ಬೆಳಗಾವಿ: ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಆಧುನಿಕ ಭಾರತದ ಪಿತಾಮಹ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.
ತಾಲ್ಲೂಕಿನ ಬಸ್ತವಾಡ ಗ್ರಾಮದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಶುಕ್ರವಾರ ಅನಾವರಣಗೊಳಿಸಿ ಅವರು ಮಾತನಾಡಿದರು.
‘ಅವರಿಂದಾಗಿ ನಾವಿಂದು ವಿಧಾನಸಭೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸಂವಿಧಾನ ರಚನೆ, ಗಣತಂತ್ರ ತರದೆ ಹೋಗಿದ್ದರೆ ದೇಶದಲ್ಲಿ ಪ್ರಜಾಪ್ರಭುತ್ವ, ಕಾನೂನು ಸುವ್ಯವಸ್ಥೆ, ಶಾಂತಿ–ಸಮೃದ್ಧಿ ಇರುತ್ತಿರಲಿಲ್ಲ’ ಎಂದು ಸ್ಮರಿಸಿದರು.
‘ಅವರು ರಚಿಸಿರುವ ಸಂವಿಧಾನ ಬಹಳ ಉತ್ಕೃಷ್ಟವಾಗಿದೆ. ಬೇರೆ ದೇಶಗಳ ಸಂವಿಧಾನಗಳಿಗಿಂತ ಹೆಚ್ಚು ಜನಪರ, ಮಾನವೀಯ ಗುಣಗಳಿರುವ ಮತ್ತು ದೇಶ ಕಟ್ಟುವ ಗ್ರಂಥವಾಗಿದೆ. ವಿಶ್ವಕ್ಕೆ ಮಾದರಿಯಾಗಿದೆ. ಜನರು ನಿರಂತರವಾಗಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವ ಅವಕಾಶಗಳನ್ನು ಅಂಬೇಡ್ಕರ್ ಮಾಡಿಕೊಟ್ಟಿದ್ದಾರೆ’ ಎಂದು ತಿಳಿಸಿದರು.
‘ನಾವು ಮತ ಹಾಕಿದರಷ್ಟೆ ಸಾಲದು. ವ್ಯವಸ್ಥೆಯು ಜನಪರವಾಗಿ ಕೆಲಸ ಮಾಡುತ್ತಿದೆಯೇ ಎನ್ನುವುದನ್ನು ಗಮನಿಸುವ ಕೆಲಸವನ್ನೂ ಜನರೂ ಮಾಡಬೇಕು. ಆಗ ಮಾತ್ರ ದೇಶ ಸಮೃದ್ಧಿಯಾಗುತ್ತದೆ. ಅದನ್ನು ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವ ಎನ್ನುತ್ತೇವೆ. ಅದು ಅಂಬೇಡ್ಕರ್ ಅವರ ಬಯಕೆಯೂ ಆಗಿತ್ತು. ಅವರ ಎಲ್ಲ ವಿಚಾರಗಳನ್ನೂ ಸಂಪೂರ್ಣವಾಗಿ ಒಪ್ಪಿ ಸಂವಿಧಾನದ ಅನ್ವಯ ಆಡಳಿತ ಮಾಡುತ್ತಿದ್ದೇವೆ’ ಎಂದರು.
‘ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣ ವೇಳೆ 107 ಎಕರೆ ಜಮೀನನ್ನು ಬಸ್ತವಾದ ಮತ್ತು ಹಲಗಾದ ರೈತರು ನೀಡಿದ್ದಾರೆ. ಬಸ್ತವಾಡಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ನಮ್ಮ ಧರ್ಮ. ಈ ನಿಟ್ಟಿನಲ್ಲಿ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
‘ಹೊಸ ಪ್ರೌಢಶಾಲೆ ಮಂಜೂರು ಮಾಡುವ ನೀತಿ ಬಂದಿಲ್ಲ. ನೀತಿ ರೂಪಿಸಿದ ಕೂಡಲೇ ಜಮೀನು ಗುರುತಿಸಿ ಬಸ್ತವಾಡ ಗ್ರಾಮಕ್ಕೆ ಹೊಸ ಪ್ರೌಢಶಾಲೆ ಮಂಜೂರು ಮಾಡಲಾಗುವುದು’ ಎಂದು ಭರವಸೆ ನೀಡಿದರು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಗ್ರಾಮೀಣ ಮಂಡಲದ ಅಧ್ಯಕ್ಷ ಧನಂಜಯ ಜಾಧವ ಪಾಲ್ಗೊಂಡಿದ್ದರು.