ಉಡುಪಿ: ಪಕ್ಕದ ಮನೆಗೆ ಆಟವಾಡಲು ಹೋಗಿದ್ದ 5 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎರ್ಮಾಳ್ ಕಲ್ಪನಾ ಅವರು 10 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ.
2018ರಲ್ಲಿ ವೆಂಕಟೇಶ ಎಂಬುವನ ಮನೆಗೆ ಬಾಲಕಿ ಆಟವಾಡಲು ಹೋಗಿದ್ದಾಗ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಳಿಕ ಅನಾರೋಗ್ಯಕ್ಕೀಡಾದ ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ಯುವಾಗ ಮಗು ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ಮಾಹಿತಿ ನೀಡಿದ್ದಳು. ಬಳಿಕ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯೂ ಸಲ್ಲಿಕೆಯಾಗಿತ್ತು.
ಮಂದಿ ಸಾಕ್ಷಿಗಳ ಪೈಕಿ 12 ಮಂದಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆದು ವೈದ್ಯಕೀಯ ದಾಖಲೆ, ಬಾಲಕಿ ಹಾಗೂ ಸಾಕ್ಷಿಗಳ ಹೇಳಿಕೆ ಆಧರಿಸಿ ಅಪರಾಧಿ ವೆಂಕಟೇಶನಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕೆ ಪೋಕ್ಸೊ ಕಾಯ್ದೆಯಡಿ 10 ವರ್ಷ ಕಠಿಣ ಸಜೆ, ₹ 20,000 ದಂಡ (ದಂಡದಲ್ಲಿ ₹ 15000 ಸಂತ್ರಸ್ತೆಗೆ, 5 ಸಾವಿರ ಸರ್ಕಾರಕ್ಕೆ) ವಿಧಿಸಲಾಗಿದೆ.
ಸಂತ್ರಸ್ತೆಗೆ 75 ಸಾವಿರ ಪರಿಹಾರ ನೀಡಲು ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. ಪೋಕ್ಸೊ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.