Saturday, December 14, 2024
Homeರಾಜ್ಯಕಲ್ಯಾಣ ಕರ್ನಾಟಕಬಟ್ಟೆ ಖರೀದಿಯ ನೆಪದಲ್ಲಿ ಬಂದು ಮಹಿಳೆಯ ಕೊಲೆ

ಬಟ್ಟೆ ಖರೀದಿಯ ನೆಪದಲ್ಲಿ ಬಂದು ಮಹಿಳೆಯ ಕೊಲೆ

ಹೊಸಪೇಟೆ: ಬಟ್ಟೆ ಖರೀದಿಯ ನೆಪ ಮಾಡಿಕೊಂಡು ಬಂದು ಮಹಿಳೆಯೊಬ್ಬರನ್ನು ಅವರ ಮನೆಯಲ್ಲೇ ಕೊಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ರಾಣಿಪೇಟೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಭುವನೇಶ್ವರಿ (58) ಮೃತ ಮಹಿಳೆ. ಇವರ ಸಹೋದರಿ ಶಿವಭೂಷಣ (56) ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಭುವನೇಶ್ವರಿ ಹಾಗೂ ಶಿವಭೂಷಣ ಎಂಬುವರು ಮನೆಯಲ್ಲೇ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದರು. ಐದಾರೂ ಜನ ಬಟ್ಟೆ ಖರೀದಿಗೆ ಬಂದಂತೆ ನಟಿಸಿ ಅವರನ್ನು ಕೊಲೆ ಮಾಡಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ತನಿಖೆಯ ನಂತರ ನಿಖರ ಕಾರಣ ಗೊತ್ತಾಗಲಿದೆ’ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್ ಅವರ ಕಚೇರಿಯಿಂದ ಕೂಗಳತೆ ದೂರದಲ್ಲಿರುವ ಮನೆಯಲ್ಲಿ ಈ ಕೃತ್ಯ ನಡೆದಿದೆ. ಸ್ಥಳೀಯರ ಪ್ರಕಾರ, ‘ಗುರುವಾರ ಇಬ್ಬರು ಪುರುಷರು ಬಂದು ಬಟ್ಟೆ ನೋಡಿಕೊಂಡು ಹೋಗಿದ್ದಾರೆ. ಮದುವೆಗೆ ಬಟ್ಟೆ ಬೇಕಿದ್ದು, ಮದುಮಗ, ಸಂಬಂಧಿಕರನ್ನು ಕರೆದುಕೊಂಡು ನಾಳೆ ಬರುವುದಾಗಿ ಹೇಳಿ ಹೋಗಿದ್ದಾರೆ. ಶುಕ್ರವಾರ ಸಂಜೆ 5.30ರ ಸುಮಾರಿಗೆ ಬಂದು, ಇಬ್ಬರ ಸಹೋದರಿಯರ ಕೈಕಾಲು ಕಟ್ಟಿ, ಥಳಿಸಿ ಅವರ ಒಡವೆ, ಹಣ ಕಸಿದುಕೊಂಡು ಹಿಂಬಾಗಿಲಿನಿಂದ ಓಡಿ ಹೋಗಿದ್ದಾರೆ. ಭುವನೇಶ್ವರಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಅನೇಕ ವರ್ಷಗಳಿಂದ ಸಹೋದರಿಯರು ಮನೆಯಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದಾರೆ’ ಎಂದು ತಿಳಿಸಿದರು.