Saturday, December 14, 2024
Homeಉತ್ತರ ಕರ್ನಾಟಕಬೆಳಗಾವಿಬಿಜೆಪಿ ಬಲಿಷ್ಠವಾಗಿದ್ದರೆ ಜೆಡಿಎಸ್‌ ಬೆಂಬಲವನ್ನೇಕೆ ಕೇಳುತ್ತಿದ್ದರು: ಡಿಕೆಶಿ ಪ್ರಶ್ನೆ

ಬಿಜೆಪಿ ಬಲಿಷ್ಠವಾಗಿದ್ದರೆ ಜೆಡಿಎಸ್‌ ಬೆಂಬಲವನ್ನೇಕೆ ಕೇಳುತ್ತಿದ್ದರು: ಡಿಕೆಶಿ ಪ್ರಶ್ನೆ

ಬೆಳಗಾವಿ: ‘ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲ ಕೇಳುವುದರೊಂದಿಗೆ ಬಿಜೆಪಿಯ ಶಕ್ತಿ ಕುಂದಿರುವುದು ಸಾಬೀತಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಆ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೆಡಿಎಸ್ ಬೆಂಬಲ ಕೇಳಿದ್ದಾರೆ. ಹಾಗಾದರೆ ಮುಳುಗುತ್ತಿರುವ ಹಡಗು ಯಾವುದು?’ ಎಂದು ಕೇಳಿದರು.

‘ಜೆಡಿಎಸ್‌ ಜೊತೆ ಕೈಜೋಡಿಸುವುದಿಲ್ಲ ಎಂದು ಆ ಪಕ್ಷದ ರಾಜ್ಯ ಉಸ್ತುವಾರಿಯೇ ಹೇಳಿದ್ದರು. ಆದರೂ ಇಲ್ಲಿನ ನಾಯಕರು ಬೆಂಬಲ ಕೇಳಿದ್ದಾರೆ. ಅವರು ಬಲಿಷ್ಠವಾಗಿದ್ದರೆ ಬೆಂಬಲ ಕೇಳಬೇಕೇಕೆ’ ಎಂದು ಪ್ರಶ್ನಿಸಿದರು.

‘ಶಿಸ್ತಿನ ಪಕ್ಷ ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಾರೆ. ಅಲ್ಲಿ ಸ್ವಾಭಿಮಾನ ಅಥವಾ ಶಿಸ್ತಿದ್ದರೆ ಬೆಳಗಾವಿಯಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ಉತ್ತರ ಕೊಡಲಿ. ಶಿಸ್ತಿಲ್ಲ, ನಮ್ಮದು ಕೇವಲ ಬ್ಲಾಕ್‌ಮೇಲರ್‌ಗಳ ಪಕ್ಷ ಹಾಗೂ ಅವರಿಗೆ ಮಂಡಿಯೂರಿದ್ದೇವೆ ಎನ್ನುವುದು ಮನವರಿಕೆ ಅಗಿದ್ದರೆ ಅವರಿಷ್ಟದಂತೆ ಮಾಡಿಕೊಳ್ಳಲಿ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಬಿಜೆಪಿಯೂ ಈ ಮಟ್ಟಕ್ಕೆ ಬಂತಲ್ಲಾ, ಬ್ಲಾಕ್‌ಮೇಲರ್‌ಗಳಿಗೆ ಹೆದರಿ ಸರ್ಕಾರ ನಡೆಸುತ್ತಿದ್ದಾರಲ್ಲಾ ಎನ್ನುವುದು ನನಗಂತೂ ಬಹಳ ಸಂತೋಷ ತಂದಿದೆ’ ಎಂದರು.

‘ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಬಗ್ಗೆ ರಮೇಶ ಜಾರಕಿಹೊಳಿ ಥೂ ಎಂದೆಲ್ಲಾ ಮಾತನಾಡಿರುವುದು ಬಿಜೆಪಿಯ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಸಂಸ್ಕೃತಿ, ಸಂಸ್ಕಾರ ಇರುವ ಪಕ್ಷದ ಎಂದು ಬಿಜೆಪಿಯವರು ಹೇಳಿಕೊಳ್ಳಿತ್ತಾರೆ. ಕೀಳು ಹೇಳಿಕೆಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಬಿ.ಎಸ್. ಯಡಿಯೂರಪ್ಪ ಉತ್ತರ ಕೊಡಲಿ’ ಎಂದು ಪ್ರತಿಕ್ರಿಯಿಸಿದರು. ‘ನನ್ನ ಪಕ್ಷದಲ್ಲಾಗಿದ್ದರೆ ಅಂಥವರನ್ನು ಗಂಟೆಯೂ ಇಟ್ಟುಕೊಳ್ಳುತ್ತಿರಲಿಲ್ಲ’ ಎಂದು ಗುಡುಗಿದರು.

‘ಸ್ಥಳೀಯ ಮುಖಂಡರು ಬಯಸಿದರೆ ಗೋಕಾಕ ಮತ್ತು ಅರಭಾವಿಯಲ್ಲೂ ಪ್ರಚಾರ ನಡೆಸುತ್ತೇನೆ’ ಎಂದರು.