ಚಿತ್ರದುರ್ಗ: ಮಳೆ ಕಡಿಮೆ, ಒಣ ಹವೆ ಹೆಚ್ಚು ಇರುವ ಜಿಲ್ಲೆಯಲ್ಲಿ ಅತಿ ಕಡಿಮೆ ನೀರು ಬಳಸಿಕೊಂಡು ಉತ್ತಮ ಕೃಷಿ ಮಾಡಿ ಭಾರತೀಯ ಏರ್‌ಫೋರ್ಸ್ ಸಿಗ್ನಲರ್ ಆರ್.ಎಸ್. ರಮೇಶ್ ಗಮನ ಸೆಳೆದಿದ್ದಾರೆ.
ಹೊಸದುರ್ಗದ ಬುರುಡೇಕಟ್ಟೆ ಬಳ್ಳೇಕೆರೆ ಗ್ರಾಮದ ಅವರ ಮಾವ ಈಶ್ವರಪ್ಪ ಅವರ 4 ಎಕರೆ ಜಮೀನಿನಲ್ಲಿ ಈ ಸಾಧನೆ ಮಾಡಿದ್ದಾರೆ.
ಈಶ್ವರಪ್ಪ ಅವರು 4 ಎಕರೆ ಜಮೀನಿಗೂ ತೆಂಗಿನಸಸಿ ನಾಟಿ ಮಾಡಲಿಕ್ಕೆ ಮುಂದಾದಾಗ ರಮೇಶ್ ನಿಲ್ಲಿಸಿದ್ದಾರೆ. ಮೊದಲಿಗೆ ಜಮೀನಿನ ತುಂಬಿಲ್ಲಾ ಇದ್ದ ಬಂಡೆ ಕಲ್ಲುಗಳನ್ನು ತೆಗೆಸಿ ಭೂಮಿ ಸಮತಟ್ಟು ಮಾಡಿಸಿದ್ದಾರೆ. ಬದುವಿನ ಸುತ್ತಲೂ 3 ಅಡಿ ಟ್ರಂಚ್ ಒಡೆಸಿದ್ದಾರೆ. ಇದರಿಂದಾಗಿ ಜಮೀನಿಗೆ ಬೀಳುವ ಮಳೆನೀರು ಮುಂದೆ ಹರಿಯದೇ ಹಿಂಗುತ್ತಿದೆ. ತೋಟಗಾರಿಕೆ ಬೆಳೆ ಬೆಳೆಯಲು ಕೊಳವೆಬಾವಿ ಕೊರೆಸಿದಾಗ ಬರೀ ಒಂದೂವರೆ ಇಂಚು ಮಾತ್ರ ನೀರು ಸಿಕ್ಕಿದೆ. ಈ ಅಲ್ಪ ನೀರಿನಲ್ಲಿ ವೈವಿಧ್ಯಮಯ ಬೆಳೆಯಲಿಕ್ಕೆ ಪಟ್ಟಣದ ತೋಟಗಾರಿಕೆ ಇಲಾಖೆಯ ಹಿಂದಿನ ಹಿರಿಯ ಸಹಾಯಕ ನಿರ್ದೇಶಕ ಪ್ರಸನ್ನ ಅವರನ್ನು ಸಂಪರ್ಕಿಸಿ ಸಲಹೆ ಪಡೆದಿದ್ದಾರೆ.
2018ರ ಜುಲೈನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಬದುವಿನ ಸುತ್ತಲೂ 5 ಅಡಿ ಜಾಗ ಬಿಟ್ಟು 148 ತೆಂಗಿನಸಸಿ ನಾಟಿ ಮಾಡಿದ್ದಾರೆ. ಮಧ್ಯದಲ್ಲಿ 10X10 ಅಡಿ ವಿಸ್ತೀರ್ಣದಲ್ಲಿ 750 ಶ್ರೀಗಂಧ ಸಸಿ ನಾಟಿ ಮಾಡಿದ್ದಾರೆ. ಶ್ರೀಗಂಧ ಪರಾವಲಂಭಿ ಸಸಿ ಆಗಿರುವುದರಿಂದ ಅದರ ಮಧ್ಯೆ ಕಡಿಮೆ ನೀರಿನಲ್ಲಿ ಬೆಳೆಯುವ ಲಕ್ಷ್ಮಣಫಲ 200, ಸೀತಾಫಲ 50, ಹನುಮಫಲ 30, ರಾಮಫಲ 20, ರಕ್ತಚಂದನ 300, ಮಾವು 20, ಮೂಸಂಬಿ 40, ಕಿತ್ತಳೆ ಹಾಗೂ ಬಟರ್‌ಫ್ರೂಪ್ 20, ತೇಗ 100, ಬೀಟೆ 30, ಹೆಬ್ಬೇವು 30, ಹಲಸು 10, ಸಪೋಟಾ 10, ನಿಂಬೆ 12 ಸಸಿಗಳನ್ನು ನಾಟಿ ಮಾಡಿದ್ದಾರೆ. ಸಮಗ್ರ ಕೃಷಿ ಪರಿಚಯದೊಂದಿಗೆ ಅರಣ್ಯ ಹಾಗೂ ತೋಟಗಾರಿಕೆ ಬೆಳೆ ಮಿಶ್ರಣ ಮಾಡಿ ಜಮೀನು ಸ್ವಲ್ಪವೂ ವ್ಯರ್ಥ ಮಾಡದೇ ಬಳಕೆ ಮಾಡಿಕೊಂಡಿರುವುದು ಬಹುವಿಶೇಷ.
ಈ ಎಲ್ಲಾ ತೋಟಗಾರಿಕೆ ಹಾಗೂ ಅರಣ್ಯ ಗಿಡಗಳಿಗೆ ಒಮ್ಮೆಯೂ ರಾಸಾಯನಿಕ ಗೊಬ್ಬರ ಹಾಕಿಲ್ಲ, ಔಷಧವನ್ನು ಸಿಂಪಡಿಸಿಲ್ಲ. ಮಲ್ಚಿಂಗ್ ಮಾಡಿರುವುದರಿಂದ ನೀರು ಹಾವಿಯಾಗುವುದು ತಡೆಯುತ್ತಿದೆ. ಪ್ರತಿವರ್ಷ ಒಣಗಿದ ತೆಂಗಿನ ಗರಿ ಹಾಗೂ ಕೃಷಿತ್ಯಾಜ್ಯವನ್ನು ಜಮೀನಿನ ಸುತ್ತಲೂ ಒಡೆಸಿರುವ ಟ್ರಂಚ್ ಗುಂಡಿಗೆ ಸುರಿಯುತ್ತಿದ್ದು ಅದು ನೈಸರ್ಗಿಕ ಗೊಬ್ಬರವಾಗುತ್ತಿದೆ. ನಂತರ ಅದನ್ನು ಗಿಡದ ಬುಡಕ್ಕೆ ಹಾಕಲಾಗುತ್ತಿದೆ. ಕುಟುಂಬದ ಸದಸ್ಯರೆಲ್ಲರ ವೈಯಕ್ತಿಕ ಆರೋಗ್ಯ ಕಾಪಾಡುವುದು ಹಾಗೂ ಆರೋಗ್ಯಕರ ಹಣ್ಣು ಬೆಳೆದು ಸಮಾಜಕ್ಕೆ ಕೊಡಬೇಕು ಎಂಬ ಉದ್ದೇಶದಿಂದ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ವಿಭಿನ್ನ ಬಗೆಯ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. 2016ರಿಂದ ಲಕ್ಷ್ಮಣಫಲ ಹಣ್ಣು ಬಿಡುತ್ತಿದ್ದು ನಾವು ತಿಂದಿದ್ದೇವೆ. ಬಾಯಿಗೆ ರುಚಿ, ಆರೋಗ್ಯ ಪಾಲನೆಗೆ ಹಿತ ಎಂಬ ಅನುಭವವಾಗಿದೆ. ಕೃಷಿ ಜೊತೆಗೆ ಗಿರ್, ಜರ್ಸಿ ತಳಿಯ ಹಸುಗಳನ್ನು ಸಾಕಿ ಹೈನುಗಾರಿಕೆಯನ್ನು ಮಾಡಲಾಗುತ್ತಿದೆ.
ನಾನು ದೆಹಲಿಯಲ್ಲಿಯೇ ಇದ್ದು ಫೋನ್ ಮೂಲಕವೇ ಅಗತ್ಯ ಸಲಹೆ ನೀಡುತ್ತಿದ್ದೇನೆ. ಇಷ್ಟೆಲ್ಲಾ ಅರಣ್ಯ ಹಾಗೂ ತೋಟಗಾರಿಕೆ ಬೆಳೆ ಬೆಳೆಯಲು ನನ್ನ ಪತ್ನಿ ಬಿ.ಇ.ಶೃತಿ, ಮಾವ ಈಶ್ವರಪ್ಪ, ಅತ್ತೆ ವಿನೋದಮ್ಮ ಸಹಕಾರ ಮುಖ್ಯವಾಗಿದೆ. ಕಳೆದ ವರ್ಷ ಲಾಕ್‌ಡೌನ್ ಆಗಿದ್ದಾಗ ನನ್ನ ಪತ್ನಿ 6 ತಿಂಗಳು ಬಳ್ಳೇಕೆರೆಯಲ್ಲಿದ್ದು ಬೆಳೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರಿಂದ ಉತ್ಕೃಷ್ಟವಾಗಿ ಬೆಳೆದಿವೆ ಎಂದು ಆರ್.ಎಸ್.ರಮೇಶ್ ವಿವರಿಸಿದರು.