ದಾವಣಗೆರೆ: ನೆರಳು ಬೀಡಿ ಕಾರ್ಮಿಕರ ಯೂನಿಯನ್ ವತಿಯಿಂದ ಬಾಷಾನಗರದಲ್ಲಿ ಫಾತೀಮಾ ಶೇಖ್ ಮತ್ತು ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆಯನ್ನು ಬೀಡಿ ಕಾರ್ಮಿಕರ ಮಕ್ಕಳ ಮಧ್ಯೆ ಆಚರಿಸಲಾಯಿತು.
ತೆಲಗು ಮೂಲ ಪುಸ್ತಕವನ್ನು ಕನ್ನಡಕ್ಕೆ ಕಾ.ಹು.ಚಾನ್ ಪಾಷ ಅನುವಾದ ಮಾಡಿದ್ದ ‘ಫಾತೀಮಾ ಶೇಖ್: ಆಧುನಿಕ ಭಾರತದ ಮೊದಲ ಮುಸ್ಲಿಂ ಶಿಕ್ಷಕಿ’ ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಕೃತಿ ಬಿಡುಗಡೆ ಮಾಡಿದ ಮಹಮ್ಮದ್ ಅಮೀನ್, ‘ಇಬ್ಬರು ತಾಯಿಯಂದಿರನ್ನು ಸ್ಮರಿಸುತ್ತಾ ಅವರ ಆದರ್ಶವನ್ನು ಪಾಲಿಸುವ ಜೊತೆಗೆ ನಮ್ಮ ಬದುಕಿನಲ್ಲೂ ಕೂಡ ಅಳವಡಿಸಿಕೊಳ್ಳುವ ಜೊತೆಗೆ ಹೆಚ್ಚೆಚ್ಚು ಓದುವ ಅಗತ್ಯ ಕೂಡ ಇದೆ. ನಿಮ್ಮ ತಾಯಂದಿರು ಕಷ್ಟಪಟ್ಟು ಉತ್ತಮ ಶಿಕ್ಷಣವನ್ನು ನೀಡುತಿದ್ದಾರೆ. ವೇದಿಕೆಯಲ್ಲಿರುವ ಉಮ್ಮೆಹಾನಿ ಎಲ್‌ಎಲ್‌ಬಿ ಮಾಡುತ್ತಿದ್ದಾರೆ. ನೂರ್ ಅಫ್ಜಾ ನರ್ಸಿಂಗ್ ಮಾಡುತಿದ್ದಾರೆ. ಅವರಂತೆಯೇ ಎಲ್ಲ ಹೆಣ್ಮಕ್ಕಳು ಓದಿ ಮುಂದೆ ಬರಬೇಕು. ಉತ್ತಮ ಸ್ಥಾನ ಪಡೆಯಬೇಕು. ಅದುವೆ ಸಾವಿತ್ರಿ ಬಾಯಿ ಫುಲೆ ಮತ್ತು ಫಾತೀಮ ಶೇಖ್ ಅವರಿಗೆ ಅರ್ಪಿಸುವ ಗೌರವ’ ಎಂದು ತಿಳಿಸಿದರು.
ವೇದಿಕೆಯಲ್ಲಿ ಬೀಡಿ ಕಾರ್ಮಿಕ ಮಕ್ಕಳಾದ ಉಮ್ಮೆಹಾನಿ, ನೂರ್ ಅಫ್ಜಾ, ನೆರಳು ಬೀಡಿ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ, ನಾಹೇರ ಬಾನು ಅವರೂ ಇದ್ದರು.