ಹುಬ್ಬಳ್ಳಿ: ಮತಾಂತರ ನಿಷೇಧ ಮಸೂದೆಗೆ ಹಿನ್ನಡೆಯಾಗಿಲ್ಲ. ವಿಧಾನಪರಿಷತ್ ನಲ್ಲಿ ನಮಗೆ ಅಗತ್ಯ ಬೆಂಬಲವಿಲ್ಲ. ಈ ಬಗ್ಗೆ ಸ್ಪಷ್ಟತೆ ಇದೆ. ಹಾಗಾಗಿ, ಮತಾಂತರ ನಿಷೇಧ ಮಸೂದೆಯನ್ನು ಮಂಡಿಸಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಮೂರ್ನಾಲ್ಕು ಸದಸ್ಯರು ಅಧಿವೇಶನಕ್ಕೆ ಗೈರಾಗಿದ್ದರು. ಅವರು ಬಂದಿದ್ದರೆ ಮಸೂದೆ ಮಂಡಿಸಿ ಪಾಸ್ ಮಾಡಿಸುವ ಆಲೋಚನೆ ನಮ್ಮದಾಗಿತ್ತು. ಅವರನ್ನು ಕರೆತರಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಹಾಗಾಗಿ, ನ್ಯಾಯಸಮ್ಮತವಾಗಿ ಮುಂದಿನ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಿದ್ದೇವೆ ಎಂದರು.
ಮಿತಿ ಮೀರಿದ ವರ್ತನೆ:
ಪ್ರತಿಪಕ್ಷದವರು ಹೀಗೆಯೇ ಆಗಬೇಕು ಎಂಬ ಹಠದ ಧೋರಣೆಯಿಂದ, ಸಭಾಪತಿ ಸ್ಥಾನದ ಘನತೆ ಮರೆತು, ಬಸವರಾಜ ಹೊರಟ್ಟಿ ಅವರೊಂದಿಗೆ ಮಿತಿಮೀರಿ ವರ್ತಿಸಿದ್ದಾರೆ. ಇದು ಹೊರಟ್ಟಿ ಅವರಿಗೆ ನೋವುಂಟು ಮಾಡಿದ್ದರಿಂದಾಗಿ, ರಾಜೀನಾಮೆಗೂ ಅವರು ಮುಂದಾದರು. ನಾನು ಅವರನ್ನು ಸಮಾಧಾನಪಡಿಸಿದೆ. ಬಳಿಕ, ಪ್ರತಿಪಕ್ಷಗಳ ನಾಯಕರು ವಿಷಾದ ವ್ಯಕ್ತಪಡಿಸಿದರು. ಸದನದ ಸಮಯ ಎಲ್ಲರದ್ದು ಎಂದು ಅರಿತು ನಡೆದುಕೊಂಡರೆ, ಇಂತಹ ಘಟನೆಗಳಿಗೆ ಆಸ್ಪದವಿರುವುದಿಲ್ಲ ಎಂದರು.
ಚರ್ಚಿಸಿ ತೀರ್ಮಾನ:
ಒಮೈಕ್ರಾನ್ ದೇಶದಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರ, ಕೇರಳ ಹಾಗೂ ತಮಿಳುನಾಡಿನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದು ರಾಜ್ಯದ ಆತಂಕ ಹೆಚ್ಚಿಸಿದೆ. ಒಮೈಕ್ರಾನ್ ತಡೆಗೆ ಈಗ ಕೈಗೊಂಡಿರುವ ಕ್ರಮಗಳ ಜೊತೆಗೆ, ಮತ್ತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಬೂಸ್ಟರ್ ಡೋಸ್ ನೀಡುವ ಕುರಿತು ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.