ಹುಬ್ಬಳ್ಳಿ: ಬಿಟ್ ಕಾಯಿನ್ ಹಗರಣದ ಆರೋಪವನ್ನು ನಿರ್ಲಕ್ಷಿಸಿ ಎಂದು ಪ್ರಧಾನಿ ಸಲಹೆ ನೀಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿರುವ ಮಾತಿನಲ್ಲಿ ಸತ್ಯ ಎಷ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಪ್ರಧಾನಿ ಏನು ಹೇಳಿದ್ದಾರೆ ಎಂದು ಯಾರಿಗೆ ಗೊತ್ತು? ಮೋದಿ ಈ ಕುರಿತು ಅಧಿಕೃತ ಹೇಳಿಕೆ ನೀಡಿದ್ದಾರೆಯೇ ಎಂದು ಶುಕ್ರವಾರ ಸುದ್ದಿಗಾರರಿಗೆ ಮರುಪ್ರಶ್ನಿಸಿದರು.
ಮೋದಿ ನಿಜವಾಗಿಯೂ ಹಾಗೆಡ ಹೇಳಿದ್ದರೆ, ಪ್ರಧಾನಿಯಾದವರು ಬಿಟ್ ಕಾಯಿನ್ ವಿಚಾರದ ಬಗ್ಗೆ ಲಘುವಾಗಿ ಮಾತನಾಡಬಾರದು. ಸತ್ಯ ಹೊರಗೆ ಬರಬೇಕು. ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಆ ಹೆಸರುಗಳನ್ನು ಬಹಿರಂಗಗೊಳಿಸಬೇಕು. ಸತ್ಯ ಹೇಳಿದರೆ ಸರ್ಕಾರಕ್ಕೆ ಧಕ್ಕೆಯಾಗಬಹುದು ಎನ್ನುವ ಭಯದಿಂದ ಬೊಮ್ಮಾಯಿ ಸುಮ್ಮನಿದ್ದಾರೆ ಎಂದು ಟೀಕಿಸಿದರು.
ಪ್ರಭಾವಿಗಳಿದ್ದಾರೆ ಎನ್ನುವುದು ಗೊತ್ತು, ಈ ಹಗರಣ ಮುಚ್ಚಿಹಾಕುವ ಯತ್ನದಲ್ಲಿದ್ದಾರೆ. ಸರ್ಕಾರ ನಡೆಸುವವರೇ ನಮ್ಮನ್ನು ದಾಖಲೆ ಕೇಳುವುದು ಸರಿಯೇ ಎಂದು ಕೇಳಿದರು.
ಬಿಜೆಪಿಯವರು ಮೊದಲು ಹೆಸರು ಹೇಳಲಿ ಎಂದು ಕಾಯುತ್ತಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತನಿಖೆಗೆ ಕೊಟ್ಟಿಲ್ಲವೇ?: ಹಗರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಆದರೆ, ಈಗ ತನಿಖೆಗೆ ಕೊಟ್ಟಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ. ಇದು ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದರು.