ಬೆಂಗಳೂರು: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತ ಗಳಿಸುವುದಕ್ಕಾಗಿ ಚೀನಾದ ಬೀಜಿಂಗ್ ವಿಮಾನ ನಿಲ್ದಾಣದ ಚಿತ್ರವನ್ನು ನೋಯ್ಡಾ ವಿಮಾನ ನಿಲ್ದಾಣ ಎಂದು ಬಿಂಬಿಸಿ ನಗೆಪಾಟಲಿಗೀಡಾದ ಬಿಜೆಪಿ ಭಾರತದ ಗೌರವ ಕಳೆದಿದೆ ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ. ಮಹದೇವಪ್ಪ ಟೀಕಿಸಿದ್ದಾರೆ.
ಈ ಕುರಿತು ಭಾನುವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಬಿಜೆಪಿಯು ಬೀಜಿಂಗ್ ವಿಮಾನ ನಿಲ್ದಾಣದ ಚಿತ್ರವನ್ನು ಫೋಟೊಶಾಪ್ ಮಾಡಿ ನೊಯ್ಡಾ ವಿಮಾನ ನಿಲ್ದಾಣ ಎಂದು ಬಿಂಬಿಸಿರುವುದನ್ನು ಚೀನಾದ ಮಾಧ್ಯಮಗಳು ಬಯಲು ಮಾಡಿವೆ. ಅಭಿವೃದ್ಧಿ ಎಂದರೆ ಸುಳ್ಳು ಹೇಳುವುದು ಎಂದು ಬಿಜೆಪಿಯವರು ನಂಬಿದ್ದಾರೆ. ಚೀನಾ ದೇಶದ ಅಭಿವೃದ್ಧಿಯ ಚಿತ್ರಗಳನ್ನು ಪ್ರಕಟಿಸಿ, ಅದನ್ನು ತಾವೇ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿರುವುದು ನಗೆಪಾಟಲಿನ ಸಂಗತಿ’ ಎಂದಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿವೃದ್ಧಿ ಎಂದರೆ ಕೇವಲ ಹೆಸರು ಬದಲಾವಣೆ ಎಂದು ಭಾವಿಸಿದ್ದಾರೆ. ಅದಕ್ಕಾಗಿಯೇ ಬೀಜಿಂಗ್ ವಿಮಾನ ನಿಲ್ದಾಣದ ಹೆಸರನ್ನು ಉತ್ತರ ಪ್ರದೇಶ ಎಂದು ಬದಲಿಸಲು ಹೊರಟಂತಿದೆ. ಪ್ರಧಾನಿ ನರೇಂದ್ರ ಮೋದಿಯವರ ಫೋಟೊಶಾಪ್ ಅಭಿವೃದ್ಧಿ ತಂತ್ರದ ಆಯಸ್ಸು ಮುಗಿದಿದೆ. ಅವರು ಎಚ್ಚೆತ್ತುಕೊಂಡು ನಿಜವಾದ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ.