ಬೆಂಗಳೂರು: ‘ಬಿಟ್ ಕಾಯಿನ್ ಹಗರಣದ ಬಗ್ಗೆ ರಾಜ್ಯದ ತನಿಖಾ ಸಂಸ್ಥೆಗಳು ಸಮಗ್ರ ತನಿಖೆ ನಡೆಸಿದ್ದೇ ಆಗಿದ್ದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ತನಿಖೆಗೆ ವಹಿಸುವ ಅಗತ್ಯವೇನಿತ್ತು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬಿಟ್ ಕಾಯಿನ್ ಹಗರಣದ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ಯಾಗ್ ಮಾಡಿರುವ ಅವರು ಹಲವು ಸಂದೇಹಗಳನ್ನು ಎತ್ತಿದ್ದಾರೆ.
‘ಹಗರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗೆ ವಹಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸಮಗ್ರ ತನಿಖೆ ನಡೆಸಿದ್ದೇ ಆದರೆ ಹೆಚ್ಚಿನ ತನಿಖೆಗೆ ಇಡಿ ಮತ್ತು ಸಿಬಿಐಗೆ ಒಪ್ಪಿಸುವ ಅನಿವಾರ್ಯ ಯಾಕೆ ಬಂತು’ ಎಂದು ಪ್ರಶ್ನಿಸಿದ್ದಾರೆ.
‘ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದ ವರದಿಗಳನ್ನು ಗಮನಿಸಿದರೆ ರಾಜ್ಯ ಸರ್ಕಾರದ ನಡವಳಿಕೆ ಬಗ್ಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಮುಖ್ಯಮಂತ್ರಿ ಅವರು, ಈ ಹಗರಣದ ಬಗ್ಗೆ ಪ್ರಶ್ನಿಸಿದವರ ವಿರುದ್ದ ಆರೋಪ ಮಾಡಲು ಹೋಗದೆ ತನಿಖೆಯ ಪೂರ್ಣ ವಿವರವನ್ನು ಸಾರ್ವಜನಿಕರ ಮುಂದಿಡಬೇಕು’ ಎಂದು ಆಗ್ರಹಿಸಿದ್ದಾರೆ.
‘ಬಿಟ್ ಕಾಯಿನ್ ಹಗರಣದ ಆರೋಪಿ ಐದು ಸಾವಿರ ಬಿಟ್ ಕಾಯಿನ್ ದೋಚಿದ್ದಾನೆಂದು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಹೇಳಿದ್ದಾರೆಂದು ಪತ್ರಿಕೆ ವರದಿ ಮಾಡಿದೆ. ಹಾಗಿದ್ದಲ್ಲಿ, ಕದ್ದ ಆ ಬಿಟ್ ಕಾಯಿನ್ಗಳು ಎಲ್ಲಿವೆ? ಅದನ್ನು ಜಪ್ತಿ ಮಾಡಲಾಗಿದೆಯೇ? ಅಥವಾ ಅವು ಇನ್ನೂ ಪತ್ತೆಯಾಗಿಲ್ಲವೇ? ಎಂದೂ ಅವರು ಟ್ವೀಟ್ನಲ್ಲಿ ಕೇಳಿದ್ದಾರೆ.