ಹಾವೇರಿ: ಅಡುಗೆ ಅನಿಲ ಸೋರಿಕೆಯಿಂದಾಗಿ ರಾಣೆಬೆನ್ನೂರು ತಾಲ್ಲೂಕಿನ ಹರನಗಿರಿ ಗ್ರಾಮದ ಪರಮೇಶಪ್ಪ ಹೊಳಿಶಿವಪ್ಪ ಕಾಟೇನಹಳ್ಳಿ ಎಂಬುವರಿಗೆ ಸೇರಿದ ತಗಡು ಹಾಗೂ ನೆರೆಕೆಯಿಂದ ಕೂಡಿದ ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಸಂಪೂರ್ಣ ಸುಟ್ಟ ಘಟನೆ ಮಂಗಳವಾರ ನಡೆದಿದೆ.
ಕೂಡಲೇ ಸ್ಥಳಕ್ಕೆ ಬಂದ ಅಗ್ನಿ ಶಾಮದ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಚಪ್ಪರ ಹಾಗೂ ನೆರೆಕೆಯಿಂದ ಕೂಡಿದ ಮನೆಯಲ್ಲಿದ್ದ ಪಾತ್ರೆ, ಪಡಗ, ದವಸ ಧಾನ್ಯ, ಬಟ್ಟೆ ಬರೆ, ಟಿ.ವಿ, ತಗಡುಗಳು ಸಂಪೂರ್ಣ ಸುಟ್ಟಿವೆ. ಅಂದಾಜು ₹ 5 ಲಕ್ಷಕ್ಕೂ ಹೆಚ್ಚು ಹಾನಿ ಸಂಭವಿಸಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ. ಶಾಸಕ ಅರುಣಕುಮಾರ ಪೂಜಾರ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ₹ 30 ಸಾವಿರ ಸಹಾಯ ಧನ ನೀಡಿದರು. ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವದಾಗಿ ಭರವಸೆ ನೀಡಿದ್ದಾರೆ.
ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಗ್ರಾಮಪಂಚಾಯಿತಿ ಅಧ್ಯಕ್ಷ ಬಸವರಾಜ ಮೇಲ್ಮುರಿ, ಗ್ರಾಮೀಣ ಠಾಣೆ ಪಿಎಸ್‌ಐ ವಸಂತ, ಮುರುಗೇಶ ಕೋರಿಶೆಟ್ಟರ, ಪವನಕುಮಾರ ಮಲ್ಲಾಡದ, ಕಂದಾಯ ಅಧಿಕಾರಿ ವಾಗೀಶ ಮಳೇಮಠ ಇದ್ದರು.