ಚಾಮರಾಜನಗರ: ತಾಲ್ಲೂಕಿನ ವಡಕೆಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಲ್ಲಿ ಬಿದ್ದಿದ್ದ ಬಿಸಿಯೂಟ ಸೇವಿಸಿದ 70 ಮಕ್ಕಳನ್ನು ಕೌದಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಾಲೆಯಲ್ಲಿ 170 ಮಕ್ಕಳಿದ್ದಾರೆ. ಸೋಮವಾರ 90 ಮಂದಿ ಹಾಜರಾಗಿದ್ದಾರೆ. ಈ ಮೈಕಿ 70 ಮಕ್ಕಳು ಬಿಸಿಯೂಟ ಸೇವಿಸಿದ್ದಾರೆ.
ಮಧ್ಯಾಹ್ನದ ಬಿಸಿಯೂಟಕ್ಕೆ ಸಿದ್ಧಪಡಿಸಿದ್ದ ಸಾಂಬಾರಿಗೆ ಹಲ್ಲಿ ಬಿದ್ದಿತ್ತು. ಇದು ಅರಿವಿಗೆ ಬರುತ್ತಿದ್ದಂತೆಯೇ ಮಕ್ಕಳಿಗೆ ಊಟ ಮಾಡೊಯಾಗಿತ್ತು. ಕೆಲವು ಮಕ್ಕಳಲ್ಲಿ ವಾಂತಿ ಕಾಣಿಸಿಕೊಂಡಿದೆ. ತಕ್ಷಣವೇ ಶಿಕ್ಷಕರು ಮಕ್ಕಳನ್ನು ಕೌದಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು.
‘ಬಿಸಿಯೂಟದಲ್ಲಿ ಹಲ್ಲಿ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಎಲ್ಲಾ ಮಕ್ಕಳನ್ನು ಕೌದಳ್ಳಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಕ್ಕಳಿಗೆ ಏನೂ ಆಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಕೊಳಂದೈರಾಜ್ ಅವರು ತಿಳಿಸಿದರು.