ವಾಹ್ ತಾಜ್ ವಾಸ್ತವ ವಿಚಾರದ ಹೊಂದಿರುವ ವಿಡಂಬನಾತ್ಮಕ ನಾಟಕ. ನಮ್ಮ ಕಣ್ಣೆದುರು ಇರುವ ವ್ಯವಸ್ಥೆಯನ್ನು ಗೇಲಿ ಮಾಡುತ್ತಾ ಸಾಗುತ್ತದೆ.
ವ್ಯವಸ್ಥೆಯಲ್ಲಿ ಇರುವ ಭ್ರಷ್ಟಾಚಾರ ನಾಟದ ಮನಸ್ಸುಗಳಿಗೆ ಈ ನಾಟಕವೂ ನಾಟುವ ಸಾಧ್ಯತೆ ಕಡಿಮೆ.
ಪ್ರತಿ ತಿಂಗಳು ನಿಗದಿತ ವೇತನ ಬರುವ ಒಂದು ಕಂಫರ್ಟ್ ಝೋನ್‌ನಲ್ಲಿ ಇರುವವರಿಗೆ ಅಷ್ಟಾಗಿ ಭ್ರಷ್ಟಾಚಾರದ ಆಳ ತಟ್ಟಿರುವುದಿಲ್ಲ. ಅವರಿಗೆ ಅಧಿಕಾರಿಗಳ ಮಟ್ಟದಲ್ಲಿ ಕೆಲಸ ಆಗಬೇಕಿದ್ದರೆ ಇನ್‌ಫ್ಲುವೆನ್ಸ್ ಮೂಲಕ ಮಾಡಿಸಿಕೊಂಡಿರುತ್ತಾರೆ. ಇಲ್ಲವೇ ಸಲೀಸಾಗಿ ದುಡ್ಡುಕೊಟ್ಟು ಮಾಡಿಕೊಂಡಿರುತ್ತಾರೆ. ತಾವು ಬೇರೆಯವರ ಕೆಲಸ ಮಾಡಬೇಕಿದ್ದರೆ ಅದೇ ಮಾದರಿಯಲ್ಲಿ ಮಾಡಿಕೊಟ್ಟಿರುತ್ತಾರೆ. ಅಷ್ಟನ್ನೇ ದೊಡ್ಡ ಮಟ್ಟದ ಭ್ರಷ್ಟಾಚಾರ ಎಂದು ತಿಳಿದಿರುತ್ತಾರೆ. ಅದರ ಆಚೆಗಿನ ಯಾವ ಭ್ರಷ್ಟಾಚಾರದ ಅನುಭವವೂ ಅವರಿಗೆ ಇರುವುದಿಲ್ಲ.
ಶಹಜಹಾನ್ ತನ್ನ ಪ್ರೀತಿಯ ಮಡದಿ ಮಮ್ತಾಜ್ ನೆನಪಲ್ಲಿ ಈ ಕಾಲದಲ್ಲಿ ತಾಜ್ ಮಹಲ್ ಕಟ್ಟಲು ಹೊರಟರೆ ಹೇಗಿರಬಹುದು ಎಂಬುದೇ ಈ ನಾಟಕ ಎಂದು ಒಂದೇ ಮಾತಿನಲ್ಲಿ ನಾಟಕವನ್ನು ಪರಿಚಯಿಸಿಕೊಡಬಹುದು. ಆದರೆ ಭ್ರಷ್ಟತೆಯ ಆಳ ಅಗಲ ಅರ್ಥವಾಗಬೇಕಿದ್ದರೆ ವಾಹ್ ತಾಜ್ ನೋಡಬೇಕಾಗುತ್ತದೆ.
ದೇಶದ ಅನೇಕ ಸಮಸ್ಯೆಗಳಲ್ಲಿ ಎರಡನ್ನು ಪ್ರಮುಖವಾಗಿ ಗುರುತಿಸಲಾಗುತ್ತದೆ. ಜಾತಿ ತಾರತಮ್ಯ ಮೊದಲನೇಯದ್ದಾದರೆ ಎರಡನೇಯದ್ದೇ ಭ್ರಷ್ಟಾಚಾರ. ಈ ಎರಡೂ ಸಮಸ್ಯೆಗಳ ಜತೆಗೆ ಬದುಕುವುದು ಇಲ್ಲಿನ ಜನರಿಗೆ ರೂಢಿಯಾಗಿಬಿಟ್ಟಿದೆ. ಹಾಗಾಗಿ ಈ ಸಮಸ್ಯೆಗಳನ್ನು ಎತ್ತಿ ತೋರಿಸಿದರೂ ಬಹುತೇಕ ಮಂದಿಯ ಹೃದಯಕ್ಕೆ ಇಳಿಯುವುದಿಲ್ಲ. ಮನಸ್ಸು ಕಲಕುವುದಿಲ್ಲ. ದೇಶದ ಎರಡನೇ ಸಮಸ್ಯೆಯನ್ನು ಅನಾವರಣಗೊಳಿಸುವ ‘ವಾಹ್ ತಾಜ್’ ನಾಟಕವು ನೋಡಿದ ಬಳಿಕ ಅದರ ವಿಡಂಬನೆ ನಗು ತರಿಸಿದಷ್ಟೇ ಗಾಢವಾಗಿ ಮನಸ್ಸಿಗೆ ತಟ್ಟಿದರೆ ಅದು ನಾಟಕದ ಯಶಸ್ಸು ಮಾತ್ರವಲ್ಲ, ಇನ್ನೂ ಸಮಾಜದಲ್ಲಿ ಸೂಕ್ಷ್ಮತೆ, ಮಾನವೀಯತೆ ಬತ್ತಿ ಹೋಗಿಲ್ಲ ಎಂಬುದಕ್ಕೆ ಸಾಕ್ಷಿಯೂ ಆಗುತ್ತದೆ.
ಈ ನಾಟಕವನ್ನು ಉಡುಪಿಯ ರಿನ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಕಲಾವಿದರು ಸಮರ್ಥವಾಗಿ ಪ್ರದರ್ಶಿಸಿದ್ದಾರೆ.