Saturday, December 14, 2024
Homeಬೆಂಗಳೂರು ವಿಭಾಗಬೆಂಗಳೂರು ನಗರಬೋಯರ್ ತಳಿಯ ಮೇಕೆಗೆ 7 ಲಕ್ಷ ರೂಪಾಯಿ ಮೌಲ್ಯ

ಬೋಯರ್ ತಳಿಯ ಮೇಕೆಗೆ 7 ಲಕ್ಷ ರೂಪಾಯಿ ಮೌಲ್ಯ

ಬೆಂಗಳೂರು: ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಬೋಯರ್ ತಳಿಯ ಮೇಕೆ ಬೆಂಗಳೂರು ಕೃಷಿ ಮೇಳದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿತ್ತು.

ಒಂದು ವರ್ಷದಲ್ಲೇ ಸಂತಾನೋತ್ಪತ್ತಿಗೆ ಸಜ್ಜಾಗುವ ಮತ್ತು ಅತ್ಯಂತ ವೇಗವಾಗಿ ಬೆಳವಣಿಗೆಯಾಗುವ ಬೋಯರ್ ತಳಿಯ ಮೇಕೆಗಳನ್ನು ಸಾಕಿರುವ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಬಳಿಯ ತರಬೇನಹಳ್ಳಿ ಗ್ರಾಮದ ರೈತ ಉಮೇಶ್ ಕೃಷಿ ಮೇಳಕ್ಕೆ ಮೇಕೆಗಳೊಂದಿಗೆ ಬಂದಿದ್ದಾರೆ.

ದಕ್ಷಿಣ ಆಫ್ರಿಕಾ ಮೂಲದ ಈ ತಳಿಯ ಮೇಕೆಗಳನ್ನು ದೇಶದ ಹಲವೆಡೆ ಸಾಕಲಾಗುತ್ತಿದೆ. ಪುಣೆಯಿಂದ ಈ ತಳಿಯ ಒಂದು ಗಂಡು ಮತ್ತು ಎರಡು ಹೆಣ್ಣು ಮರಿಗಳನ್ನು ಉಮೇಶ್ ಅವರು 2.50 ಲಕ್ಷ ರೂಪಾಯಿಗೆ ಖರೀದಿಸಿ ತಂದಿದ್ದರು. ಈಗ ಅವುಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

‘ಕೇರಳದ ತಲಚೇರಿ ತಳಿಯ ಮೇಕೆಗಳಿಗೆ ಬೋಯರ್ ತಳಿಯ ಗಂಡು ಮೇಕೆಯಿಂದ ಸಂಕರ ಮಾಡಿಸಲಾಗುತ್ತಿದೆ. ಹುಟ್ಟುವ ಮೇಕೆ ಮರಿ ಕೇವಲ ಆರು ತಿಂಗಳಲ್ಲೇ 20 ಕೆ.ಜಿಯಿಂದ 30 ಕೆ.ಜಿ ತೂಕ ಬರಲಿದೆ. ಸಂಕರಗೊಂಡು ಹುಟ್ಟಿರುವ ಗಂಡು ಮೇಕೆಯಿಂದ ಬೇರೆ ತಳಿಯ ಮೇಕೆಗಳಿಗೂ ಸಂಕರ ಮಾಡಿಸಬಹುದಾಗಿದೆ. ಆದರೆ, ಅವು ಆರು ತಿಂಗಳ ಅವಧಿಯಲ್ಲಿ 18 ಕೆ.ಜಿಯಿಂದ 20 ಕೆ.ಜಿಯಷ್ಟು ತೂಕ ಬರಲಿವೆ. ನೇರವಾಗಿ ಬೋಯರ್ ಮೇಕೆಯಿಂದ ಸಂಕರಗೊಂಡು ಹುಟ್ಟುವ ಮರಿಗಳ ಬೆಳವಣಿಗೆಯ ವೇಗ ಹೆಚ್ಚು’ ಎಂದು ಉಮೇಶ್‌ ವಿವರಿಸಿದರು.

‘ ಈ ಮೇಕೆಯನ್ನು ಮಾಂಸಕ್ಕಿಂತಲೂ ಹೆಚ್ಚಾಗಿ ಸಂತಾನೋತ್ಪತ್ತಿಗೆ ಬಳಸಲಾಗುತ್ತಿದೆ. ಈ ತಳಿಯನ್ನು ಅಭಿವೃದ್ಧಿಪಡಿಸಲು ಇಷ್ಟಪಡುವ ರೈತರು ಕರೆತರುವ ಆಡುಗಳಿಗೆ ಸಂಕರ ಮಾಡಿಕೊಡಲಾಗುತ್ತಿದೆ’ ಎಂದು ಅವರು ತಿಳಿಸಿದರು.