ಚಿತ್ರದುರ್ಗ: ಭರಮಸಾಗರದ ಹಲಸಿನ ಹಣ್ಣೆಂದರೆ ಪುನೀತ್ ರಾಜ್‌ಕುಮಾರ್‌ಗೆ ಬಲು ಇಷ್ಟ. ಭರಮಸಾಗರದ ಹಲಸಿಗೂ ಡಾ. ರಾಜ್‌ಕುಮಾರ್ ಕುಟುಂಬದವರಿಗೂ ಅವಿನಾಭಾವ ಸಂಬಂಧ.
ಗೋಕಾಕ್ ಚಳವಳಿ ಸಂದರ್ಭದಲ್ಲಿ ಡಾ.ರಾಜ್‌ಕುಮಾರ್ ಅವರು ದಾವಣಗೆರೆಗೆ ಭರಮಸಾಗರದ ಮೂಲಕ ಹಾದು ಹೋಗುವಾಗ ಇಲ್ಲಿನ ಹಲಸಿನ ಹಣ್ಣಿನ ಸವಿ ಉಂಡಿದ್ದರು. ಆಗಿನಿಂದ ಪ್ರತಿ ವರ್ಷವೂ ಅವರ ಮನೆಗೆ ಭರಮಸಾಗರದ ಹಲಸಿನ ಹಣ್ಣನ್ನು ಇಲ್ಲಿಯ ತೋಟದ ಮಾಲೀಕ ಶೇಖರಪ್ಪ ಅವರು ಕಾರ್ಮಿಕ ಬಸವಂತಪ್ಪ ಎಂಬುವವರ ಮೂಲಕ ಬೆಂಗಳೂರಿನ ಅವರ ಮನೆಗೆ ಕಳುಹಿಸಿಕೊಡುತ್ತಿದ್ದರು. ಡಾ. ರಾಜ್‌ಕುಮಾರ್ ನಿಧನದ ನಂತರವೂ ಭರಮಸಾಗರದಿಂದ ಹಲಸಿನ ಹಣ್ಣನ್ನು ರಾಜ್ ಕುಟುಂಬಕ್ಕೆ ಕಳುಹಿಸಲಾಗುತ್ತಿತ್ತು. ಆಗ ಪಾರ್ವತಮ್ಮ ನವರು, ಶಿವಣ್ಣ, ರಾಘಣ್ಣ, ಪುನೀತ್ ಹಲಸಿನ ಹಣ್ಣನ್ನು ನೋಡಿ ಓಹೋ ಭರಮಸಾಗರದ ಹಲಸು ಎಂದು ಗುರುತಿಸಿ ಇಷ್ಟ ಪಟ್ಟು ಸೇವಿಸುತ್ತಿದ್ದರು.
ಅದರಲ್ಲಿಯೂ ಪುನೀರ್‌ಗೆ ಇಲ್ಲಿಯ ‘ಚಂದ್ರ’ ತಳಿಯ ಹಲಸಿನ ಹಣ್ಣು ಇಷ್ಟವಾಗಿತ್ತು. ಹೀಗಾಗಿ ಪದೇ ಪದೇ ಅವರೇ ದೂರವಾಣಿ ಕರೆ ಮಾಡಿ ಹಣ್ಣನ್ನು ತರಿಸಿಕೊಳ್ಳುತ್ತಿದ್ದರು. ಹಣ್ಣು ತೆಗೆದುಕೊಂಡು ಹೋದ ಕಾರ್ಮಿಕರಿಗೆ ಕೈತುಂಬ ಹಣ ನೀಡಿ ದಾರಿ ವೆಚ್ಚಕ್ಕೂ ನೀಡುತ್ತಿದ್ದ ಕೊಡುಗೈ ದಾನಿಗಳಾಗಿದ್ದರು. ಆದರೆ ಈಗ ಅವರು ಇಲ್ಲದಿರುವುದು ಬಹಳ ದುಃಖ ತಂದಿದೆ. ಭರಮಸಾಗರದ ಹಲಸಿನಹಣ್ಣಿಗೆ ಪ್ರಖ್ಯಾತಿ ಸಿಗಲು ಇದೂ ಒಂದು ಕಾರಣವಾಗಿತ್ತು ಎಂದು ಶೇಖರಪ್ಪ ಕಣ್ಣೀರಿಟ್ಟರು.