ ಹಾಗೂ ಸಂವಿಧಾನಿಕವಾಗಿ ಆಡಳಿತ ನಡೆಸುವ ಸರ್ಕಾರದ ಜವಾಬ್ದಾರಿಗಳು ಬೇರೆ. ಪ್ರಮೋದ್ ಮುತಾಲಿಕ್ ಹಾಗೂ ಪಕ್ಷದ ವಿಚಾರ ಧಾರೆಗಳು ಒಂದೇ. ಸಂಘಟನೆಯಾಗಿ ಹಲವು ವಿಚಾರಗಳನ್ನು ಸರ್ಕಾರಕ್ಕೆ ಹೇಳಿದಾಗ ಎಲ್ಲವನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಪ್ರಮೋದ್ ಮುತಾಲಿಕ್ ಸಹಜವಾದ ಅಪೇಕ್ಷೆಗಳನ್ನು ವ್ಯಕ್ತಪಡಿಸಿದ್ದು, ಸಂವಿಧಾನದಡಿ ಪರಿಶೀಲಿಸಿ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದರು.
ಬಿಜೆಪಿ ಸೇರಲು ಹಲವರು ಸಿದ್ಧರಿದ್ದು ಮಾತುಕತೆ ನಡೆಯುತ್ತಿದೆ. ತಾಂತ್ರಿಕ ಕಾರಣ, ಸಮಸ್ಯೆಗಳು ಹಾಗೂ ಕಾರ್ಯಕರ್ತರ ಅಪೇಕ್ಷೆಯ ಮೇರೆಗೆ ಪಕ್ಷಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂದು ನಿರ್ಧರಿಸಲಾಗುವುದು ಎಂದರು.