ಶಿವಮೊಗ್ಗ: ಭದ್ರಾ ಜಲಾಶಯ ಭರ್ತಿಯಾಗಿದ್ದು ಗುರುವಾರ ನಾಲ್ಕು ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಯಿತು.
ಜೂನ್‌ನಿಂದಲೇ ಮಲೆನಾಡಿನಲ್ಲಿ ಉತ್ತಮ ಮಳೆಯಾದ ಕಾರಣ ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬಂದಿತ್ತು. 186 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 184.5 ಅಡಿ ನೀರು ಸಂಗ್ರಹವಿದೆ. 15,206 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಮುಂಜಾಗ್ರತಾ ಕ್ರಮವಾಗಿ ನದಿಗೆ 1,600 ಕ್ಯುಸೆಕ್ ನೀರು ಬಿಡಲಾಗಿದೆ.
ಭದ್ರಾ ಜಲಾಶಯ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಹರಪನಹಳ್ಳಿ ತಾಲ್ಲೂಕಿನ 1,82,818 ಹೆಕ್ಟೇರ್ ಜಮೀನುಗಳಿಗೆ ನೀರುಣಿಸುತ್ತದೆ. ಜತೆಗೆ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಹಲವು ನಗರ, ಪಟ್ಟಣ, ಗ್ರಾಮಗಳ ಕುಡಿಯುವ ನೀರಿನ ಯೋಜನೆಗಳಿಗೆ ಜಲಾಶಯವೇ ಆಧಾರ.
ಗರಿಷ್ಠಮಟ್ಟ ತಲುಪಿದರೆ ಜಲಾಶಯದಲ್ಲಿ 71.53 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತದೆ. ಜತೆಗೆ ಭದ್ರಾ ಮೇಲ್ದಂಡೆ ಯೋಜನೆ 29.90 ಟಿಎಂಸಿ ಅಡಿ ನೀರು ನಿಗದಿ ಮಾಡಲಾಗಿದೆ. ಯೋಜನೆ ಪೂರ್ಣಗೊಂಡರೆ ಚಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರು, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಹಿರಿಯೂರು ಚಿತ್ರದುರ್ಗ ಚಳ್ಳಕೆರೆ, ದಾವಣಗೆರೆ ಜಿಲ್ಲೆಯ ಜಗಳೂರು, ತುಮಕೂರು ಜಿಲ್ಲೆಯ ಸಿರಾ, ಚಿಕ್ಕನಾಯಕನಹಳ್ಳಿ ವ್ಯಾಪ್ತಿಯ 2,25,515 ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ.
ಹೊಸನಗರದಲ್ಲಿ ಉತ್ತಮ ಮಳೆ: ಜಿಲ್ಲೆಯಲ್ಲಿ ಗುರುವಾರ ಹಲವಡೆ ಸಾಧಾರಣ ಮಳೆಯಾಗಿದೆ. ಹೊಸನಗರದಲ್ಲಿ 12.70 ಸೆಂ.ಮೀ. ಮಳೆಯಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ 27 ಸಾವಿರ, ತುಂಗಾ ಜಲಾಶಯಕ್ಕೆ 32 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರು ನದಿಗೆ ಬಿಡಲಾಗುತ್ತಿದೆ.