Saturday, December 14, 2024
Homeಉತ್ತರ ಕರ್ನಾಟಕಬೆಳಗಾವಿಬೆಳಗಾವಿಯಲ್ಲಿ ‌ಸಂಭ್ರಮದ‌ ಹೋಳಿ

ಬೆಳಗಾವಿಯಲ್ಲಿ ‌ಸಂಭ್ರಮದ‌ ಹೋಳಿ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಜನರು ಹೋಳಿ ಹಬ್ಬವನ್ನು ಸಂಭ್ರಮದಿಂದ ಶುಕ್ರವಾರ ಆಚರಿಸಿದರು.

ಎರಡು ವರ್ಷಗಳು ಕೋವಿಡ್-19 ಕಾರಣದಿಂದಾಗಿ ಹೋಳಿಯನ್ನು ಸರಳವಾಗಿ ಆಚರಿಸಿದ್ದ ಜನರು, ಈ ಬಾರಿ ಕೊರೊನಾ ಸೋಂಕಿನ ಪ್ರಮಾಣ ತಗ್ಗಿದ್ದರಿಂದ ಅದ್ಧೂರಿಯಾಗಿ ಓಕುಳಿಯಾಟದಲ್ಲಿ ತೊಡಗಿದ್ದಾರೆ.

ಬಡಾವಣೆಗಳ ಗಲ್ಲಿಗಳಲ್ಲಿ, ಮುಖ್ಯ ರಸ್ತೆಗಳಲ್ಲಿ ಜನರು ಓಕುಳಿಯಾಟದಲ್ಲಿ ತೊಡಗಿರುವುದು ಕಂಡುಬರುತ್ತಿದೆ.‌ ಯುವಕರು ಗುಂಪು ಗುಂಪುಗಳಾಗಿ ಸೇರಿಕೊಂಡು ವಿಚಿತ್ರ ಮುಖವಾಡಗಳನ್ನು ಹಾಕಿಕೊಂಡು, ಸಿಲ್ವರ್ ಮೊದಲಾದ ಬಣ್ಣಗಳನ್ನು ಮೈತುಂಬಾ ಬಳಿದುಕೊಂಡು ದ್ವಿಚಕ್ರವಾಹನಗಳಲ್ಲಿ ಸುತ್ತಾಡುತ್ತಾ ಸಿಕ್ಕವರಿಗೆ ಬಣ್ಣ ಬಳಿದು- ಎರಚಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿರುವುದು ಕಂಡುಬಂತು.

ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವ್ಯಾಕ್ಸಿನ್ ಡಿಪೊ ಆವರಣದ ಲೇಲೇ ಮೈದಾನದಲ್ಲಿ ‌ಹೋಳಿ ಮಿಲನ್ ಕಾರ್ಯಕ್ರಮ ಆಯೋಜಿಸಿದ್ದರು. ಅಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿತ್ತು. ಲೈವ್ ಆರ್ಕೆಸ್ಟ್ರಾ ಜೊತೆಗೆ ಅಲ್ಲಲ್ಲಿ ಅಳವಡಿಸಿದ್ದ ಸ್ಪ್ರಿಂಕ್ಲರ್‌ಗಳಲ್ಲಿ ನೀರು ಚಿಮ್ಮುವಂತೆ ವ್ಯವಸ್ಥೆ ಮಾಡಲಾಗಿತ್ತು. ಹಾಡಿಗೆ ನರ್ತಿಸುತ್ತಾ ಜನರು ಸಂಭ್ರಮಿಸಿದರು. ಬಣ್ಣದೋಕುಳಿಯಲ್ಲಿ ಮಿಂದೆದ್ದರು.

ಹಬ್ಬದ ಅಂಗವಾಗಿ ಬಹುತೇಕ ಅಂಗಡಿ- ಮಳಿಗೆಗಳು ಮುಚ್ಚಿವೆ. ಮಧ್ಯಾಹ್ನದವರೆಗೂ ಓಕುಳಿಯಾಟದಲ್ಲಿ ಜನರು ತೊಡಗಲಿದ್ದಾರೆ.‌ ಸಂಜೆ ಬಳಿಕ ವರ್ತಕರು ಅಂಗಡಿ- ಮಳಿಗೆಗಳನ್ನು ತೆರೆಯಲಿದ್ದಾರೆ.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲೂ ಸಂಭ್ರಮ ಕಂಡುಬಂದಿದೆ.