ಸಿವನಿ: ಮಧ್ಯಪ್ರದೇಶದ ಸಿವನಿ ಜಿಲ್ಲೆಯಲ್ಲಿ 16 ವರ್ಷದ ಬಾಲಕಿಯ ಮೇಲೆ ಚಿರತೆ ದಾಳಿ ನಡೆಸಿ, ಹತ್ಯೆಗೈದಿದೆ’ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು.
ಮಧ್ಯಪ್ರದೇಶದ ಸಿವನಿ ಜಿಲ್ಲೆಯಲ್ಲಿ 16 ವರ್ಷದ ಬಾಲಕಿಯನ್ನುಆಕೆಯ ತಂದೆಯ ಕಣ್ಣೆದುರಲ್ಲೇ ಚಿರತೆಯೊಂದು ಕಚ್ಚಿ ಕೊಂದಿದೆ. ಈ ಘಟನೆಯು ಪಾಂಡಿವಾಡ ಗ್ರಾಮದ ಬಳಿಯಿರುವ ಕಾನ್ಹಿವಾಡ ಅರಣ್ಯ ಪ್ರದೇಶದಲ್ಲಿ ಸಂಭವಿಸಿದೆ.
ಬಾಲಕಿ ರವೀನಾ ಯಾದವ್ ತನ್ನ ತಂದೆಯೊಂದಿಗೆ ಜಾನುವಾರುಗಳನ್ನು ಮೇಯಿಸುವುದಕ್ಕಾಗಿ ದಟ್ಟ ಅರಣ್ಯಕ್ಕೆ ಪ್ರವೇಶಿಸಿದ್ದಳು. ಆಗ ಚಿರತೆಯು ಹಿಂದಿನಿಂದ ಬಾಲಕಿಯ ಮೇಲೆ ದಾಳಿ ನಡೆಸಿ, ಆಕೆಯ ಕುತ್ತಿಗೆ ಹಿಡಿದುಕೊಂಡಿತು’ ಎಂದು ಅರಣ್ಯ ರಕ್ಷಕ ಯೋಗೀಶ್ ಪಟೇಲ್ ಸುದ್ದಿಸಂಸ್ಥೆಗೆ ತಿಳಿಸಿದರು.
ಜತೆಗೇ ಇದ್ದ ರವೀನಾ ಅವರ ತಂದೆ ಚಿರತೆಗೆ ದೊಣ್ಣೆಯಿಂದ ಹೊಡೆದು ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ, ಆಗ ಚಿರತೆ ಅವರ ಮೇಲೆ ಸಹ ದಾಳಿ ಮಾಡಿದೆ. ಸುತ್ತಮುತ್ತಲಿನ ಜನ ಘಟನಾ ಸ್ಥಳದಲ್ಲಿ ಸೇರುತ್ತಿದ್ದಂತೆ ಚಿರತೆಯು ಬಾಲಕಿಯ ದೇಹವನ್ನು ಅಲ್ಲಿಯೇ ಬಿಟ್ಟು, ಓಡಿ ಹೋಯಿತು’ ಎಂದು ಅವರು ಮಾಹಿತಿ ನೀಡಿದರು.