Saturday, December 14, 2024
Homeಬೆಂಗಳೂರು ವಿಭಾಗಬೆಂಗಳೂರು ನಗರಭಾನುವಾರ ಕಾಂಗ್ರೆಸ್ ಪ್ರಚಾರ ಸಮಿತಿ ಸಭೆ, ಲೋಕಸಭೆ ಚುನಾವಣೆ ಮೇಲೆ ಕಣ್ಣು

ಭಾನುವಾರ ಕಾಂಗ್ರೆಸ್ ಪ್ರಚಾರ ಸಮಿತಿ ಸಭೆ, ಲೋಕಸಭೆ ಚುನಾವಣೆ ಮೇಲೆ ಕಣ್ಣು

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ರಾಜ್ಯ ಕಾಂಗ್ರೆಸ್ ಪಾಳೆಯ ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದು, ಇದರ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಮತ್ತು ಜಿಲ್ಲಾ ಪ್ರಚಾರ ಸಮಿತಿಯ ಪದಾಧಿಕಾರಿಗಳ ಸಭೆಯನ್ನು ಭಾನುವಾರ (ಸೆ.3) ಕರೆಯಲಾಗಿದೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸೇರಿದಂತೆ ಹಲವು ನಾಯಕರು ಈ ಸಭೆಯಲ್ಲಿ ಮಾತನಾಡಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಯಶಸ್ಸಿಗೆ ದುಡಿದ ಪ್ರಚಾರ ಸಮಿತಿಯ ರಾಜ್ಯ, ಜಿಲ್ಲಾ ಹಾಗೂ ವಿಧಾನಸಭಾ ಕ್ಷೇತ್ರವಾರು ಸಮಿತಿಗಳ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದು ಸಭೆಯ ಉದ್ದೇಶವಾಗಿದೆ. ಈ ಮೂಲಕ ಪದಾಧಿಕಾರಿಗಳನ್ನು ಹತ್ತಿರದಲ್ಲೇ ಇರುವ ಲೋಕಸಭೆಯ ಸಾರ್ವತ್ರಿಕ ಚುನಾವಣೆಗೆ ಹುರಿದುಂಬಿಸುವುದು ಪಕ್ಷದ ಚಿಂತನೆಯಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಓಟಕ್ಕೆ ತಡೆ ಹಾಕಿರುವ ರಾಜ್ಯ ಕಾಂಗ್ರೆಸ್ ಈಗ ಉತ್ಸಾಹದ ಬುಗ್ಗೆಯಾಗಿದ್ದು, ರಾಷ್ಟ್ರ ಮಟ್ಟದಲ್ಲೂ ಇದೇ ರೀತಿಯ ಫಲಿತಾಂಶ ಬರುವಂತೆ ನೋಡಿಕೊಳ್ಳಲು ಬಯಸುತ್ತಿದೆ. ಇದಕ್ಕೆ ವೇದಿಕೆಯಾಗಿ, ಭಾನುವಾರದ ಸಭೆಯನ್ನು ಕರೆಯಲಾಗಿದೆ. ಬೆಳಿಗ್ಗೆ 11ಗಂಟೆಗೆ ಆರಂಭವಾಗುವ ಸಭೆ ಮಧ್ಯಾಹ್ನದವರೆಗೆ ನಡೆಯಲಿದೆ ಎಂದು ಪ್ರಚಾರ ಸಮಿತಿಯ ಸಮನ್ವಯಕಾರ ಎ.ಪಿ.ಬಸವರಾಜ ಅವರು ತಿಳಿಸಿದ್ದಾರೆ.