ಮೈಸೂರು: ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಜತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದೆ ಎಂದು ಶಾಸಕ ಜಮೀರ್ ಅಹಮ್ಮದ್‌ಖಾನ್ ಆರೋಪಿಸಿದರು.
ವಿಧಾನಪರಿಷತ್ ಚುನಾವಣೆಯಲ್ಲಿ ಎಲ್ಲ 25 ಸ್ಥಾನಗಳಲ್ಲಿ ಸ್ಪರ್ಧಿಸಬೇಕಿತ್ತು. ಆದರೆ, ಕೇವಲ 7 ಸ್ಥಾನದಲ್ಲಿ ಸ್ಪರ್ಧಿಸಿದೆ. ಅಭ್ಯರ್ಥಿ ಇಲ್ಲದಿದ್ದರೆ ಅಭ್ಯರ್ಥಿ ಇಲ್ಲ ಎಂದು ಬಹಿರಂಗವಾಗಿ ಹೇಳಲಿ’ ಎಂದು ಇಲ್ಲಿ ಬುಧವಾರ ಸವಾಲೆಸೆದರು.
‘ಬಿಜೆಪಿಗೆ ಲಾಭ ಮಾಡಿಕೊಡಲೆಂದೇ ಜೆಡಿಎಸ್ ಕಡಿಮೆ ಸ್ಥಾನದಲ್ಲಿ ಸ್ಪರ್ಧಿಸುವ ತಂತ್ರಗಾರಿಕೆ ನಡೆಸಿದೆ’ ಎಂದರು.
ನನ್ನ ಬೆಂಬಲಿಗರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಭಾಷಣಕ್ಕೆ ಅಡ್ಡಿಪಡಿಸಿಲ್ಲ. ಸಿದ್ದರಾಮಯ್ಯ ತಮ್ಮ ಭಾಷಣ ಮೊಟಕುಗೊಳಿಸಿಲ್ಲ. ಪುನೀತ್‌ರಾಜ್‌ಕುಮಾರ್ ಅವರ ಕಾರ್ಯಕ್ರಮ ಇದ್ದುದ್ದರಿಂದ ಅವರು ಕೇವಲ 5 ನಿಮಿಷ ಮಾತನಾಡಿ ತೆರಳಿದ್ದಾರೆ. ನನಗೆ ಜಯಕಾರ ಹಾಕಿದ್ದನ್ನು ನೋಡಿ ಅವರಿಗೂ ಖುಷಿಯಾಗಿದೆ. ಈ ಕುರಿತು ನನ್ನೊಂದಿಗೆ ಅವರು ದೂರವಾಣಿ ಮೂಲಕ ಮಾತನಾಡಿದ್ದಾರೆ. ನನ್ನ ಮತ್ತು ಅವರ ಸಂಬಂಧ ಸಾಯುವವರೆಗೂ ಕೆಡುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮಳೆಯಿಂದಾಗಿ ಬೆಂಗಳೂರಿನ ಎಲ್ಲೆಡೆ ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಮುಖ್ಯಮಂತ್ರಿ ನೆಪಮಾತ್ರಕ್ಕೆ ನಗರ ಪ್ರದಕ್ಷಿಣೆ ಮಾಡಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಟೀಕಿಸಿದರು.