ಈ ಜಗತ್ತಿನಲ್ಲಿ ಬಿಳಿಯರು ಮಾಡಿದ ತಾರತಮ್ಯ ಬಹಳ ದೊಡ್ಡದು. ಅಮೆರಿಕ, ಆಸ್ಟ್ರೇಲಿಯಾ ಸಹಿತ ಎಲ್ಲ ಕಡೆ ಅಲ್ಲಿನ ಮೂಲ ನಿವಾಸಿಗಳು ಈ ತಾರತಮ್ಯಕ್ಕೆ, ಹಿಂಸೆಗೆ, ಸಾವಿಗೆ ಒಳಗಾಗಿದ್ದಾರೆ. ಅದರಲ್ಲಿ ಭಾರಿ ಸಂಖ್ಯೆಗೆ ಒಳಗಾದವರು ಆಫ್ರೀಕನ್ನರು. ಇದು ಆಧುನಿಕ ಜಗತ್ತಿನ ಇತಿಹಾಸಕ್ಕೆ ಕಪ್ಪು ಚುಕ್ಕೆ. ಇನ್ನು ಭಾರತದಲ್ಲಿ ಇಲ್ಲಿನ ಬಿಳಿಯರು (ಮತ್ತೆ ಇಂಗ್ಲೆಂಡ್‌ನವರಲ್ಲ) ಎಂದು ಕರೆಸಿಕೊಂಡವರು ಮಾಡಿದ ತಾರತಮ್ಯವನ್ನು ಶಾಸ್ತ್ರಬದ್ಧಗೊಳಿಸಿದ್ದರು. ಭಾರತದಲ್ಲಿ ಬಣ್ಣದ ತಾರತಮ್ಯದ ಜತೆಗೆ ಜಾತಿ ತಾರತಮ್ಯ ಹೇಗೆ ಒಬ್ಬ ಮನುಷ್ಯನನ್ನು ಇನ್ನೊಬ್ಬ ಮನುಷ್ಯನು ಮನುಷ್ಯ ಎಂದು ಪರಿಗಣಿಸಲ್ಲ ಎಂಬುದು ಗೊತ್ತು…. ಇದೆಲ್ಲ ದೀರ್ಘ ಚರ್ಚೆಗೆ ಒಳಗಾಗಬೇಕಾದ ವಿಚಾರ. ಇಲ್ಲಿ ಕೆಳಗೆ ದಕ್ಷಿಣ ಆಫ್ರೀಕಾದ ವರ್ಣ ಭೇದ ನೀತಿ ಮತ್ತು ಮಕಾಯ್ ನಿಟಿನಿ ಅವರ ಸಾಧನೆಯನ್ನು ಹರೀಶ್ ಗಂಗಾಧರ್ ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ.
ಮಕಾಯ ನಿಟಿನಿ- ಕಪ್ಪು ಆದಿವಾಸಿ ಆಫ್ರಿಕನ್ ವೇಗಿಯಾಗಿದ್ದು- ವರ್ಣಬೇಧ ನೀತಿಯ ಹಲವು ಆಯಾಮಗಳು…
ನ್ಯೂಜಿಲ್ಯಾಂಡ್ ವಿರುದ್ದದ ಪಂದ್ಯಗಳು ಮುಗಿದೊಡನೆ ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾಕ್ಕೆ ಹೊರಡಲಿದೆ. ಅಲ್ಲಿ ಮೂರೂ ಟೆಸ್ಟ್ ಪಂದ್ಯಗಳನ್ನ ಭಾರತ ತಂಡ ಆಡಲಿದೆ. ಈಗಿನ ಕ್ರಿಕೆಟ್ ಅಭಿಮಾನಿಗಳಿಗೆ ದಕ್ಷಿಣ ಆಫ್ರಿಕಾಕದಲ್ಲಿ ನಿಮ್ಮ ನೆಚ್ಚಿನ ಆಟಗಾರ ಯಾರೆಂದು ಕೇಳಿದರೆ ತಕ್ಷಣ ಎಬಿಡಿ ಅಂತ ಉತ್ತರಿಸಬಹುದು. ನಮ್ಮ ಕಾಲೇಜು ದಿನಗಳಲ್ಲಿ ಲಾನ್ಸ್ ಕ್ಲುಸ್ನರ್ ಹಾಗು ಜಾಂಟಿ ರೋಡ್ಸ್ ನಮಗೆ ಅಚ್ಚುಮೆಚ್ಚು. ಆದರೆ ನನ್ನನ್ನು ಯಾರಾದರು ನಿಮ್ಮ ಸರ್ವಕಾಲಿಕ ನೆಚ್ಚಿನ ಸೌತ್ ಆಫ್ರಿಕನ್ ಕ್ರಿಕೆಟಿಗ ಯಾರೆಂದು ಈಗ ಕೇಳಿದರೆ, ಯಾವುದೇ ಸಂದೇಹವಿಲ್ಲದೆ ಮಕಾಯ ನಿಟಿನಿ ಅಂತ ಹೇಳುತ್ತೇನೆ. ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದಲ್ಲಾಡಿದ ಮೊದಲ ಕಪ್ಪು ಬಣ್ಣದ ಆಟಗಾರ ಈತ.
ಮಕಾಯ ನಿಟಿನಿಯ ಬದ್ದತೆ, ಆತನ ಶ್ರದ್ದೆ, ಬೌಲಿಂಗ್ನಲ್ಲಿ ಮಿಂಚಲೇಬೇಕೆಂಬ ಹಂಬಲದ ಕುರಿತಾಗಿ ಹಲವು ಕತೆಗಳಿವೆ. ಆತ ಪಂದ್ಯಕ್ಕೆ ಮುನ್ನ ತಂಗಿದ್ದ ಹೋಟೆಲ್ನಿಂದ ಕ್ರೀಡಾಂಗಣಕ್ಕೆ ತಂಡದ ಬಸ್ ಏರದೆ ಓಡಿಯೇ ಬರುತ್ತಿದ್ದನೆಂಬುದು ತುಂಬಾ ಕೇಳಿಬರುವ ಕುತೂಹಲಕಾರಿ ಕತೆ. ಈ ಕತೆ ಕಟ್ಟುಕತೆಯಲ್ಲದೆ ನಿಜವಾಗಿತ್ತು ಕೂಡ. ಆದರೆ ಮಕಾಯ ನಿಟಿನಿ ಟೀಂ ಬಸ್ ಹತ್ತದೆ ಹೋಟೆಲಿನಿಂದ ಕ್ರೀಡಾಂಗಣಕ್ಕೆ ಯಾಕೆ ಓಡಿಬರುತ್ತಿದ್ದ? ವಾಸ್ತವ ಬೇರೆಯೇ ಇತ್ತು.
ಬಸ್ ಏರಿ ಕೂತಾಗ ಮಕಾಯ ಪಕ್ಕದ ಸೀಟು ಖಾಲಿಯೇ ಉಳಿಯುತ್ತಿತ್ತು. ತಂಡದ ಉಳಿದ ಬಿಳಿಯರಾರು ಬಂದು ಮಕಾಯ ಪಕ್ಕ ಕೂರುತ್ತಿರಲಿಲ್ಲ! ಮಕಾಯ ತಿಂಡಿ ತಿನ್ನಲು ಎಲ್ಲರಿಗಿಂತ ಮೊದಲು ಹಾಜರಾಗುತ್ತಿದ್ದ. ಅಲ್ಲೂ ಕೂಡ ಈತನ ಪಕ್ಕದಲ್ಲಿ ಯಾರು ಬಂದು ಕೂರುತ್ತಿರಲಿಲ್ಲ. ತನ್ನ ದೇಶಕ್ಕಾಗಿ 101 ಟೆಸ್ಟ್ ಗಳನ್ನ ಆಡಿದ ಮಕಾಯ ಪಡೆದದ್ದು 390 ವಿಕೆಟ್ಗಳನ್ನ. ಸಂತಸ, ಅಪ್ಪುಗೆ, ನಗೆ ಎಲ್ಲ ಕ್ರೀಡಾಂಗಣದ ಒಳಗೆ. ಕ್ರೀಡಾಂಗಣದ ಹೊರಗೆ, ಡ್ರೆಸ್ಸಿಂಗ್ ರೂಂನಲ್ಲಿ, ಡೈನಿಂಗ್ ಹಾಲ್ನಲ್ಲಿ ವರ್ಣಭೇದದ ನಾವೆಲ್ಲರೂ ಒಂದೇ ಆದರೆ ನೀವು ಬೇರೆ ಎಂಬ ನೀತಿ ಹಾಗೆ ಉಳಿದಿತ್ತು(Seperate but equal.) ವರ್ಣಭೇದದ ಕಾಲ ಮುಗಿದಿತ್ತು ಆದರೆ ಬಿಳಿಯರ unconsiousನಲ್ಲಿ ಮಾತ್ರ ವರ್ಣಭೇದ ಆಳವಾಗಿ ಬೇರೂರಿತ್ತು. Unconscious biases die hard.
ಆಫ್ರಿಕಾದ ವರ್ಣಭೇದ ನೀತಿ ಕೊನೆಗೊಂಡಿದ್ದು 1994ರಲ್ಲಿ. ಆಫ್ರಿಕಾ ಡಚ್ಚರ ಮತ್ತು ಬ್ರಿಟಿಷರ ವಸಾಹತಾಗಿತ್ತು. ಬಿಳಿಯರಾದ ಈ ಯುರೋಪಿಯನ್ನರು ಸ್ಥಳೀಯರನ್ನು ಮೃಗಗಳಂತೆ ಕಂಡರು. ಬರಿ ಬಿಳಿಯ ವಸಾಹತುಶಾಯಿಗಳೇ ಇದ್ದ ನ್ಯಾಷನಲ್ ಪಾರ್ಟಿ 1948ರ ಚುನಾವಣೆ ಗೆದ್ದು ಎರಡೇ ವರ್ಷದಲ್ಲಿ ವರ್ಣಬೇಧ ನೀತಿ ಜಾರಿಗೆ ತಂದಿತು. ಕರಿಯರು ಮತ್ತು ಬಿಳಿಯರನ್ನ ಬೇರ್ಪಡಿಸಲು ಕಠಿಣ ಕಾನೂನುಗಳನ್ನ ಜಾರಿಗೆ ತರಲಾಯಿತು. ಬಿಳಿಯರ ಅಧಿಪತ್ಯ, “ಶ್ರೇಷ್ಠತೆ” ಎಲ್ಲರ ಮನದಲ್ಲಿ ಅಚ್ಚೋತ್ತಲಾಯಿತು. ನಗರಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲದ ಪ್ರದೇಶಗಳನ್ನ ಪ್ರತ್ಯೇಕವಾಗಿ ಕರಿಯರಿಗೆ ಮೀಸಲಿಡಲಾಯಿತು. ಅವರ ಚಲನವಲನಗಳ ಮೇಲೆ ನಿಗ ಇಡಲಾಯಿತು. ಕರಿಯರಿಗೆ ಪಾಸ್ ವಿತರಿಸಲಾಯಿತು. ಅವರು ಎಲ್ಲಿ ಹೋದರು ಪಾಸ್ ಹೊತ್ತೊಯ್ಬೇಕಿತ್ತು. ಸುಮಾರು 3.5 ಮಿಲಿಯನ್ ಕಪ್ಪು ಜನರನ್ನ ಅವರ ಮನೆಗಳಿಂದ, ಜಾಮೀನುಗಳಿಂದ ಹೊರದಬ್ಬಲಾಯಿತು. ಒಂದೆಡೆ ಕಪ್ಪುಜನರು ತಮ್ಮದೇ ದೇಶದಲ್ಲಿ ನಿರಾಶ್ರಿತರಾದರೆ ಬಿಳಿಯರು ಇಡಿ ದೇಶವನ್ನೇ ಆವರಿಸಿ ಶ್ರೀಮಂತರಾದರು. 1960ರ ಹೊತ್ತಿಗೆ ಈ ಅಮಾನವೀಯ ವರ್ಣಭೇದ ನೀತಿಯನ್ನ ವಿರೋಧಿಸಿದ ಕಪ್ಪು ಪ್ರತಿಭಟನಾಕಾರರನ್ನು ಬಿಳಿಯ ಪೊಲೀಸರು ಬೀದಿ ಬೀದಿಗಳಲ್ಲಿ ಕೊಲ್ಲುತ್ತಿದ್ದರು. ಶಾರ್ಪ್ ವಿಲ್ ನರಮೇಧದಲ್ಲಿ ಸುಮಾರು 69ಕಪ್ಪು ಮಂದಿ ಹತರಾಗಿ 180ಮಂದಿ ಗಾಯಗೊಂಡರು.
ಈ ಇತಿಹಾಸವೆಲ್ಲ ಬಾಲಕ ಮಕಾಯ ನಿಟಿನಿಗೆ ತಿಳಿದದ್ದು ಪ್ರೀತಿಯ ಸಾಕು ನಾಯಿ ಬೀಕೋ ಸತ್ತಾಗ. ಬೀಕೋ ಮೇಲೆ ಕಾರು ಹರಿದಿತ್ತು. ಅವ್ವ ಸಂತೈಸಲಾಗದಷ್ಟು ಅಳುತ್ತಿದ್ದಳು. ಮಕಾಯಗೆ ಗೊಂದಲ ಮತ್ತು ಅಚ್ಚರಿ. ಈ ಮೊದಲು ಅವರ ಮನೆಯ ಹಲವು ನಾಯಿಗಳು ಇದೇ ರೀತಿ ಸತ್ತಿದ್ದವು ಆದರೆ ಆ ನಾಯಿಗಳು ಸತ್ತಾಗ ಒಂದು ಹನಿ ಕಣ್ಣೀರು ಹಾಕದ ಅವ್ವ ಇವತ್ಯಾಕೆ ಈ ಪರಿ ಅಳುತಿದ್ದಾಳೆಂದು ಮಕಾಯಗೆ ಸ್ವಲ್ಪ ದಿನಗಳ ನಂತರ ತಿಳಿಯಿತು. ವರ್ಣಭೇದದ ವಿರುದ್ದ ಸಿಡಿದೆದ್ದ ಸ್ಟೀವ್ ಬೀಕೋ, ಕಪ್ಪು ಪ್ರಜ್ಞೆ ಚಳುವಳಿ ಶುರು ಮಾಡಿದ ವೀರ, ಕರಿಯರೆ ಬಿಳಿಯರಿಗೆ ಅಧೀನರಾಗಿ ಉಳಿಯಬೇಡಿ, ಆತ್ಮಗೌರವ ಬೆಳಿಸಿಕೊಳ್ಳಿ, ಓದಿ, ಹೋರಾಡಿ, ಒಂದಾಗಿಯೆಂದು ಅಂಬೇಡ್ಕರರಂತೆ ಕರೆ ನೀಡಿದ ಕೆಚ್ಚೆದೆಯ ಧೀರ. ಬಿಳಿಯರು ಬೀಕೋವನ್ನ ಬಂಧಿಸಿ ಚಿತ್ರ ವಿಚಿತ್ರ ಹಿಂಸೆಗೆ ಗುರಿಪಡಿಸಿ ಲಾಕ್ ಅಪ್ನಲ್ಲೆ ಕೊಂದುಬಿಟ್ಟರು. ಬೀಕೋ ನೆನಪಲ್ಲಿ ಅವ್ವ ನಾಯಿಗೆ ಆತನ ಹೆಸರನ್ನೇ ಇಟ್ಟಿದ್ದಳು. ಮಕಾಯ ಆಫ್ರಿಕಾದ ಕರಾಳ ಇತಿಹಾಸ ಕಲಿತದ್ದು ಹೀಗೆ!
ಇಡಿಯ ಪ್ರಪಂಚ ಕಪ್ಪು ಜನರ ನರಮೇಧಕ್ಕೆ ಸಾಕ್ಷಿಯಾಗುತ್ತಾ ಕೈ ಕಟ್ಟಿ ಕುಳಿತಿದ್ದ ಕಾಲದಲ್ಲಿ, ರೊನಾಲ್ಡ್ ರೀಗನ್, ಮಾರ್ಗರೆಟ್ ಥ್ಯಚರರಂತಹ ನಾಯಕರು ವರ್ಣಭೇದ ನೀತಿಗೆ ಸಮ್ಮತಿಯಿತ್ತಾಗ, ಕಪ್ಪು ಜನರ ನೋವಿಗೆ ಸ್ಪಂದಿಸಿದ್ದು, ಅವರ ಪ್ರತಿಭಟನೆಗೆ ಬೆಂಬಲಿಸಿದ್ದು ಕ್ರೀಡಾ ಲೋಕ ಮಾತ್ರ. ಫಿಫಾ-ಫುಟ್ಬಾಲ್, ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್, ಇಂಟರ್ ನ್ಯಾಷನಲ್ ರಗ್ಬಿ ಬೋರ್ಡ್, ಇಂಟರ್ ನ್ಯಾಷನಲ್ ಒಲಿಂಪಿಕ್ ಕಮಿಟೀಗಳು ವರ್ಣಭೇದ ನೀತಿಯನ್ನ ಖಂಡಿಸಿ, ದಕ್ಷಿಣ ಆಫ್ರಿಕಾ ತಂಡವನ್ನ ಬಹಿಸ್ಕರಿಸಿದವು. ವರ್ಣಭೇದ ನೀತಿಯೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್ಲರ ಕೆಂಗಣ್ಣಿಗೆ ಗುರಿಯಾಯಿತು. ಬಿಳಿಯರ ನ್ಯಾಷನಲ್ ಪಾರ್ಟಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ನ ಮಂಡೇಲರನ್ನ ಜೈಲಿಗಟ್ಟಿ ಮತ್ತಷ್ಟು ವರ್ಣಭೇದ ನೀತಿ ಚರ್ಚೆಗೆ ಗ್ರಾಸವಾಗುವಂತೆ ಮಾಡಿಕೊಂಡಿತು.
ಇಂತಹ ಸಮಯದಲ್ಲೂ ದಕ್ಷಿಣ ಆಫ್ರಿಕಾದ ಬಿಳಿಯರು ಕೆಲ ಕ್ರೀಡಾ ತಂಡಗಳಿಗೆ ಆಮಿಷವೊಡ್ಡಿ ತನ್ನ ದೇಶದಲ್ಲಿ ಆಡುವಂತೆ ಆಹ್ವಾನ ನೀಡಿತು. ಹಣದಾಸೆಗೆ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ದೇಶಕ್ಕೆ ಭೇಟಿನೀಡಿ ವರ್ಣಭೇದ ನೀತಿ ಉತ್ತುಂಗದಲ್ಲಿದ್ದಾಗ ಪಂದ್ಯಗಳನ್ನಾಡಿತು. ಇಂಗ್ಲೆಂಡ್ನ ದಂತಕತೆಗಳಾದ ಗ್ರಹಾಂ ಗೂಚ್, ಮೈಕ್ ಗ್ಯಾಟಿಂಗ್, ಬಾಬ್ ವೂಲ್ಮರ್, ಜೆಫ್ ಬಾಯ್ಕಾಟ್ ವರ್ಣಭೇದ ನೀತಿ ವಿರೋಧಿಸಿ ಪಂದ್ಯಗಳನ್ನ ಆಡದಿರುವುದು ಸರಿಯಾದ ನೈತಿಕ ನಿಲುವೆಂದು ಎಂದೂ ಅನ್ನಿಸಲಿಲ್ಲ. ಇವರೆಲ್ಲ ಮುಂದೆ ದೊಡ್ಡ ದೊಡ್ಡ ಹುದ್ದೆಗಳನ್ನ ಅಲಂಕರಿಸಿ ವಿಲಾಸಿ ಜೀವನ ನಡೆಸಿದರು.
ಅಚ್ಚರಿ ಎಂಬಂತೆ ಆಗಿನ ಕಾಲದ ಕ್ರಿಕೆಟಿಂಗ ದೈತ್ಯರಾದ ವೆಸ್ಟ್ ಇಂಡೀಸ್ ತಂಡ ದಕ್ಷಿಣ ಆಫ್ರಿಕಾದಲ್ಲಿ ಪಂದ್ಯವನ್ನಾಡಲು ಒಪ್ಪಿತು ಕೂಡ. ಅವರಿಗೂ ಹಣದ ಆಮಿಷವೊಡ್ದಲಾಯಿತು. ಅಷ್ಟೇನೂ ಪ್ರಖ್ಯಾತರಲ್ಲದ ಕಪ್ಪು ಆಟಗಾರರು ಪಂದ್ಯಗಳನ್ನಾಡಿದರು. ಆದರೆ ಅವರು ತಮ್ಮ ಊರುಗಳಿಗೆ ವಾಪಸ್ಸಾದಾಗ ಅವರನ್ನ ಸ್ಥಳಿಯರು ತಿರಸ್ಕರಿಸಿದರು. ಬಹಳಷ್ಟು ಆಟಗಾರರು ಮಾನಸಿಕ ಖಿನ್ನತೆಗೊಳಗಾಗಿ ಮಾದಕ ವ್ಯಸನಿಗಳಾಗಿ ಮೃತರಾದರು! ಆತ್ಮಸಾಕ್ಷಿ ಇದ್ದವರ ಅಂತ್ಯ ಹೀಗೆಯೇ.
ವರ್ಣಭೇದ ನೀತಿಯ ಕರಾಳ ದಿನಗಳು ಕಳೆದ ನಂತರ ಆಫ್ರಿಕಾದಲ್ಲಿ ಟ್ರಾನ್ಸ್ ಫಾರ್ಮ್ ಮೇಷನಲ್ ಚಾರ್ಟರ್ ಅನ್ನು ಜಾರಿ ತರಲಾಯಿತು. ಈ ಚಾರ್ಟರ್ ಪ್ರಕಾರ ಎಲ್ಲಾ ಕ್ರೀಡಾ ತಂಡಗಳಲ್ಲೂ, ಕಚೇರಿಗಳಲ್ಲೂ ಇಂತಿಷ್ಟು ಕಪ್ಪು ವರ್ಣದವರನ್ನ ಸೇರಿಸಿಕೊಳ್ಳಲೇಬೇಕೆಂಬ ನೀತಿ ಜಾರಿಗೆ ಬಂತು. ಈ ಚಾರ್ಟರ್ ಸದುದ್ದೇಶದ್ದೇ ಆಗಿದ್ದರು, ಈ ಚಾರ್ಟರ್ ಪಾಸಿಟಿವ್ ತಾರತಮ್ಯಕ್ಕೆ ದಾರಿ (positive Discrimination) ಮಾಡಿಕೊಡುತ್ತದೆ ಎಂದು ಮಕಾಯ ವಾದಿಸಿದ. ಕ್ಷಮತೆಯಿಲ್ಲದೆ ದೇಶದ ತಂಡಕ್ಕೆ ಮೀಸಲಾತಿ ಮೇಲೆ ಆಯ್ಕೆಯಾಗಿ ಅಲ್ಲಿ ಪ್ರದರ್ಶನ ಕಳಪೆಯದ್ದಾದಾದರೆ ಕಪ್ಪು ವರ್ಣದವರು ಯೋಗ್ಯತೆಯಿಲ್ಲದವರು ಎಂಬ ಕಟ್ಟು ಕತೆಗೆ ಇನ್ನಷ್ಟು ಪುಷ್ಠಿ ಸಿಕ್ಕಹಾಗಾಗುತ್ತದೆ ಎಂಬುದು ಮಕಾಯ ಅನಿಸಿಕೆ. ಆತನ ಅನಿಸಿಕೆಯನ್ನ ಅಂಗ್ಲ ಭಾಷೆಯಲ್ಲಿಯೇ ಒಮ್ಮೆ ಓದಿಬಿಡಿ.
(Discrimination, Positive or negative- to my mind does not work. What if the Black Person who gets picked purely because of the colour of his or her skin, rather than his or her ability, is shown up to be hopelessly out of their depth? And this goes for any industry- not just sport. It is counterproductive. If you start filling positions in sport, business, industry or whatever because you need to tick a box based on ethnicity, gender or age, instead of employing the best person for the job, you don’t solve a problem, you create one. In fact, you create lots of problems. For a start that person might not be capable of doing the job and, in a high- profile area like sport, that person is embarrassed. How is that good for inspiring someone or being a role model? It will also embolden the racists who can stoke resentment, arguing, ‘told you they shouldn’t be there’ or shouting, ‘Look, they’re taking our jobs and they can’t do them.’)
ಆಫ್ರಿಕಾದ ಕೇಪ್ ಪ್ರಾಂತ್ಯದಲ್ಲಿನ ಸಣ್ಣ ಹಳ್ಳಿಯಲ್ಲಿ ಹುಟ್ಟಿದ ದನ ಕಾಯುವ ಹುಡುಗ ಮಕಾಯ. ಹದಿನೈದನೆ ವಯಸ್ಸಿನಲ್ಲಿ ಕ್ರಿಕೆಟ್ ಟ್ಯಾಲೆಂಟ್ ಸ್ಕೌಟ್ಸ್ ಒಂದು ಈತನನ್ನು ಗುರುತಿಸಿತು. ಅಲ್ಲಿಂದ ಮಕಾಯ ಜೀವನ ಬದಲಾಯಿತು. ಮುಂದೆ ಕ್ರಿಕೆಟ್ ಕಾರ್ಯಕ್ರಮ ಹಾಗು ತರಬೇತಿ ಹೆಸರಾದ ಕಿಂಗ್ ವಿಲ್ಲಿಯಮ್ಸ್ ನಗರದ ಡೇಲ್ ಕಾಲೇಜಿಗೆ ಕಳಿಸಲಾಯಿತು. ಅಲ್ಲಿ ಆತನಿಗೆ ಇಂಗ್ಲಿಷ್ ಅರ್ಥವಾಗದು ಆದರೆ ಅಲ್ಲೂ ಛಲ ಬಿಡದೆ ತನ್ನ ಪ್ರತಿಭೆ ಮೆರೆದ ಮಕಾಯ. ಹೀಗೆ ಸಣ್ಣ ವಯಸ್ಸಿನಿಂದಲ್ಲೇ ಹೆಚ್ಚು ಹೆಚ್ಚು ಶೋಷಿತರಿಗೆ ಅವಕಾಶ ಕಲ್ಪಿಸಿಕೊಡದೆ ಉನ್ನತ ಹುದ್ದೆಗಳಲ್ಲಿ, ಕ್ರೀಡೆಗಳಲ್ಲಿ ಅವಕಾಶಕೊಟ್ಟು ಅವಮಾನ ಮಾಡುವುದು ಬೇಡವೆನ್ನುವುದು ಮಕಾಯ ವಾದ.
ನನ್ನ ಮೈಬಣ್ಣ ಕಪ್ಪು, ನನಗೆ ಬಿಳಿಯರಷ್ಟೇ ಪ್ರತಿಭೆ ಇದೆ. ಅವಕಾಶ ಸಿಕ್ಕರೆ ನನ್ನ ಪ್ರತಿಭೆಯನ್ನ ಸಾಬಿತು ಪಡಿಸುವೆ ಆದರೆ ನಾನು ಕಪ್ಪು ಹುಡುಗನೆಂದು ಅನುಕಂಪದಿಂದ ಬಿಟ್ಟಿ ಕೊಟ್ಟ ಅವಕಾಶ ಬೇಡ. ಯಾರ ಹಂಗಿನಲ್ಲೂ ನಾ ಬದುಕಲಾರೆ, ಆತ್ಮ ಗೌರವ ನನಗೆ ಮುಖ್ಯ, ಅರ್ಹತೆಯಿಂದಲೇ ರಾಷ್ಟೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದೇನೆ ಎಂದು ಮತ್ತೆ ಮತ್ತೆ ಸಾಬೀತು ಮಾಡಲು 101 ಟೆಸ್ಟ್ ಆಡಿದ ಕ್ರಿಕೆಟಿಗ ಮಕಾಯ ನಿಟಿನಿ ನನಗೆ ನಿಜವಾದ ಸ್ಪೂರ್ತಿ.
- ಹರೀಶ್ ಗಂಗಾಧರ್