Saturday, December 14, 2024
Homeಮಧ್ಯ ಕರ್ನಾಟಕಚಿತ್ರದುರ್ಗಬುದ್ಧಿ ಹೇಳಲು ಬಂದ ತಂದೆಯನ್ನು ಕೊಂದ ಮಗ

ಬುದ್ಧಿ ಹೇಳಲು ಬಂದ ತಂದೆಯನ್ನು ಕೊಂದ ಮಗ

ಚಿತ್ರದುರ್ಗ: ಕಳವು ಮಾಡಲು ಹೋಗುತ್ತಿದ್ದ ಮಗನಿಗೆ ಬುದ್ಧಿ ಹೇಳಿ ತಡೆಯಲು ಬಂದ ತಂದೆಯನ್ನು ಮಗನೇ ಕೊಂದಿರುವ ಘಟನೆ ನಾಯಕನಹಟ್ಟಿ ಹೋಬಳಿಯ ಮಲ್ಲೂರಹಳ್ಳಿ‌ ಭರಮಸಾಗರ ಕಪಿಲೆಯಲ್ಲಿ ನಡೆದಿದೆ.

ಗುಡ್ಲು ಮಲ್ಲಯ್ಯ (70) ಹತ್ಯೆಗೀಡಾದವರು. ಲೋಕೇಶ (28) ಕೊಲೆ ಮಾಡಿದ ಆರೋಪಿ.

ಲೋಕೇಶನು ಹಲವು ದಿನಗಳಿಂದ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಈ ಬಗ್ಗೆ ನಾಯಕನಹಟ್ಟಿ, ತಳಕು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದವು. ಇದರಿಂದ ಇಡೀ ಕುಟುಂಬ ತಲೆತಗ್ಗಿಸುವ ಸನ್ನಿವೇಶ ಎದುರಾಗಿತ್ತು. ಕಳವು ಮಾಡಬೇಡ ಎಂದು ಕುಟುಂಬದ ಎಲ್ಲ ಸದಸ್ಯರು ಹಲವು ಬಾರಿ ಬುದ್ದಿವಾದ ಹೇಳಿದರೂ ಲೋಕೇಶ ಕೃತ್ಯವೆಸಗುವುದನ್ನು ಬಿಟ್ಟಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ರಾತ್ರಿ ಇದೇ ವಿಷಯಕ್ಕೆ ತಂದೆ ಮತ್ತು ಮಗನ‌ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಹಗ್ಗದಿಂದ ಮಗನ ಕೈಲುಗಳನ್ನು ಕಟ್ಟಿಹಾಕಿದರೆ ಎಲ್ಲಿಯೂ ಹೋಗುವುದಿಲ್ಲ ಎಂದು ಮಲ್ಲಯ್ಯ ಹಗ್ಗ ಹಿಡಿದು ಕೈಕಾಲು ಕಟ್ಟಲು ಮುಂದಾಗಿದ್ದಾರೆ. ಈ ವೇಳೆ ಲೋಕೇಶನು ಕಾಲಿನಿಂದ ಜೋರಾಗಿ ಒದ್ದಿದ್ದಾನೆ. ಒದ್ದ ರಭಸಕ್ಕೆ ಹಿಂಬದಿಯಲ್ಲಿದ್ದ ಕಲ್ಲಿಗೆ ಬಿದ್ದ ಪರಿಣಾಮ ಗುಡ್ಲುಮಲ್ಲಯ್ಯ ತೀರ್ವ ರಕ್ತಸ್ರಾವವಾಗಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಇದರಿಂದ ಗಾಬರಿಗೊಂಡ‌ ಮನೆಯ ಇತರೆ ಸದಸ್ಯರು ಲೋಕೇಶನನ್ನು ಹಿಡಿದು ಮರಕ್ಕೆ ಕಟ್ಟಿಹಾಕಿ ಮಂಗಳವಾರ ಬೆಳಿಗ್ಗೆ ನಾಯಕನಹಟ್ಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಸಿಪಿಐ ರಮಾಕಾಂತ್, ಪಿಎಸ್ ಐ ಮಹೇಶ ಲಕ್ಷ್ಮಣ ಹೊಸಪೇಟೆ, ಎಎಸ್ ಐ ನಾಗರಾಜ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.