ವಿಜಯಪುರ: ನಾನು ಭೂ ಕಬಳಿಕೆ ಮಾಡಿದ್ದೇನೆ ಹಾಗೂ 19 ಕೋಟಿ ಹಣ ಪಡೆದಿದ್ದೇನೆ. ಅದರ ಲೆಕ್ಕ ನೀಡುತ್ತಿಲ್ಲ ಎಂದು ಕೆಲವರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಆ ವಿಡಿಯೊದಿಂದ ಮಠ, ಹಾಗೂ ಮಠದ ಭಕ್ತರಿಗೆ ತೀವ್ರ ನೋವುಂಟಾಗಿದೆ. ವಿಡಿಯೊ ಹರಿಬಿಟ್ಟುವರು ಯಾರೇ ಆಗಲಿ ನ. 19ರೊಳಗೆ ಸಾಕ್ಷ್ಯ ಸಮೇತ ರುಜುವಾತು ಪಡಿಸುವಂತೆ ಮಠದ ವತಿಯಿಂದ ನ. 11 ರಂದು ನೋಟಿಸ್ ಜಾರಿ ಮಾಡಲಾಗಿದೆ. ಯಾರು, ಯಾವಾಗ, ಎಲ್ಲಿ ನಗದು, ಚೆಕ್, ಡಿಡಿ ಹೀಗೆ ಯಾವುದರ ಮೂಲಕ ಹಣವನ್ನು ನೀಡಿದ್ದಾರೆ’ ಎಂದು ಸ್ಪಷ್ಟ ಪಡಿಸಬೇಕು ಎಂದು ಸಿರಿಗೆರೆಯ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸವಾಲೆಸೆದರು.
ಜಿಲ್ಲೆಯ ಉಚ್ಚಂಗಿದುರ್ಗದಲ್ಲಿ ಸ್ವಾಮೀಜಿ ಮಾತನಾಡಿದರು.
ಭಕ್ತರು ನಿರ್ಮಲ ಮನಸ್ಸಿನಿಂದ ನೀಡಿರುವ 5 ಕೋಟಿ ರೂಪಾಯಿ ಹಣ ಮಠದ ಖಾತೆಯಲ್ಲಿ ಈಗಲೂ ಇದೆ. ಅಲ್ಲದೇ ಭಕ್ತರು ನೀಡಿರುವ ಹಣದಲ್ಲಿಯೇ 48 ಕೋಟಿ ರೂಪಾಯಿ ವೆಚ್ಚದಲ್ಲಿ ನರ್ಸರಿ ಶಾಲೆಯನ್ನು ನಡೆಸುತ್ತಿರುವುದು ಮಠದ ಹೆಗ್ಗಳಿಕೆಯಾಗಿದೆ. ಕೇಳದೇ ನೀಡುವ ಭಕ್ತರು ರಾಜ್ಯಾದ್ಯಂತ ಇರುವಾಗ ಹಣದ ಅವಶ್ಯಕತೆ ನಮಗೇಕೆ?’ ಎಂದು ಪ್ರಶ್ನಿದ ಅವರು, ‘ಮಠದ ಆಗುಹೋಗುಗಳ ನೋಡುಕೊಳ್ಳುತ್ತಿದ್ದ ಸಿಬ್ಬಂದಿಯೊಬ್ಬರು ಮಠವನ್ನು ವಾಣಿಜ್ಯ ಕೇಂದ್ರವಾಗಿಸಲು ಮುಂದಾಗಿದ್ದರಿಂದ ಅವರನ್ನು ಮಠದಿಂದ ಹೊರದಬ್ಬಲಾಯಿತು. ಅಸ್ತಿತ್ವ ಕಳೆದುಕೊಂಡ ನಂತರ ಗುಂಪುಗಾರಿಕೆ ಮೂಲಕ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದರು.
‘ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಉನ್ನತ ದರ್ಜೆಯಲ್ಲಿ ಪಾಸಾದ ನಮಗೆ ದೊರಕಿದ ಸ್ಕಾಲರ್ಶಿಪ್ ಅನ್ನು ಕೂಡ ಗುರುಗಳ ಮಾರ್ಗದರ್ಶನದಿಂದಾಗಿ ಪೋಷಕರಿಗೆ ನೀಡಲಿಲ್ಲ. ಇನ್ನೂ ಮಠದ ಹಣ ದುರ್ಬಳಕೆ ಮಾಡಲು ಸಾಧ್ಯವೇ?’ ಎಂದು ಪ್ರಶ್ನಿಸಿದ ಅವರು, ‘42 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಎಲ್ಲೂ ಮಠಕ್ಕೆ ಕಪ್ಪು ಚಕ್ಕೆ ತಂದಿಲ್ಲ. ಸತ್ಯಾಸತ್ಯತೆ ಕೂಡಲೇ ಜನರಿಗೆ ತಿಳಿಯಲಿದೆ’ ಎಂದು ಹೇಳಿದರು.