Saturday, December 14, 2024
Homeರಾಜ್ಯಬೆಂಗಳೂರು ವಿಭಾಗಬಿಎಸ್‌ವೈ ಮೊಮ್ಮಗಳ ಸಾವು: ಆತ್ಮಹತ್ಯೆ ಶಂಕೆ

ಬಿಎಸ್‌ವೈ ಮೊಮ್ಮಗಳ ಸಾವು: ಆತ್ಮಹತ್ಯೆ ಶಂಕೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗಳು ಸೌಂದರ್ಯ (30) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
‘ಸೌಂದರ್ಯ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದ್ದು, ತನಿಖೆಯಿಂದಲೇ ನಿಖರ ಮಾಹಿತಿ ತಿಳಿಯಬೇಕಿದೆ. ಪತಿ ಹಾಗೂ ಕುಟುಂಬದವರು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಹೈಗ್ರೌಂಡ್ಸ್ ಠಾಣೆ ಮೂಲಗಳು ಹೇಳಿವೆ.
‘ಯಡಿಯೂರಪ್ಪ ಪುತ್ರಿ ಪದ್ಮಾವತಿ ಅವರ ಮಗಳಾಗಿದ್ದ ಸೌಂದರ್ಯ ಅವರನ್ನು ವೈದ್ಯ ನೀರಜ್‌ ಅವರ ಜೊತೆ ಮದುವೆ ಮಾಡಿಕೊಡಲಾಗಿತ್ತು. ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ ದಂಪತಿ ವಾಸವಿದ್ದರು‘ ಎಂದು ಹೈಗ್ರೌಂಡ್ಸ್ ಠಾಣೆ ಪೊಲೀಸ್ ಮೂಲಗಳು ಹೇಳಿವೆ.

‘ಡಾ. ನೀರಜ್ ಅವರು ಆಸ್ಪತ್ರೆಗೆ ಹೋಗಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ವಾಪಸು ಬಂದಾಗ ಸೌಂದರ್ಯ ಬಾಗಿಲು ತೆರೆದಿರಲಿಲ್ಲ. ಒಳಗಿನಿಂದ ಬಾಗಿಲು ಲಾಕ್‌ ಮಾಡಲಾಗಿತ್ತು. ಅನುಮಾನಗೊಂಡ ನೀರಜ್, ಪರಿಚಯಸ್ಥರ ಮೂಲಕ ಪೊಲೀಸರನ್ನು ಸಂಪರ್ಕಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದರು.‘

ಬಾಗಿಲು ತೆರದು ನೋಡಿದಾಗ, ಕೊಠಡಿಯಲ್ಲಿ ಸೌಂದರ್ಯ ಅವರ ಮೃತದೇಹ ನೇಣು ಬಿಗಿದಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಂತರ, ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ಸಾಗಿಸಲಾಗಿದೆ. ಇದೊಂದು ಆತ್ಮಹತ್ಯೆ ಎಂಬುದು ಗೊತ್ತಾಗುತ್ತಿದ್ದು, ಕಾರಣ ಪತ್ತೆ ಮಾಡಲಾಗುತ್ತಿದೆ.