ದಾವಣಗೆರೆ: ಮಕ್ಕಳಾಗಲು ಔಷಧ ಕೊಡುವುದಾಗಿ ನಂಬಿಸಿ ಯುವಕನೊಬ್ಬ ನ್ಯಾಮತಿಯ ದಂಪತಿಯಿಂದ ಹಣ ಪಡೆದು ವಂಚಿಸಿದ್ದಾನೆ
ನ್ಯಾಮತಿ ತಾಲ್ಲೂಕು ರಾಮೇಶ್ವರ ಗ್ರಾಮದ ಗೌಡಪ್ಲರ ಚಂದ್ರಪ್ಪ ಮತ್ತು ಚನ್ನಮ್ಮ ವಂಚನೆಗೊಳಗಾದ ದಂಪತಿ. ಮದುವೆಯಾಗಿ 9 ವರ್ಷಗಳಾದರೂ ಮಕ್ಕಳಾಗದೇ ಇರುವ ಬಗ್ಗೆ ಮಾಹಿತಿ ಪಡೆದ ಯುವಕ ಅವರ ಮನೆಗೆ ತೆರಳಿ ಸ್ಥಳೀಯ ಅಂಗನವಾಡಿ ಶಿಕ್ಷಕಿ ಹಾಗೂ ಇತರ ಮಾಹಿತಿಗಳನ್ನು ತಿಳಿಸಿದ್ದ.
ಬಂಜೆತನ ನಿವಾರಣೆಗಾಗಿ ಆರೋಗ್ಯ ಇಲಾಖೆಯಿಂದ ಶಿವಮೊಗ್ಗ, ಮಾಚೇನಹಳ್ಳಿಗಳಲ್ಲಿ ಕ್ಯಾಂಪ್ ಇರುತ್ತದೆ. ಪ್ರತಿ ತಿಂಗಳು ಮಾಹಿತಿ ಪಡೆಯಲು ಇಲಾಖೆಯವರು ಬರುತ್ತಾರೆ ಎಂದು ತಿಳಿಸಿ, ಅವರ ಬಳಿ ಇದ್ದ ಹಳೆಯ ಆರೋಗ್ಯ ದಾಖಲೆಗಳನ್ನು ಪರಿಶೀಲಿಸಿದ ಹಾಗೆ ಮಾಡಿದ. ದಂಪತಿಗೆ ಮಕ್ಕಳಾಗದಿರುವುದಕ್ಕೆ ಆರೋಗ್ಯ ಸಮಸ್ಯೆಗಳು ಇವೆ ಎಂದು ಹೇಳಿ ನಂಬಿಸಿದ. ನಂತರ, ‘ಈಗ ನೀವು 15 ಸಾವಿರ ರೂಪಾಯಿ ಕೊಟ್ಟು ಹೆಸರು ನೊಂದಾಯಿಸಬೇಕು, ನೀವು ಗರ್ಭಿಣಿಯಾದ ನಂತರ ನೀವು ಕಟ್ಟಿರುವ ಹಣ ವಾಪಸ್ ಬರುತ್ತದೆ ಎಂದು ಹೇಳಿದ. ಇದನ್ನು ನಂಬಿ ನಾವು 15,000 ರೂಪಾಯಿ ಕೊಟ್ಟೆವು. ಹಣ ಪಡೆದು ಹೋದ ನಂತರ ಅವರ ಮೊಬೈಲ್‌ಗೆ ಕರೆ ಮಾಡಿದರೆ ಸ್ವಿಚ್ಡ್ ಆಫ್ ಆಗಿತ್ತು. ಇದರಿಂದ ನಮಗೆ ಅನುಮಾನ ಬಂತು’ ಎಂದು ದಂಪತಿ ತಿಳಿಸಿದ್ದಾರೆ.
ಸುಮಾರು 45 ವರ್ಷದ ಕುಮಾರ ಎಂಬ ಹೆಸರಿನ ಈ ವ್ಯಕ್ತಿ, ಕಪ್ಪು ಬಣ್ಣದವರಾಗಿದ್ದು, ಕನ್ನಡಕ ಧರಿಸಿದ್ದರು. ಪಲ್ಸ್‌ರ್ ಬೈಕ್‌ನಲ್ಲಿ ಬಂದಿದ್ದು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದರು. ಕೂಲಿಯಿಂದ ಜೀವನ ಮಾಡುತ್ತಿರುವ ನಾವು ಮೋಸ ಹೋದಂತೆ ಬೇರೆಯವರು ಮೋಸ ಹೋಗಬಾರದು ಎಂದು ದಂಪತಿ ತಿಳಿಸಿದರು.